Monday, May 6, 2024
Homeರಾಜ್ಯಸಮರ್ಪಕ ಬರ ನಿರ್ವಹಣೆಗೆ ಸಿಎಂ ಸೂಚನೆ

ಸಮರ್ಪಕ ಬರ ನಿರ್ವಹಣೆಗೆ ಸಿಎಂ ಸೂಚನೆ

ಬೆಂಗಳೂರು,ಮಾ.5- ಕುಡಿಯುವ ನೀರಿನ ಸಮಸ್ಯೆ, ಉದ್ಯೋಗ ಸೃಷ್ಟಿ ಹಾಗೂ ಮೇವಿನ ಕೊರತೆಯಾಗದಂತೆ ಬರ ನಿರ್ವಹಣೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಸೇರಿದಂತೆ ಪ್ರಮುಖ ಅಧಿಕಾರಿಗಳೊಂದಿಗೆ ವಿಡಿಯೋ ಕಾನರೆನ್ಸ್ ಮೂಲಕ ಸಭೆ ನಡೆಸಿದ ಮುಖ್ಯಮಂತ್ರಿಯವರು ಮಹತ್ವದ ಸೂಚನೆಗಳನ್ನ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದು, ಜಿಲ್ಲಾಡಳಿತ ಕೈ ಕಟ್ಟಿ ಕುಳಿತಿರುವುದೇಕೆ ಎಂದು ಈ ಸಂದರ್ಭದಲ್ಲಿ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯಸರ್ಕಾರ ಸುಮಾರು 900 ಕೋಟಿ ರೂ.ಗಳನ್ನು ಕುಡಿಯುವ ನೀರು ಸೇರಿದಂತೆ ಬರ ನಿರ್ವಹಣೆಗಾಗಿ ಬಿಡುಗಡೆ ಮಾಡಿದೆ. ಆದರೆ ಅದರ ಬಳಕೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ಹಿಂದಿನಿಂದಲೂ ಟ್ಯಾಂಕರ್‍ನಲ್ಲಿ ನೀರು ಪೂರೈಸಿದ ಬಿಲ್ ಪಾವತಿಯಾಗಿಲ್ಲ. ಹೀಗಾಗಿ ಹೊಸ ಬಿಲ್‍ಗಳ ಪಾವತಿಗೆ ತಾಂತ್ರಿಕ ಸಮಸ್ಯೆ ಇದೆ ಎಂದು ಕೆಲ ಅಧಿಕಾರಿಗಳು ಸಬೂಬು ಹೇಳಿದರು ಎಂದು ಮೂಲಗಳು ತಿಳಿಸಿವೆ. ಅವೈಜ್ಞಾನಿಕವಾಗಿ ಈ ಹಿಂದೆ ನೀರು ಪೂರೈಕೆ ಹಾಗೂ ಇತರೆ ಬಿಲ್‍ಗಳನ್ನು ಸೃಷ್ಟಿಸಲಾಗಿತ್ತು ಎಂಬ ಆರೋಪಗಳಿವೆ. ಅದಕ್ಕೆ ನಮ್ಮ ಸರ್ಕಾರ ಹೊಣೆಯಾಗಲು ಸಾಧ್ಯವಿಲ್ಲ. ಬರ ಪರಿಸ್ಥಿತಿ ತೀವ್ರಗೊಂಡಿರುವ ಪ್ರಸ್ತುತ ದಿನಮಾನದಲ್ಲಿ ನವೆಂಬರ್ ನಂತರ ನೀರು ಪೂರೈಸುವ ಟ್ಯಾಂಕರ್‍ಗಳಿಗೆ 15 ದಿನಗಳಿಗೊಮ್ಮೆ ಬಿಲ್ ಪಾವತಿಸಬೇಕು ಎಂದು ಸೂಚಿಸಿದ್ದಾರೆ.

ಉದ್ಯೋಗ ಸೃಷ್ಟಿಗೆ ನರೇಗಾ ಯೋಜನೆಯಡಿ ಲಭ್ಯವಿರುವ ಅನುದಾನಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. 100 ದಿನಗಳ ಮಾನವ ಉದ್ಯೋಗ ಒದಗಿಸಲಾಗುತ್ತದೆ. ಅದನ್ನು 150 ದಿನಗಳಿಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೂ ಅಲ್ಲಿಂದ ಯಾವುದೇ ಅನುಮೋದನೆ ದೊರೆತಿಲ್ಲ. ಏಪ್ರಿಲ್ ಬಳಿಕವೂ ಕೇಂದ್ರದ ಸಹಮತ ದೊರೆಯದೇ ಇದ್ದರೆ ರಾಜ್ಯಸರ್ಕಾರವೇ ತನ್ನ ಆರ್ಥಿಕ ಇತಿಮಿತಿಯಲ್ಲಿ ಮಾನವ ದಿನಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಈ ವೇಳೆ ಭರವಸೆ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು, ಬ್ಯಾಂಕ್ ಸಾಲ ವಸೂಲಾತಿಗೆ ಆತುರ ತೋರಿಸದಂತೆ ಆಯಾ ಜಿಲ್ಲಾಕಾರಿಗಳು ಬ್ಯಾಂಕರ್‍ಗಳಿಗೆ ತಿಳುವಳಿಕೆ ನೀಡುವಂತೆಯೂ ಸಲಹೆ ನೀಡಿದ್ದಾರೆ. ಕೆಲವು ಕಡೆ ಬ್ಯಾಂಕ್ ನೋಟಿಸ್‍ಗಳಿಂದಾಗಿ ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಬರ ನಿರ್ವಹಣೆಯನ್ನು ಸಮರೋಪಾದಿಯಲ್ಲಿ ನಿಭಾಯಿಸಬೇಕು. ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಇಂಧನ ಸೇರಿದಂತೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದ್ದಾರೆ. ಬಹಳಷ್ಟು ಜಿಲ್ಲೆಗಳಿಂದ ಉಸ್ತುವಾರಿ ಸಚಿವರು ಆನ್‍ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಬರ ನಿರ್ವಹಣೆ ಕಾಮಗಾರಿಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿ, ಕಾಲಕಾಲಕ್ಕೆ ಸರ್ಕಾರಕ್ಕೆ ವರದಿ ನೀಡುವಂತೆ ಮುಖ್ಯಮಂತ್ರಿ ಇದೇ ವೇಳೆ ಆದೇಶಿಸಿದ್ದಾರೆ.

RELATED ARTICLES

Latest News