Friday, May 10, 2024
Homeರಾಜಕೀಯಗ್ಯಾರಂಟಿಗಳ ಪ್ರಭಾವದಿಂದ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ : ಸಿಎಂ ಸಿದ್ದರಾಮಯ್ಯ

ಗ್ಯಾರಂಟಿಗಳ ಪ್ರಭಾವದಿಂದ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ : ಸಿಎಂ ಸಿದ್ದರಾಮಯ್ಯ

ಕಲಬುರಗಿ,ಏ.27- ಐದು ಗ್ಯಾರಂಟಿಗಳು ಜನರ ಮೇಲೆ ಹೆಚ್ಚು ಪರಿಣಾಮ ಬೀರಿವೆ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕಲಬುರಗಿ ನಗರದ ಗ್ರ್ಯಾಂಡ್‌ ಹೋಟೆಲ್‌ನಲ್ಲಿ 2024ರ ಎರಡನೇ ಹಂತದ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

ಮೊದಲ ಹಂತದ ಚುನಾವಣೆ ಮುಗಿದಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವರದಿ ಬಂದಿದೆ. ಎಲ್ಲಾ ಅಭ್ಯರ್ಥಿಗಳು ಹಾಗೂ ಜಿಲ್ಲಾ ಸಚಿವರೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡಿದ್ದಾರೆಂದು ಹೇಳಿದ್ದಾರೆ ಎಂದರು. ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿ ಸುಳ್ಳಗಳ ಮಾರುಕಟ್ಟೆ ತೆರೆದಿದ್ದಾರೆ.

ಹಿಂದುಳಿದವರಿಗೆ ಮೀಸಲಾತಿ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.ಮಂಡಲ್‌ ಆಯೋಗದ ವರದಿ ಜಾರಿಯಾದಾಗ ಮೀಸಲಾತಿ ವಿರೋಧಿಸಿದ್ದು, ಬಿಜೆಪಿಯವರು. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ, ಅವಕಾಶ ವಂಚಿತರಾದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ.

ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ ಶೇ. 10 ಮೀಸಲಾತಿ ನೀಡಿದೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ. ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಿದೆ.

ಮೊದಲಿನಿಂದಲೂ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಅರ್ಜುನ್‌ ಸಿಂಗ್‌ ಅವರು ಆಗ ಮಾನವ ಸಂಪನ್ಮೂಲ ಸಚಿವರಾಗಿದ್ದರು. ದೇಶಾದ್ಯಂತ. ಐಐಟಿ, ಐಐಎಂ ನಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿ ಮಾಡಿದರು. ರಾಜೀವ್‌ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ 73, 74 ನೇ ತಿದ್ದುಪಡಿ ಮಾಡಿದರು.

73 ನೇ ತಿದ್ದುಪಡಿ ಮೂಲಕ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಹಿಂದುಳಿದವರಿಗೆ ಮೀಸಲಾತಿ ತಂದರು. ನರಸಿಂಹರಾಯರು ಪ್ರಧಾನಿ ಮಂತ್ರಿಗಳಾಗಿದ್ದಾಗ ಜಾರಿಗೆ ಬಂತು. ಓಬಿಸಿ 2 (ಎ) ಮತ್ತು (ಬಿ )ಎಂದು ಮೀಸಲಾತಿ ತಂದು ಮಹಿಳೆಯರಿಗೆ 33% ಮೀಸಲಾತಿ ತಂದೆವು. ಹಿಂದುಳಿದವರಿಗೆ ಶೇ. 27.4 ಓಬಿಸಿ (ಎ) ಹಾಗೂ ಶೇ. 6.6 ಓಬಿಸಿ (ಬಿ) ಯವರಿಗೆ ಮಾಡಲಾಯಿತು. ಓಬಿಸಿ (ಎ) ನಲ್ಲಿ ಮುಸಲ್ಮಾನರನ್ನು ಸೇರಿಸಲಾಯಿತು ಎಂದರು.

ಹಿಂದುಳಿದವರಿಗೆ ನೀಡಲಾದ ಮೀಸಲಾತಿಯನ್ನು ರದ್ದುಪಡಿಸಿ ಮುಸಲ್ಮಾನರಿಗೆ ನೀಡಲಾಗುತ್ತದೆ ಎಂಬುದು ಅಪ್ಪಟ ಸುಳ್ಳು. ರಾಜಕೀಯವಾಗಿ ಬಿಜೆಪಿಯವರು ಈ ರೀತಿ ಮಾಡಲಾಗುತ್ತಿದೆ. ಮತಗಳನ್ನು ಧ್ರುವೀಕರಣ ಮಾಡುವ ಉದ್ದೇಶದಿಂದ ಮೋದಿಯವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ.

ಎಲ್ಲ ಭಾರತೀಯರ ರಕ್ಷಣೆ ಮಾಡುವುದು ಪ್ರಧಾನಮಂತ್ರಿಗಳ ಕರ್ತವ್ಯ. ಮುಸಲ್ಮಾನರನ್ನು ಪ್ರತ್ಯೇಕಿಸಿ ಮತಗಳ ಧ್ರುವೀಕರಣ ಮಾಡುತ್ತಿರುವ ಮೋದಿಯವರ ಕಾರ್ಯ ಸಂವಿಧಾನ ಬಾಹಿರವಾದುದು. ಮೀಸಲಾತಿ ನೀಡಿಕೆ ಸಾಂವಿಧಾನಿಕವಾಗಿ ಸರಿಯೆಂದು ಸುಪ್ರೆಂ ಕೋರ್ಟ್‌ ತಿಳಿಸಿದ್ದರೂ, ಮೋದಿಯವರು ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೀಸಲಾತಿಯನ್ನು ವಿರೋಧಿಸುವ ಬಿಜೆಪಿಯವರ ಧೋರಣೆಯನ್ನು ನಾನು ಖಂಡಿಸುತ್ತೇನೆ. ಜನರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದರು.

RELATED ARTICLES

Latest News