Friday, November 22, 2024
Homeರಾಜ್ಯನಾಳೆ ಪಿಎಂ ಮೋದಿ - ಸಿಎಂ ಸಿದ್ದು ಭೇಟಿ

ನಾಳೆ ಪಿಎಂ ಮೋದಿ – ಸಿಎಂ ಸಿದ್ದು ಭೇಟಿ

ಬೆಂಗಳೂರು,ಡಿ.18- ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗಳಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಯವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಲೇ ಇದ್ದರು. ಆದರೆ ಪ್ರಧಾನಿ ಕಚೇರಿಯಿಂದ ಸಮಯಾವಕಾಶ ಸಿಕ್ಕಿರಲಿಲ್ಲ.

ನವೆಂಬರ್ 27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದ ಸಿದ್ದರಾಮಯ್ಯನವರು, ರಾಜ್ಯದ ಬರ ಪರಿಸ್ಥಿತಿ, ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಗೆ ತಮ್ಮನ್ನು ಭೇಟಿ ಮಾಡಲು ಸಮಯ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಇಂದು ಸಂಜೆ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯನವರು ಮೂರು ದಿನಗಳ ಕಾಲ ದೆಹಲಿಯಲ್ಲೇ ಉಳಿಯಲಿದ್ದಾರೆ. ಅಲ್ಲಿ ಅಖಿಲ ಭಾರತ ಕಾಂಗ್ರೆಸ್‍ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸುವ ಜೊತೆಗೆ ಕೇಂದ್ರ ಸರ್ಕಾರದ ವಿವಿಧ ಸಚಿವರುಗಳ ಜೊತೆ ಭೇಟಿಗೆ ಸಮಯ ಕೇಳಿದ್ದಾರೆ. ಕೆಲ ರಾಜ್ಯದ ಸಚಿವರುಗಳು ಸಮಯ ನೀಡಿದ್ದಾರೆ.

ಅಚ್ಚರಿ ಎಂಬಂತೆ ಪ್ರಧಾನಿ ಕಚೇರಿ ಕೂಡ ಸಿದ್ದರಾಮಯ್ಯ ಅವರಿಗೆ ನಾಳೆ ಬೆಳಿಗ್ಗೆ 11 ಗಂಟೆಗೆ ಸಮಯ ನೀಡಿದೆ. ಇಂದು ಸಂಜೆ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ ಅವರು ಬರ ಪರಿಹಾರ, ಮಹದಾಯಿ, ಮೇಕೆದಾಟು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅಗತ್ಯ ಪೂರ್ವಾನುಮತಿ, ತೆರಿಗೆ ಪಾಲಿನ ಹಂಚಿಕೆ ಹೆಚ್ಚಳ, ಆರ್ಥಿಕ ನೆರವು ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಪಟ್ಟಂತೆ ಲಿಖಿತ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿ ಕಚೇರಿ ಸಿದ್ಧಪಡಿಸಿಕೊಂಡಿದೆ.

ನಾಳೆ ಸಿದ್ದರಾಮಯ್ಯಅವರು ಖುದ್ದಾಗಿ ಪ್ರಧಾನಿಯವರಿಗೆ ರಾಜ್ಯದ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿಯವರ ಜೊತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಷಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಘೋಯಲ್ ಮತ್ತಿತರರು ಹಾಜರಿರುವ ಸಾಧ್ಯತೆಯಿದೆ.

BIG NEWS : ಬೆಂಗಳೂರು ಸೇರಿ ದೇಶದ ಹಲವೆಡೆ ಎನ್‍ಐಎ ದಾಳಿ

ರಾಜ್ಯದ ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸಲು ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕೆಂಬುದು ಹಲವು ದಿನಗಳ ಬೇಡಿಕೆಯಾಗಿದೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿಯವರ ವೈಯಕ್ತಿಕ ಭೇಟಿಗೆ ಮಾತ್ರ ಸಮಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಸರ್ವಪಕ್ಷದ ನಿಯೋಗದ ಭೇಟಿಗೂ ಸಮಯ ಸಿಗುವ ನಿರೀಕ್ಷೆಗಳು ಗರಿಗೆದರಿವೆ. ಮುಖ್ಯಮಂತ್ರಿಯಾದ ತಮ್ಮ ಭೇಟಿಗೆ ಪ್ರಧಾನಿಯವರು ಸಮಯ ನೀಡಿಲ್ಲ ಎಂದು ನಿನ್ನೆ ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು.

ಬೆಳಗಾವಿ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆ ವೇಳೆ ಶಾಸಕ ಅರವಿಂದ್ ಬೆಲ್ಲದ್ ತಾವು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರೊಂದಿಗೆ ಚರ್ಚೆ ನಡೆಸಿದ್ದು, ಪ್ರಧಾನಿಯವರ ಭೇಟಿಗೆ ಶೀಘ್ರ ಸಮಯ ಸಿಗಲಿದೆ ಎಂಬ ಭರವಸೆ ನೀಡಿದ್ದರು.ನಿರೀಕ್ಷೆಯಂತೆ ಪ್ರಧಾನಿ ಕಚೇರಿ ಸಿದ್ದರಾಮಯ್ಯ ಅವರ ಭೇಟಿಗೆ ಸಮಯ ನೀಡಿದೆ.

RELATED ARTICLES

Latest News