Sunday, September 8, 2024
Homeಇದೀಗ ಬಂದ ಸುದ್ದಿಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಮೈಸೂರು,ಅ.15- ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡಿನ ಸಮೃದ್ಧಿ, ಪ್ರಗತಿ, ಸಂಸ್ಕೃತಿ ಮತ್ತು ವೈಭವವನ್ನು ದಸರಾ ಮೂಲಕ ಜಗತ್ತಿಗೆ ಸಾರುವ ಕೆಲಸವನ್ನು ನಾವು ಮಾಡುತ್ತೇವೆ. ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ನಾಡು ನಮ್ಮದು. ನಮ್ಮ ಜನ ಬಹಳ ಸುಸಂಸ್ಕೃತರು. ಪ್ರೀತಿ ಹಂಚುವವರು. ಎಲ್ಲಾ ಜಾತಿ ಧರ್ಮದವರನ್ನು ಅತ್ಯಂತ ಪ್ರೀತಿಯಿಂದ, ಘನತೆಯಿಂದ ನಡೆಸಿಕೊಳ್ಳುವುದು ನಮ್ಮ ಧರ್ಮ ಮತ್ತು ಕರ್ತವ್ಯ ಎಂದರು.

ಮುಂಗಾರು ಮಳೆ ಕೊರತೆಯಿಂದ 42 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು 30 ಸಾವಿರ ಕೋಟಿ ರೂಪಾಯಿಗಳ ಬೆಳೆ ನಷ್ಟವಾಗಿದೆ. ಮಾನದಂಡಗಳ ಪ್ರಕಾರ 4850 ಕೋಟಿ ರೂಪಾಯಿ ಬೆಳೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 116 ತಾಲ್ಲೂಕುಗಳಲ್ಲಿ ತೀವ್ರ ಬರ ಪೀಡಿತವಾಗಿವೆ.

ಹಿಂಗಾರು ಮಳೆ ಉತ್ತಮವಾಗಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಮಳೆ ಇಲ್ಲದೆ ನಾಡಿನ ರೈತ ಕುಲ, ನಾಡಿನ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಅದ್ದೂರಿ ಇಲ್ಲದ ವೈಭವಕ್ಕೆ ಕೊರತೆ ಇಲ್ಲದ ಅರ್ಥಪೂರ್ಣ ದಸರಾ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಮೈಸೂರು ಅರಸರ ಕಾಲದಿಂದಲೂ ಅತ್ಯಂತ ವೈಭವದಿಂದ ಆಚರಿಸಲ್ಪಡುತ್ತಿರುವ ದಸರಾವನ್ನು ನಾನು ತಂದೆಯ ಹೆಗಲ ಮೇಲೆ ಕುಳಿತು ನೋಡುತ್ತಿದ್ದೆ . ರಾಜರ ಕಾಲ ಮುಗಿದು ಪ್ರಜಾರಾಜ್ಯ ಬಂದ ಬಳಿಕ ರಾಜ್ಯ ಸರ್ಕಾರ ನಾಡಹಬ್ಬವಾಗಿ ದಸರಾವನ್ನು ಆಚರಿಸಲಾಗುತ್ತಿದೆ. 10 ನೆಯ ದಿನ ಜಂಬೂ ಸವಾರಿ ನಡೆಯುತ್ತದೆ.

ದಸರಾ ಹಬ್ಬ ವಿಜಯನಗರ ಸಾಮ್ರಾಜ್ಯದ ಆಚರಣೆಯಾಗಿತ್ತು. ವಿಜಯನಗರ ಸಾಮ್ರಾಜ್ಯ ವೈಭವ ಯುತವಾಗಿತ್ತು. ಈ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು ಸೇರು ಬಳ್ಳ ಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು. ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ ಮೈಸೂರು ಅರಸರು ದಸರಾ ಹಬ್ಬವನ್ನು ಆಚರಣೆ ಮಾಡಲು ಪ್ರಾರಂಭಿಸಿದರು. ಈಗ ರಾಜ್ಯ ಸರ್ಕಾರ ಆಚರಣೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವುದೇ ಸಾಮಾಜಿಕ ನ್ಯಾಯ. ಇದು ನಮ್ಮ ಸಂವಿಧಾನದ ಮತ್ತು ನಮ್ಮ ಸರ್ಕಾರದ ಆಶಯ. ಕೇವಲ ರಾಜಕೀಯ ಸ್ವಾತಂತ್ರ್ಯ ಸಾಲದು. ನಮ್ಮ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಒರಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು. ನಾವು ಎಲ್ಲಾ ಜನರಿಗೆ ಸ್ಥಿರ ಆದಾಯವನ್ನು ಬರುವಂತೆ ಮಾಡಿ, ಕೊಂಡುಕೊಳ್ಳುವ ಶಕ್ತಿ ಬರುವಂತೆ ಮಾಡಲು 5 ಗ್ಯಾರೆಂಟಿ ಗಳನ್ನು ಘೋಷಣೆ ಮಾಡಿ 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ. 5 ನೇಯ ಗ್ಯಾರೆಂಟಿ ಯನ್ನು ಮುಂದಿನ ಜನವರಿಯಲ್ಲಿ ಜಾರಿಗೆ ತರುತ್ತೇವೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ನಮ್ಮ ಕನ್ನಡ ಸಂಸ್ಕತಿಯನ್ನು ಬಿಂಬಿಸುವ ಆಚರಣೆ ದಸರಾ. ಭೂಮಿಯನ್ನು ಭಾಷೆಯನ್ನು ತಾಯಿಯ ಹೆಸರಿನಲ್ಲಿ ಕರೆಯುತ್ತೇವೆ. ನಮ್ಮ ನಾಡಿನ ಅಗ್ರ ದೇವತೆ ಚಾಮುಂಡಿತಾಯಿ. ಪ್ರಯತ್ನ ಮಾಡಿ ಸೋಲಬಹುದು ಆದರೆ ಪ್ರಾರ್ಥಿಸಿ ಸೋತಿಲ್ಲ ಎಂಬ ನಂಬಿಕೆ ಇಟ್ಟು ನಾಡಿಗೆ ಒಳ್ಳೆ ಮಳೆ ಬೆಳೆ ನೀಡುವಂತೆ ಪ್ರಾರ್ಥಿಸಲು ಇಲ್ಲಿ ಬಂದಿದ್ದೇವೆ ಎಂದರು.

ನಾವು ಚುನಾವಣೆಗೆ ಮುಂಚೆ ನಾನು ಮತ್ತು ಮುಖ್ಯಮಂತ್ರಿಗಳು ತಾಯಿ ಚಾಮುಂಡಿ ದೇವಿಗೆ 5 ಗ್ಯಾರೆಂಟಿ ಗಳನ್ನು ಜಾರಿಗೆ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಅದರಂತೆ ನಾವು ನುಡಿದಂತೆ ನಡೆದು 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಸುತ್ತಾ, ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ ಮೇಲೆ ಬೆಳಕು ಚೆಲ್ಲುವುದು ಮೈಸೂರು ದಸರಾ. ಮೈಸೂರು ದಸರಾ ನಾಡಿನ ಕಲೆ ಸಂಸೃತಿ, ಪರಂಪರೆಯನ್ನು ತಿಳಿಸುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ ಜನಪರ ಆಡಳಿತ, ಕಾಳಜಿ, ಬದ್ದತೆ ಮೈಸೂರು ದಸರಾದ ಪ್ರತೀಕ. ಮೈಸೂರಿನ ಜನರು ಶಾಂತಿಪ್ರಿಯರು ಎಂದು ತಿಳಿಸಿದರು.

ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಿ : ದಸರಾ ಮಹೋತ್ಸವಕ್ಕೆ ಹಂಸಲೇಖ ಚಾಲನೆ

ಸೆಪ್ಟೆಂಬರ್ 15 ರಂದು ಸಂವಿಧಾನ ಪೀಠಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಓದಿ, ಎಲ್ಲಾ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಏಕ ಕಾಲಕ್ಕೆ ಓದಲಾಯಿತು. ಚಾಮುಂಡಿ ಅಭಿವೃದ್ಧಿ ಪ್ರಾಕಾರವನ್ನು ಮಾಡಿ ಚಾಮುಂಡಿ ಬೆಟ್ಟ ವನ್ನು ಅಭಿವೃದ್ಧಿ ಮಾಡಲು ಸರ್ಕಾರ ಕ್ರಮವಹಿಸಲಾಗಿದೆ. ಈ ಬಾರಿ ಮಳೆ ಕೊರತೆ ಆಗಿರುವುದರಿಂದ ಸಾಂಪ್ರದಾಯಿಕ ದಸರಾ ಆಚರಿಸುತ್ತಿದ್ದು, ಶಾಂತಿ ಸೌಹಾರ್ದತೆ ಯಿಂದ ಎಲ್ಲರೂ 9 ದಿನಗಳ ಕಾಲ ದಸರಾ ಆಚರಿಸೋಣ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ಅವರು ಮಾತನಾಡಿ ವಿಜಯ ದಶಮಿ ವಿಜಯದ ಒಂದು ಸಂಕೇತ. ಎಲ್ಲಾ ಶಕ್ತಿಯನ್ನು ಹೊಂದಿರುವ ತಾಯಿ ಚಾಮುಂಡೇಶ್ವರಿ ರಾಕ್ಷಸರನ್ನು ಸಂಹಾರ ಮಾಡಿದಳು. ಇಂದು ನಮ್ಮಲ್ಲಿಯೇ ರಾಕ್ಷಸ ಗುಣಗಳು ಇವೆ. ಇವನ್ನು ಬಿಟ್ಟು ಎಲ್ಲರೂ ಶಾಂತಿ ಸೌಹಾರ್ದತೆ ಯಿಂದ ನಡೆದುಕೊಂಡು ಹೋಗಬೇಕು ಎಂದು ಅವರು ಹೇಳಿದರು.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾಗೆ ಸೇರುತ್ತಾರೆ. 9 ದಿನಗಳ ಕಾಲ ನಡೆಯುವ ದಸರಾ ಆಚರಣೆಯಲ್ಲಿ ಎಲ್ಲರೂ ಭಾಗಿಗಳಾಗಿ ಎಂದರು.ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಸಾಂಪ್ರದಾಯಕವಾಗಿ, ಅರ್ಥಪೂರ್ಣವಾಗಿ ಉದ್ಘಾಟಿಸಿದರು.ಪಲ್ಲಕ್ಕಿಯಲ್ಲಿ ಅಲಂಕೃತ ಗೊಂಡಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮೈಸೂರು ಮೇಯರ್ ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ನಾಗರೀಕ ಫೂರೈಕೆ ಸಚಿವ ಕೆ.ಎಚ್.ಮುನಿಯಪ್ಪ,

ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಉಪ ಮೇಯರ್ ಡಾ.ಜಿ.ರೂಪ, ಜಿಲ್ಲಾಕಾರಿ ದಸರಾ ವಿಶೇಷಾಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿ.ಪಂ. ಸಿಇಓ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

RELATED ARTICLES

Latest News