Wednesday, September 11, 2024
Homeರಾಜ್ಯರಾಜ್ಯಪಾಲರ ತೀರ್ಮಾನ ಪ್ರಶ್ನಿಸಿ ಮೇಲ್ಮನವಿ, ಕಾನೂನು ಹೋರಾಟಕ್ಕಿಳಿದ ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರ ತೀರ್ಮಾನ ಪ್ರಶ್ನಿಸಿ ಮೇಲ್ಮನವಿ, ಕಾನೂನು ಹೋರಾಟಕ್ಕಿಳಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆ.18- ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧರ ರಾಜ್ಯಪಾಲರು ಅಭಿಯೋಜನೆ(ಪ್ರಾಸಿಕ್ಯೂಷನ್‌) ಅನುಮತಿ ನೀಡಿರುವುದರಿಂದ ಕಾನೂನು ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ರಾಜ್ಯಪಾಲರ ಥಾವರ್‌ಚಂದ್‌ ಗೆಹ್ಲೋಟ್‌ ಅವರ ತೀರ್ಮಾನವನ್ನು ಪ್ರಶ್ನಿಸಿ ಸರ್ಕಾರ ಸೋಮವಾರ ಹೈಕೋರ್ಟ್‌ನಲ್ಲಿ ಮೇಲನವಿ ಅರ್ಜಿ ಸಲ್ಲಿಸಲಿದೆ. ದೂರುದಾರರು ಕೂಡ ಕೆವಿಯೆಟ್‌ ಸಲ್ಲಿಸಿದ್ದು, ವಾದಕ್ಕೆ ನುರಿತ ವಕೀಲರನ್ನೇ ನೇಮಿಸಿಕೊಳ್ಳಲು ಮುಂದಾಗಿದ್ದಾರೆ.

ಹೈಕೋರ್ಟ್‌ನಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾದ ಕಪೀಲ್‌ ಸಿಬಾಲ್‌ ಹಾಗೂ ಅಭಿಷೇಕ್‌ ಮನುಸಿಂಗ್ವಿ ವಾದ ಮಂಡಿಸಲಿದ್ದಾರೆ. ಮೇಲನವಿ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕೇ? ಇಲ್ಲವೇ ಹೈಕೋರ್ಟ್‌ನಲ್ಲಿ ಸಲ್ಲಿಸಬೇಕೆ ಎಂಬ ಗೊಂದಲ ಮುಂದುವರೆದಿದೆ.ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಮತ್ತು ವಕೀಲರ ತಂಡ ಸಿದ್ದತೆಯನ್ನು ನಡೆಸಿದ್ದು, ಸೋಮವಾರ ಏಕಸದಸ್ಯ ಪೀಠಕ್ಕೆ ಮೇಲನವಿ ಸಲ್ಲಿಸಿ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ಪ್ರದೀಪ್‌ ಎಂಬುವರು ತಮ ವಾದವನ್ನು ಆಲಿಸದೆ ಯಾವುದೇ ರೀತಿಯ ಆದೇಶ ನೀಡಬಾರದೆಂದು ಹೈಕೋರ್ಟ್‌ನಲ್ಲಿ ಈಗಾಗಲೇ ಕೆವಿಯೆಟ್‌ ಸಲ್ಲಿಸಿದ್ದಾರೆ. ಹೀಗಾಗಿ ನ್ಯಾಯಾಲಯ ಎರಡೂ ಕಡೆ ವಾದ-ವಿವಾದವನ್ನು ಆಲಿಸದೆ ಆದೇಶವನ್ನು ನೀಡಲು ಸಾಧ್ಯವಿಲ್ಲ.

ಈ ಬೆಳವಣಿಗೆಗಳ ನಡುವೆಯೇ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಮಂಗಳವಾರಕ್ಕೆ ತೀರ್ಪು ಕಾಯ್ದಿರಿಸಿದೆ.

ಇನ್ನೊಂದೆಡೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಕೂಡ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ ಬುಧವಾರ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ. ಈ ಎರಡೂ ಅರ್ಜಿಯನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಬೇಕೆಂದು ಸರ್ಕಾರ ನ್ಯಾಯಾಧೀಶರಿಗೆ ಮನವಿ ಮಾಡುವ ಸಂಭವವಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಸಿಎಂ ವಿರುದ್ಧ ಅರ್ಜಿ ಸಲ್ಲಿಕೆ ಮಾಡಿರುವ ದೂರುದಾರರು ರಾಜ್ಯ ಸರ್ಕಾರದ ಅಡಿ ಬಾರದ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ವಿರೋಧ ಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಆದರೆ ಸಿಎಂ ಪರ ನಿಂತಿರುವ ಸಚಿವರು ಸಿಎಂ ರಾಜೀನಾಮೆ ನೀಡುವ ಅಗತ್ಯವಿಲ್ಲ, ನಾವು ಕೂಡ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಖಾಸಗಿ ದೂರುಗಳಿಗೆ ಈಗ ಪ್ರಾಸಿಕ್ಯೂಷಗೆ ಅನುಮತಿ ನೀಡಿರುವ ಬಲ ಸಿಕ್ಕಿದೆ. ಆದ್ದರಿಂದ ಈಗ ಪೊಲೀಸರು ತನಿಖೆಯನ್ನು ಕೈಗೊಳ್ಳಬಹುದು. ಆದರೆ ಸಿಬಿಐ ಅಥವ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದೆ.

ಮುಡಾ ಹಗರಣ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟಗಳನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 17ಎ ಹಾಗೂ ಭಾರತೀಯ ಸುರಕ್ಷಾ ಸಂಹಿತೆಯ 218ರಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮೋದಿಸಿದ್ದಾರೆ. ಪೂರ್ವಾನುಮತಿ ಹಿನ್ನೆಲೆ ಸಿಎಂ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು. ಇದಕ್ಕೂ ಮುನ್ನ ಪೂರ್ವಾನುಮತಿ ಪತ್ರ ಹಾಗೂ ಆರೋಪಕ್ಕೆ ಪುಷ್ಠಿ ನೀಡುವ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು.

ವಿಚಾರಣೆ ನಡೆಸುವ ನ್ಯಾಯಾಲಯವು ತನಿಖೆಗೆ ಆದೇಶಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಲ್ಲದೇ, ನ್ಯಾಯಾಲಯವು ನೇರವಾಗಿ ಕಾಗ್ನಿಝನ್‌್ಸ ದೂರು ದಾಖಲಿಸಿಕೊಂಡು ಸಿಎಂಗೆ ಸಮನ್‌್ಸ ಜಾರಿ ಮಾಡಬಹುದಾಗಿದೆ. ಸಮನ್‌್ಸ ಜಾರಿಯಾದರೆ ನ್ಯಾಯಾಲಯದ ಮುಂದೆ ಸಿದ್ದರಾಮಯ್ಯ ಅವರು ಹಾಜರಾಗುವ ಅನಿವಾರ್ಯತೆ ಎದುರಾಗಲಿದೆ.

ತನಿಖಾ ಸಂಸ್ಥೆಗೆ ತನಿಖೆ ನಡೆಸಲು ನ್ಯಾಯಾಲಯವು ಶಿಫಾರಸು ಮಾಡಲೂಬಹುದಾಗಿದೆ. ಒಂದು ವೇಳೆ ಶಿಫಾರಸು ಮಾಡಿದರೆ ಲೋಕಾಯುಕ್ತದಲ್ಲಿ ಸಿಎಂ ವಿರುದ್ಧ ಎಫ್‌ಐಆರ್‌ ದಾಖಲಿಸಬಹುದು. ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಬಂಧಿಸಬಹುದಾಗಿದೆ.ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾದರೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬೇಕಿದೆ.

RELATED ARTICLES

Latest News