Saturday, July 27, 2024
Homeರಾಜ್ಯಸಿದ್ದಗಂಗಾ ಮಠದಲ್ಲಿ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತ್ಯುತ್ಸವ ಆಚರಣೆ

ಸಿದ್ದಗಂಗಾ ಮಠದಲ್ಲಿ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತ್ಯುತ್ಸವ ಆಚರಣೆ

ತುಮಕೂರು,ಏ.1- ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಲಿಂಗೈಕ್ಯ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ 117ನೇ ಜಯಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಶ್ರೀಗಳ ಗದ್ದುಗೆಗೆ ಇಂದು ಮುಂಜಾನೆ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹರಗುರು ಚರಮೂರ್ತಿಗಳು ಪೂಜೆ ಸಲ್ಲಿಸಿದರು.ಶ್ರೀಮಠದ ಆವರಣದಲ್ಲಿರುವ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿವಿಧ ಬಗೆಯ ಹೂವುಗಳು ಹಾಗೂ ಹಣ್ಣು ಹಂಪಲುಗಳಿಂದ ಶೃಂಗರಿಸಲಾಗಿತ್ತು.

ಮುಂಜಾನೆಯೇ ಅಭಿಷೇಕ, ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ವಿವಿಧ ಮಠಾೀಶರ ಸಮ್ಮುಖದಲ್ಲಿ ನೆರವೇರಿಸಲಾಯಿತು. ನಂತರ ಶ್ರೀಗಳ ಪುತ್ಥಳಿಯನ್ನು ರುದ್ರಾಕ್ಷಿ ಮಂಟಪದಲ್ಲಿಟ್ಟು ವಿವಿಧ ಜಾನಪದ ಕಲಾತಂಡಗಳೊಂದಿಗೆ ಮಠದ ಆವರಣದಲ್ಲಿ ಮೆರವಣಿಗೆ ನಡೆಸಲಾಯಿತು.ನಂತರ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವಂತೆ, ರಾಜಕೀಯ ಮುಖಂಡರಿಗೆ, ಶಾಸಕರಿಗೆ, ಸಚಿವರಿಗೆ ವೇದಿಕೆ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ. ಬೆಳಗ್ಗೆಯೇ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್ ಅವರು ಶ್ರೀಮಠಕ್ಕೆ ಭೇಟಿ ನೀಡಿ ಶಿವಕುಮಾರಸ್ವಾಮೀಜಿಯವರ ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಿ ನಂತರ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಅವರು, ಅನ್ನ, ಅಕ್ಷರ, ದಾಸೋಹ ಸೇವೆ ಮಾಡುವುದು ಪುಣ್ಯದ ಕೆಲಸ. ಅದನ್ನು ಶಿವಕುಮಾರಸ್ವಾಮೀಜಿಯವರು ಮಾಡಿದ್ದಾರೆ. ಅವರ ಸೇವೆ ಅಜರಾಮರ. ರಾಜ್ಯದ ವಿವಿಧ ಭಾಗಗಳಿಂದ ಬಂದ ಬಡಮಕ್ಕಳು ಶ್ರೀಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಓದಿದವರು ಜೀವನ ಕಟ್ಟಿಕೊಂಡು ಉನ್ನತ ಹುದ್ದೆಯಲ್ಲಿದ್ದಾರೆ. ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.

ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ಬೇಕಿಲ್ಲ. ಆದರೆ ಅವರ ಸೇವೆ ಗುರುತಿಸಿ ಭಾರತರತ್ನ ಕೊಡಬೇಕೆಂದು ಭಕ್ತರ ಒತ್ತಾಯವಾಗಿದೆ. ಕೇಂದ್ರ ಸರ್ಕಾರ ಯಾಕೋ ಏನೋ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗಲಾದರೂ ಶ್ರೀಗಳಿಗೆ ಭಾರತ ರತ್ನ ನೀಡಲಿ ಎಂದು ಒತ್ತಾಯಿಸಿದರು.

ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀ ಮಠಕ್ಕೆ ಆಗಮಿಸಿದ್ದು, ಸರತಿ ಸಾಲಿನಲ್ಲಿ ನಿಂತು ಗದ್ದುಗೆಯ ದರ್ಶನ ಪಡೆದರು. ನಂತರ ಪ್ರತಿಯೊಬ್ಬ ಭಕ್ತರಿಗೂ ದಾಸೋಹ ಕಲ್ಪಿಸಲಾಗಿದ್ದು, ಶ್ರೀ ಮಠದ ವಿವಿಧೆಡೆ ಪ್ರಸಾದವನ್ನು ನೀಡಲಾಯಿತು.

ಪ್ರತಿ ವರ್ಷದಂತೆ ನಾಮಕರಣಕ್ಕೆ ಹೆಸರು ನೋಂದಾಯಿಸಿಕೊಂಡಿರುವ ಪೋಷಕರು ತಮ್ಮ ಮಕ್ಕಳಿಗೆ ಶಿವಕುಮಾರಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಿದರು. ಒಟ್ಟು 117 ಮಕ್ಕಳಿಗೆ ಇಂದು ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಲಾಯಿತು. ಈ ವೇಳೆ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ, ಮಂಡರಗಿಯ ಅನ್ನದಾನೇಶ್ವರ ಶ್ರೀಗಳು, ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಗದುಗಿನ ವೀರಶೈವ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ಸೇರಿದಂತೆ ವಿವಿಧ ಮಠಾೀಶರುಗಳು ಪಾಲ್ಗೊಂಡಿದ್ದರು.

RELATED ARTICLES

Latest News