Friday, May 10, 2024
Homeರಾಜ್ಯಪ್ರತಿಪಕ್ಷಗಳ ಹೋರಾಟದಲ್ಲಿ ಜನರ ಹಿತಾಸಕ್ತಿ ಇಲ್ಲ : ಸಿದ್ದರಾಮಯ್ಯ

ಪ್ರತಿಪಕ್ಷಗಳ ಹೋರಾಟದಲ್ಲಿ ಜನರ ಹಿತಾಸಕ್ತಿ ಇಲ್ಲ : ಸಿದ್ದರಾಮಯ್ಯ

ಮೈಸೂರು, ಸೆ.26- ಕಾವೇರಿ ವಿವಾದವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಹೋರಾಟದ ಹಿನ್ನೆಲೆಯಲ್ಲಿ ಜನ ಕಲ್ಯಾಣ ಅಥವಾ ನಾಡಿನ ಹಿತಾಸಕ್ತಿ ಉದ್ದೇಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ, ಬಂದ್ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಇದೆ. ಅದರ ಹೊರತಾಗಿಯೂ ರಾಜ್ಯಸರ್ಕಾರ ಕಾವೇರಿ ವಿಷಯವಾಗಿ ಕರೆ ನೀಡಿರುವ ಬಂದ್‍ಗಳಿಗೆ ಅಡ್ಡಿಪಡಿಸುವುದಿಲ್ಲ ಎಂದರು.

ಹೋರಾಟ ಮಾಡುವುದು ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕಾಗಿದೆ. ಅದೇ ವೇಳೆ ಬೇರೆಯವರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ಮಂಡ್ಯದಲ್ಲಿ ಚಡ್ಡಿ ಮೆರವಣಿಗೆ ಮಾಡಿದ್ದಾರೆ. ಅವರನ್ನು ಚಡ್ಡಿಗಳು ಎಂದೇ ಕರೆಯುತ್ತಿದ್ದೆವು. ಪ್ರತಿಭಟನೆ ಮಾಡಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ವಿವಾದವನ್ನು ದುರುಪಯೋಗಪಡಿಸಿಕೊಳ್ಳುವುದು ನಾಡಿನ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇಲ್ಲಿ ಪ್ರತಿಭಟನೆ ಮಾಡುವ ಬದಲು ಬಿಜೆಪಿಯ 25 ಮಂದಿ ಸಂಸದರು ಪ್ರಧಾನಮಂತ್ರಿಯ ಮೇಲೆ ಒತ್ತಡ ಹಾಕಿ, ಮಧ್ಯಪ್ರವೇಶ ಮಾಡುವಂತೆ ಮಾಡಲಿ ಎಂದು ಸವಾಲು ಹಾಕಿದರು.

ಕಾವೇರಿ ನದಿ ಪಾತ್ರದ ವಾಸ್ತವಾಂಶಗಳ ಅಧ್ಯಯನಕ್ಕೆ ತಜ್ಞರ ತಂಡ ಕಳುಹಿಸಬೇಕು. ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಪಡಿಸಲು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ನಾನು ಎರಡು ಬಾರಿ ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ, ದೆಹಲಿಗೆ ಹೋಗಿ ಪ್ರಧಾನಿಯವರ ಭೇಟಿಗೂ ಪ್ರಯತ್ನಿಸಿದ್ದೇನೆ. ಆದರೆ ಯಾವುದಕ್ಕೂ ಅವರಿಂದ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಬಂದ್ : ತಾರಕಕ್ಕೇರಿದ ಕಾವೇರಿ ಕೂಗು, ರಾಜಭವನ ಮುತ್ತಿಗೆಗೆ ಹೋರಾಟಗಾರರ ಯತ್ನ

ಈಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ, ಅದನ್ನು ಸ್ವಾಗತಿಸುತ್ತೇನೆ. ಆದರೆ ಅದರಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ ಎಂಬ ಆಕ್ಷೇಪ ಮಾಡಿರುವುದರ ಹಿಂದೆ ರಾಜಕಾರಣ ಅಡಗಿದೆ. ನನ್ನ ಪತ್ರಕ್ಕೆ ಪ್ರಧಾನಿಯವರು ಸ್ಪಂದಿಸಿಲ್ಲ. ಈಗ ದೇವೇಗೌಡರು ಬಿಜೆಪಿಯ ಜೊತೆ ಹೊಸ ಸ್ನೇಹ ಮಾಡಿಕೊಂಡಿದ್ದಾರೆ. ಅದಕ್ಕಾದರೂ ಕೇಂದ್ರಸರ್ಕಾರ ಸ್ಪಂದಿಸಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.

ಕಾಂಗ್ರೆಸ್ ಡಿಎಂಕೆಯ ಬಿ ಟೀಂ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಡಿಎಂಕೆ ತಮಿಳುನಾಡಿನ ಪಕ್ಷ. ರಾಜಕೀಯಕ್ಕಾಗಿ ಬಾಯಿಗೆ ಬಂದಂತೆ ಮಾತನಾಡಬಾರದು. ಮೊನ್ನೆಯವರೆಗೂ ಬಿಜೆಪಿ ತಮಿಳುನಾಡಿನ ಎಐಡಿಎಂಕೆ ಪಕ್ಷದ ಜೊತೆ ಮೈತ್ರಿಯಲ್ಲಿತ್ತಲ್ಲಾ ಅದಕ್ಕೆ ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ರಾಜ್ಯಸರ್ಕಾರ ನಾಡಿನ ಮತ್ತು ರೈತರ ಹಿತಾಸಕ್ತಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ, ಹಿಂದೆ ಬೀಳುವುದೂ ಇಲ್ಲ. ನಮಗೆ ಅಧಿಕಾರ ಮುಖ್ಯ ಅಲ್ಲ, ರಾಜ್ಯದ ಜನರ ಹಿತ ಮುಖ್ಯ ಎಂಬ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಕಾವೇರಿ ನದಿ ವಿವಾದದಲ್ಲಿ ನ್ಯಾಯಾಧಿಕರಣ ಸಾಮಾನ್ಯ ವರ್ಷದಲ್ಲಿ 172.25 ಟಿಎಂಸಿ ನೀರು ಬಿಡಬೇಕು ಎಂದು ತೀರ್ಪು ನೀಡಿದೆ. ಆದರೆ ಸಂಕಷ್ಟ ಸಂದರ್ಭದಲ್ಲಿ ಪಾಲಿಸಬೇಕಾದ ಸೂತ್ರ ರಚನೆಯಾಗಿಲ್ಲ. ಇದು ಎರಡೂ ರಾಜ್ಯಗಳಿಗೂ ಅನ್ವಯವಾಗುತ್ತಿದೆ. ಹೀಗಾಗಿ ಸಂಕಷ್ಟ ಸೂತ್ರ ತುರ್ತು ಅಗತ್ಯವಿದೆ. ನದಿ ನೀರಿನ ಹಂಚಿಕೆ ವಿವಾದಕ್ಕೆ ಮತ್ತೊಂದು ಪರಿಹಾರ ಎಂದರೆ ಮೇಕೆದಾಟು ಸಮತೋಲಿತ ಅಣೆಕಟ್ಟು ನಿರ್ಮಾಣವಾಗಿದೆ. ಇದರಿಂದ 67 ಟಿಎಂಸಿ ಮಳೆ ನೀರನ್ನು ಸಂಗ್ರಹಿಸಿ ಸಂಕಷ್ಟ ಸಂದರ್ಭದಲ್ಲಿ ಹಂಚಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಕಾವೇರಿ ಹೋರಾಟಕ್ಕೆ ಜಯವಾಗಲಿ ಎಂದು ಪೋಸ್ಟ್ ಮಾಡಿದ ಸುದೀಪ್

ಕಾವೇರಿ ಪ್ರಕರಣದಲ್ಲಿ ರಾಜ್ಯಸರ್ಕಾರ ಸಮರ್ಥವಾದ ವಾದ ಮಂಡಿಸಿದೆ. ದೇವೇಗೌಡರ ಕಾಲದಿಂದಲೂ ಅಸ್ತಿತ್ವದಲ್ಲಿರುವ ಕಾನೂನು ತಂಡವೇ ನ್ಯಾಯಾಲಯಗಳಿಗೆ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡುತ್ತಿವೆ. ನೀರು ನಿಯಂತ್ರಣಾ ಸಮಿತಿ ಮುಂದೆ ಬಲವಾದ ವಾದ ಮಂಡಿಸಿದ್ದರೂ ಕೂಡ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂಬ ತೀರ್ಪು ನೀಡಲಾಗಿದೆ. ಇಂದು ಮತ್ತೆ ನಿಯಂತ್ರಣಾ ಸಮಿತಿಯ ಸಭೆ ನಡೆಯುತ್ತಿದ್ದು, ಅಲ್ಲಿಯೂ ಪ್ರಬಲವಾದ ವಾದ ಮಂಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News