Thursday, December 5, 2024
Homeರಾಜ್ಯಪಿಎಂ ಭೇಟಿ ಮಾಡಿದ ಸಿಎಂ : ರಾಜ್ಯಕ್ಕೆ ನಾಯ್ಯೋಚಿತ ಅನುದಾನಕ್ಕೆ ಮನವಿ

ಪಿಎಂ ಭೇಟಿ ಮಾಡಿದ ಸಿಎಂ : ರಾಜ್ಯಕ್ಕೆ ನಾಯ್ಯೋಚಿತ ಅನುದಾನಕ್ಕೆ ಮನವಿ

CM to meet PM today

ಬೆಂಗಳೂರು,ನ.29-ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಅನುದಾನ ಹಾಗೂ ನೀರಾವರಿ ಯೋಜನೆಗಳ ಬಗ್ಗೆ ಸುದೀರ್ಘ ಮನವಿ ಸಲ್ಲಿಸಿದ್ದಾರೆ. ಕಡಿಮೆ ಅವಧಿಯ ಬೇಡಿಕೆಯಲ್ಲೇ ಭೇಟಿಗೆ ಸಮಯ ನೀಡಿದ್ದಕ್ಕಾಗಿ ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ. ನಾಲ್ಕು ಪ್ರಮುಖ ಬೇಡಿಕೆಗಳ ಜೊತೆಗೆ ರಾಜ್ಯದ ಹಲವು ವಿಚಾರಗಳ ಕುರಿತಂತೆ ಪ್ರಧಾನಿಯವರಿಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

ಮೊದಲಿಗೆ ನಬಾರ್ಡ್ನಿಂದ ರಾಜ್ಯದ ರೈತರಿಗೆ ನೀಡಲಾಗುವ ಕೃಷಿ ಸಾಲದ ರಿಯಾಯಿತಿ ಬಡ್ಡಿದರದ ಪ್ರಮಾಣವನ್ನು 5,600 ಕೋಟಿ ರೂ.ಗಳಿಂದ 2,340 ಕೋಟಿ ರೂ.ಗಳಿಗೆ ಕಡಿತ ಮಾಡಿರುವುದನ್ನು ಗಮನಕ್ಕೆ ತಂದಿದ್ದಾರೆ. ಒಟ್ಟಾರೆ ಶೇ.58 ರಷ್ಟು ಸಾಲದ ಮಿತಿ ಕಡಿತದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ರಾಜ್ಯಸರ್ಕಾರ ಬಡ್ಡಿರಹಿತ ಹಾಗೂ ರಿಯಾಯಿತಿ ಬಡ್ಡಿದರದ ಸಾಲವನ್ನು ರೈತರಿಗೆ ನೀಡುತ್ತಿದೆ. ಆರ್ಬಿಐ ಈ ಬಾರಿ ಸಾಲದ ಮಿತಿಯನ್ನು ಗಣನೀಯವಾಗಿ ಕಡಿಮೆ ಮಾಡಿರುವುದರಿಂದ ಕೃಷಿ ಸಾಲಗಳು ಕಡಿಮೆಯಾಗಲಿದೆ. ರೈತರು ತೊಂದರೆಗೊಳಗಾಗಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸೂಚನೆ ನೀಡಿ ಮೃದು ಕೃಷಿ ಸಾಲಗಳ ಪ್ರಮಾಣವನ್ನು ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ.

2023-24ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಲಾಗಿತ್ತು. ಆದರೆ ಬಿಡುಗಡೆಯಾಗಿಲ್ಲ. ಈ ಬಗ್ಗೆ ಹಲವು ಬಾರಿ ತಾವು ಕೇಂದ್ರದ ಗಮನ ಸೆಳೆದಿದ್ದೇವೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರಕ್ಕೆ ರವಾನಿಸಲಾಗಿದೆ. ಕೂಡಲೇ ಈ ಮೊತ್ತವನ್ನು ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ.
3ನೇಯದಾಗಿ ಕಾವೇರಿಗೆ ಮೇಕೆದಾಟು, ಮಹದಾಯಿಗೆ ಕಳಸಾ -ಬಂಡೂರಿ ಸಮತೋಲಿತ ಅಣೆಕಟ್ಟು ನಿರ್ಮಾಣ ಯೋಜನೆಗಳಿಗೆ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಕೇಂದ್ರ ಪರಿಸರ ಸಚಿವಾಲಯದ ವನ್ಯ ಜೀವಿ ನಿರಾಕ್ಷೇಪಣಾ ಪತ್ರದ ಅಗತ್ಯವಿದೆ. ರಾಜ್ಯಸರ್ಕಾರ ಸ್ವಂತ ಸಂಪನೂಲಗಳಿಂದ ಯೋಜನೆಯನ್ನು ರೂಪಿಸಿದೆ.

ಸುದೀರ್ಘ ಕಾಲದಿಂದ ಇವು ಬಾಕಿ ಉಳಿದಿದ್ದು, ಕೇಂದ್ರದ ಪೂರ್ವಾನುಮತಿಯಿಂದ ಪೂರ್ಣಗೊಳ್ಳಲು ಸಹಾಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.4ನೇಯದಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹಾಗೂ ನಗರ ಸಾರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸುಧಾರಣೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಜಾಗತಿಕವಾಗಿ ಬೆಂಗಳೂರು ತಂತ್ರಜ್ಞಾನ ಮತ್ತು ಅನ್ವೇಷಣಾತಕ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ದೇಶದ ಜಿಡಿಪಿಗೆ ಮಹತ್ವದ ಕೊಡುಗೆ ನೀಡುವ ಮೂರು ನಗರಗಳಲ್ಲಿ ಸ್ಥಾನ ಪಡೆದಿದೆ. ಇಲ್ಲಿ ಬೃಹತ್ ಮೂಲಸೌಲಭ್ಯಗಳ ಹೂಡಿಕೆ ಅಗತ್ಯವಿದೆ. ನಮ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ನಗರದ ವಿಕೇಂದ್ರೀಕರಣ, ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳುತ್ತದೆ. ಈ ಮೊದಲು ಜೂ.29 ರಂದು ಪ್ರಧಾನಿಯವರಿಗೆ ವಿವಿಧ ಯೋಜನೆಗಳ ಮಾಹಿತಿ ಪತ್ರ ಸಲ್ಲಿಸಿದ್ದೇನೆ. ಅದರ ಅನುಸಾರ ವಿಶೇಷ ಅನುದಾನ ನೀಡುವಂತೆ ಕೇಳಿಕೊಂಡಿದ್ದಾರೆ.

ರಾಜ್ಯದ ದ್ವಿತೀಯ ಶ್ರೇಣಿಯ 13 ಮಹಾನಗರ ಪಾಲಿಕೆಯಲ್ಲಿ ಮೂಲಸೌಲಭ್ಯಗಳ ಸುಧಾರಣೆಗೆ ಅಮೃತ್ ಹಾಗೂ ಇತರ ಯೋಜನೆಗಳಡಿ 10 ಸಾವಿರ ಕೋಟಿ ರೂ.ಗಳ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ.
ರಾಜ್ಯಸರ್ಕಾರ ಮಹಾತಗಾಂಧಿ ನಗರ ವಿಕಾಸ ಯೋಜನೆಯಡಿ ಈಗಾಗಲೇ ಮುಂದಿನ ಮೂರು ವರ್ಷಗಳಿಗೆ 2 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲು ನಿರ್ಧರಿಸಿದೆ. ಕೇಂದ್ರ ನಗರಾಭಿವೃದ್ಧಿ ಇಲಾಖೆ 10 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿದರೆ ಮತ್ತಷ್ಟು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಪಾಲು ಹಂಚಿಕೆಯಲ್ಲಿ ತೀವ್ರ ಕೊರತೆಯಾಗಿದೆ. ಶೇ.1 ರಷ್ಟು ಕಡಿತದಿಂದ ಸಾಕಷ್ಟು ಬೃಹತ್ ಮೊತ್ತದ ವ್ಯತ್ಯಾಸ ಕಂಡುಬರುತ್ತಿದೆ. 15ನೇ ಹಣಕಾಸು ಆಯೋಗದಲ್ಲಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಮಧ್ಯಂತರ ವರದಿಯ ಪ್ರಕಾರ, ವಿಶೇಷ ಅನುದಾನಗಳಿಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಬೆಂಗಳೂರಿನ ಹೊರವರ್ತುಲ ರಸ್ತೆಗೆ 6 ಸಾವಿರ ಕೋಟಿ ಹಾಗೂ ಅಂತರ್ಜಲ ಅಭಿವೃದ್ಧಿಗೆ 5,495 ಕೋಟಿ ರೂ.ಗಳನ್ನು ನೀಡಲು ಸಲಹೆ ನೀಡಲಾಗಿತ್ತು. ಇದನ್ನು ಅಂಗೀಕರಿಸಿ ಹಣಕಾಸಿನ ನೆರವು ನೀಡುವಂತೆಯೂ ಮುಖ್ಯಮಂತ್ರಿ ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ.16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನ್ಯಾಯೋಚಿತ ತೆರಿಗೆಯ ಪಾಲು ಮತ್ತು ಕೇಂದ್ರ ತೆರಿಗೆಯಲ್ಲಿ ಕಡಿತಗಳಿಲ್ಲದಂತಹ ನೆರವನ್ನು ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

RELATED ARTICLES

Latest News