ಬೆಂಗಳೂರು,ನ,16- ಮಾಜಿ ಶಾಸಕರೂ ಆಗಿರುವ ತಮ್ಮ ಪುತ್ರ ಡಾ.ಯತೀಂದ್ರ ಅವರು ಫೋನ್‍ನಲ್ಲಿ ಮಾತನಾಡುವಾಗ ಸಿಎಸ್‍ಆರ್ ನಿಯಡಿ ಶಾಲಾ ಕಟ್ಟಡಗಳ ದುರಸ್ತಿಯ ಬಗ್ಗೆ ಚರ್ಚೆ ಮಾಡಿದ್ದಾರೆ. ಅದನ್ನು ತಿರುಚಿ ವರ್ಗಾವಣೆಯ ಪಟ್ಟಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಮಾತನಾಡಿರುವುದರಲ್ಲಿ ಎಲ್ಲಿಯೂ ವರ್ಗಾವಣೆಯ ಪ್ರಸ್ತಾಪವಾಗಿಲ್ಲ. ನನ್ನ ರಾಜಕೀಯ ಜೀವನದಲ್ಲಿ ದುಡ್ಡು ತೆಗೆದುಕೊಂಡು ಒಂದೇ ಒಂದು ವರ್ಗಾವಣೆ ಮಾಡಿರುವುದನ್ನು ತೋರಿಸಿದರೆ ರಾಜಕೀಯ ನಿವೃತ್ತಿಯಾಗುವುದಾಗಿ ಸವಾಲು ಹಾಕಿದರು.
ಬಂಧಿತ ಸಚಿವ ಸೆಂಥಿಲ್ ಬಾಲಾಜಿಗೆ ಆಂಜಿಯೋಗ್ರಾಮ್ ಮಾಡಲು ಸೂಚನೆ
ಯತೀಂದ್ರ ವರುಣಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯ ಸದಸ್ಯರ ಬಗ್ಗೆ ಚರ್ಚೆ ಮಾಡಲಾಯಿತು. ತಾವು ಆಯ್ಕೆಯಾಗಿರುವ ವರುಣಾ ಕ್ಷೇತ್ರವನ್ನು ನೋಡಿಕೊಳ್ಳಲು ಯತೀಂದ್ರ ಅವರಿಗೆ ಹೇಳಿದ್ದೇನೆ. ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‍ಆರ್)ಯಡಿ ಕ್ಷೇತ್ರದಲ್ಲಿ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಿಸಲಾಗುತ್ತಿದೆ. ಸಚಿವ ಎಚ್.ಸಿ.ಮಹದೇವಪ್ಪ ಈ ಪಟ್ಟಿ ನೀಡಿದ್ದಾರೆ. ಯತೀಂದ್ರ ಆ ಕುರಿತು ಚರ್ಚೆ ಮಾಡಿದರು ಎಂದು ಹೇಳಿದರು.
ಸಂಭಾಷಣೆ ವೇಳೆ ಎಲ್ಲಿಯೂ ವರ್ಗಾವಣೆ ಉಲ್ಲೇಖ ಇಲ್ಲ. ಆ ರೀತಿ ಹೇಳಿರುವ ವಿಡಿಯೋ ಇದ್ದರೆ ತೋರಿಸಿ. ನಾಲ್ಕೈದು ಹೆಸರುಗಳು ಎಂದರೆ ಅದು ವರ್ಗಾವಣೆಯ ಪಟ್ಟಿ ಅಲ್ಲ. ಶಾಲೆಗಳ ದುರಸ್ತಿಯ ಪಟ್ಟಿ ಎಂದು ಸಮರ್ಥಿಸಿಕೊಂಡರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯಕ್ಕಾಗಿ ಆರೋಪ ಮಾಡುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯತೀಂದ್ರ ಮಾತನಾಡಿರುವುದರಲ್ಲಿ ಏನೋ ಇದೆ ಎಂದು ಭಾರೀ ಪ್ರಮಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.