ಬೆಂಗಳೂರು,ಮಾ.5- ಬರ ಪರಿಸ್ಥಿತಿಯಿಂದಾಗಿ ರಾಜ್ಯನ್ನು ಕಾಡುತ್ತಿರುವ ನೀರಿನ ಬವಣೆಯ ಬಿಸಿ ಮುಖ್ಯಮಂತ್ರಿ ಗೃಹಕಚೇರಿಗೂ ತಟ್ಟಿದೆ. ಬೆಂಗಳೂರಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವು ದರಿಂದಾಗಿ ಇದೇ ಮೊದಲ ಬಾರಿಗೆ ಪಿಡಬ್ಲ್ಯೂಎಸ್‍ಎಸ್‍ಬಿ ಟ್ಯಾಂಕರ್ ಮೂಲಕ ಗೃಹಕಚೇರಿ ಕೃಷ್ಣಾಗೆ ನೀರು ಸರಬರಾಜು ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯದ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು ಹಾಗೂ ಜಿಲ್ಲಾಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ಮೂಲಕ ನೀರಿನ ಬವಣೆ ಹಾಗೂ ಭರ ನಿರ್ವಹಣೆಯ ಬಗ್ಗೆ ಚರ್ಚೆ ನಡೆಸಲು ಸಭೆ ನಿಗದಿಯಾಗಿತ್ತು. ಅದಕ್ಕೂ ಮೊದಲು ಗೃಹಕಚೇರಿ ಕೃಷ್ಣಾಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಯಿತು.
ರಾಜ್ಯಾದ್ಯಂತ ಈಗಾಗಲೇ 300 ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳು ಹಾಗೂ 700 ಕ್ಕೂ ಹೆಚ್ಚು ನಗರ ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆಯಿದ್ದು, ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ. ಇನ್ನೂ ಕೆಲವು ಕಡೆ ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನೀರು ಪೂರೈಕೆಯ ಟ್ಯಾಂಕರ್‍ಗಳನ್ನು ನೋಂದಣಿ ಮಾಡಿಕೊಳ್ಳಬೇಕು. ಮನಸೋ ಇಚ್ಛೆ ಹಣ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ನಿರ್ದೇಶನ ನೀಡಿದೆ.
ಮಾ.7 ರವರೆಗೆ ಟ್ಯಾಂಕರ್ ನೋಂದಣಿಯನ್ನು ನೀಡಲಾಗಿದ್ದು, ಅದೇ ದಿನ ನೀರು ಪೂರೈಕೆಯ ದರ ನಿಗದಿ ಮಾಡುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಸೇರಿ ಸುಮಾರು 7 ಸಾವಿರ ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಾಗುವ ಅಂದಾಜಿದೆ. ಅಲ್ಲಿಗೆ ಟ್ಯಾಂಕರ್ ಮೂಲಕ ಮತ್ತು ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಮೇಲಿಂದ ಮೇಲೆ ಸಭೆ ನಡೆಸಲಾಗುತ್ತಿದೆ.
ಅದರ ಹೊರತಾಗಿಯೂ ಅಲ್ಲಲ್ಲಿ ನೀರಿಲ್ಲದೆ ಜನಸಾಮಾನ್ಯರು ಖಾಲಿ ಕೊಡಗಳನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿರುವುದು, ಪರದಾಡುತ್ತಿರುವುದು ಕಂಡುಬರುತ್ತಿದೆ. ಜನಸಾಮಾನ್ಯರ ಪರಿಸ್ಥಿತಿ ಈ ರೀತಿಯಾದರೆ ರಾಜ್ಯಾಂಗದ ಅಕಾರ ಹಿಡಿದಿರುವ ಸಿಎಂ ಅವರ ಕಚೇರಿಯಲ್ಲೂ ನೀರಿನ ಬವಣೆ ಅಚ್ಚರಿ ಮೂಡಿಸಿದೆ.