Thursday, May 2, 2024
Homeರಾಜ್ಯಮತ್ತೆ ಮೈಸೂರಿನತ್ತ ಸಿಎಂ ಸಿದ್ದರಾಮಯ್ಯ, ತವರು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾರ್ಯತಂತ್ರ

ಮತ್ತೆ ಮೈಸೂರಿನತ್ತ ಸಿಎಂ ಸಿದ್ದರಾಮಯ್ಯ, ತವರು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾರ್ಯತಂತ್ರ

ಮೈಸೂರು,ಏ.1- ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಲೇಬೇಕೆಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ಮೂರು ದಿನಗಳ ಕಾಲ ಮೈಸೂರು ಮತ್ತು ಚಾಮರಾಜನಗರ ಪ್ರವಾಸ ಮಾಡಲಿದ್ದಾರೆ.ಮೈಸೂರು-ಕೊಡುಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಸಂಭವನೀಯ ಮುಜುಗರವನ್ನು ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಹೀಗಾಗಿ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಕಳೆದ ವಾರ ಮೂರು ದಿನಗಳ ಕಾಲ ಮೈಸೂರಿನಲ್ಲಿ ಠಿಕ್ಕಾಣಿ ಹೂಡಿದ್ದ ಮುಖ್ಯಮಂತ್ರಿಯವರು ವಿವಿಧ ಹಂತಗಳಲ್ಲಿ ಚರ್ಚೆ ನಡೆಸಿದ್ದರು.

ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಯದುವೀರ್ ಕೃಷ್ಣರಾಜ ಒಡೆಯರ್ ವಿರುದ್ಧವಾಗಿ ಕಾಂಗ್ರೆಸ್‍ನ ಯಾವ ನಾಯಕರೂ ಹಗುರವಾದ ಹೇಳಿಕೆಗಳನ್ನು ನೀಡಬಾರದು. ನಮ್ಮ ಹೋರಾಟ ಏನಿದ್ದರೂ ಬಿಜೆಪಿಯ ವಿರುದ್ಧ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದರು.

ಇದರಿಂದ ಸ್ಥಳೀಯ ನಾಯಕರು ಮನಸೋಇಚ್ಚೆ ಮಾತನಾಡಿ ಮುಜುಗರ ಸೃಷ್ಟಿಸುವುದಲ್ಲದೆ ಕಾಂಗ್ರೆಸ್‍ಗೆ ಹಿನ್ನಡೆಯಾಗುವಂತೆ ಮಾಡುವ ಸಾಧ್ಯತೆಗಳು ಕ್ಷೀಣವಾಗಿದೆ. ನಾಳೆಯಿಂದ ಕೈಗೊಳ್ಳುವ ಪ್ರವಾಸದಲ್ಲಿ ಚಾಮರಾಜನಗರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಗಳನ್ನು ನೀಡುತ್ತಿದ್ದಾರೆ. ಅಲ್ಲಿ ಸಚಿವ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಈ ಎರಡೂ ಕ್ಷೇತ್ರಗಳು ಮುಖ್ಯಮಂತ್ರಿಯವರಿಗೆ ಅತ್ಯಂತ ಪ್ರತಿಷ್ಠೆಯ ಕಣಗಳು ಎಂದು ವಿಶ್ಲೇಷಿಸಲಾಗುತ್ತಿದೆ. ನಾಳೆ ಚಾಮರಾಜನಗರದಲ್ಲಿನ ಶಂಕರಮಠಕ್ಕೆ ಭೇಟಿ ನೀಡುವ ಸಿದ್ದರಾಮಯ್ಯ ಅವರು ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸಂಜೆ ಮೈಸೂರಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಲಿದ್ದು, ಆ ಬಳಿಕ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಬುಧವಾರ ಸುತ್ತೂರು ಮಠಕ್ಕೆ ಭೇಟಿ ನೀಡಿ ಆ ಬಳಿಕ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರೆ.

ಮೂರು ದಿನಗಳ ಜಿಲ್ಲಾ ಪ್ರವಾಸದಲ್ಲಿ ಚುನಾವಣೆ ನಿರ್ವಹಣೆ, ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಹಾಗೂ ಒಗ್ಗಟ್ಟಿನ ಹೋರಾಟಕ್ಕೆ ಜಿಲ್ಲಾ ನಾಯಕರಿಗೆ ಅಗತ್ಯ ಸಲಹೆಸೂಚನೆಗಳನ್ನು ಮುಖ್ಯಮಂತ್ರಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News