Friday, November 22, 2024
Homeರಾಜಕೀಯ | Politicsಚುನಾವಣಾ ರಣತಂತ್ರ ಹೆಣೆಯಲು ಸಿಎಂ-ಡಿಸಿಎಂ ಸರಣಿ ಸಭೆ

ಚುನಾವಣಾ ರಣತಂತ್ರ ಹೆಣೆಯಲು ಸಿಎಂ-ಡಿಸಿಎಂ ಸರಣಿ ಸಭೆ

ಬೆಂಗಳೂರು,ಏ.5- ಲೋಕಸಭಾ ಚುನಾವಣೆಯ ಅಖಾಡದಲ್ಲಿ ನಾಳೆಯಿಂದ ಪ್ರಚಾರ ಆರಂಭಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಇಂದು ಸರಣಿ ಸಭೆಗಳನ್ನು ನಡೆಸುವ ಮೂಲಕ ಚುನಾವಣಾ ರಣತಂತ್ರಗಳನ್ನು ಚರ್ಚಿಸಿದ್ದಾರೆ. ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಒಂದರ ಮೇಲೊಂದರಂತೆ 6 ಸಭೆಗಳನ್ನು ನಡೆಸಿದ್ದಾರೆ.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ಎಲ್ಲಾ ಮುಖಂಡರ ಜೊತೆ ಮಹತ್ವದ ಸಭೆ ನಡೆದಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳ ಮುಖಂಡರು ಭಾಗವಹಿಸಿದ್ದರು.

ಈಗಾಗಲೇ ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳ ಪ್ರಮುಖರ ಜೊತೆ ಸಭೆ ನಡೆಸಿರುವ ಕೈ ಕಲಿಗಳು ಎರಡನೇ ಹಂತದ ಚುನಾವಣಾ ರಣಕಣದಲ್ಲೂ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಪಕ್ಷದ ಮುಖಂಡರಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಪ್ರಚಾರ ಸಮಿತಿಯ ಅಧಿಕಾರ ಸ್ವೀಕಾರ ಸಮಾರಂಭ ನಡೆದಿದೆ.ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ಗೃಹಲಕ್ಷ್ಮಿ ಮತ್ತು ಶಕ್ತಿಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮಹಿಳೆಯರಿಗಾಗಿ ರೂಪಿಸಲಾಗಿದೆ. ಕೋಟ್ಯಂತರ ಮಹಿಳೆಯರು ಇದರ ಪ್ರಯೋಜನ ಪಡೆದಿದ್ದಾರೆ.

ಅವರುಗಳೊಂದಿಗೆ ಸಂಪರ್ಕ ಸಾಸಿ ಮತಗಳನ್ನಾಗಿ ಪರಿವರ್ತಿಸುವ ಹೊಣೆಗಾರಿಕೆ ಮಹಿಳಾ ಪದಾಧಿಕಾರಿಗಳ ಮೇಲಿದೆ ಎಂದು ಉಭಯ ನಾಯಕರು ಸೂಚನೆ ನೀಡಿದ್ದಾರೆ.ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಕ್ಷೇತ್ರಗಳು ಹೆಚ್ಚು ಗಮನ ಸೆಳೆದಿವೆ.

ಇವುಗಳ ಪೈಕಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಹಾಸನ ಲೋಕಸಭಾ ಕ್ಷೇತ್ರದ ನಾಯಕರ ಜೊತೆಗೆ, ಬಳಿಕ ಬೆಂಗಳೂರು ನಗರ ಕೇಂದ್ರ ಲೋಕಸಭಾ ಕ್ಷೇತ್ರದ ನಾಯಕರ ಜೊತೆ ಸಮಾಲೋಚನೆ ನಡೆಸಿ ಹೊಂದಾಣಿಕೆಯ ಸೂತ್ರ ಸಿದ್ಧಪಡಿಸುತ್ತಿದ್ದಾರೆ.

ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಸ್ಥಳೀಯ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಗೊಂದಲವನ್ನು ಸರಿಪಡಿಸಲು ರಾಜ್ಯದ ವರಿಷ್ಠರೇ ಮುಂದಾಗಿದ್ದಾರೆ.

RELATED ARTICLES

Latest News