Thursday, December 12, 2024
Homeರಾಜ್ಯಸಿಎಂ ಸಿದ್ದರಾಮಯ್ಯ ಬೆಂಬಲಿಗರ ಸ್ವಾಭಿಮಾನಿ ಸಮಾವೇಶ ಅಪಸ್ವರ : ಹೈಕಮಾಂಡ್‌ಗೆ ದೂರು

ಸಿಎಂ ಸಿದ್ದರಾಮಯ್ಯ ಬೆಂಬಲಿಗರ ಸ್ವಾಭಿಮಾನಿ ಸಮಾವೇಶ ಅಪಸ್ವರ : ಹೈಕಮಾಂಡ್‌ಗೆ ದೂರು

Some leaders have complained to the high command on Siddaramaiah Rally

ಬೆಂಗಳೂರು,ನ.29– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಡಿ.5 ರಂದು ಹಾಸನದಲ್ಲಿ ಆಯೋಜಿಸುತ್ತಿರುವ ಸ್ವಾಭಿಮಾನಿ ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ಚಿಹ್ನೆಯಡಿಯಲ್ಲೇ ನಡೆಸ ಬೇಕು. ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಲು ಅವಕಾಶ ನೀಡಬಾರದು ಎಂದು ಕೆಲವು ನಾಯಕರು ಹೈಕಮಾಂಡ್ಗೆ ದೂರು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಈವರೆಗೂ ಮುಡಾ ಹಗರಣವನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳು ಹಲ್ಲು ಮಸೆಯುತ್ತಿದ್ದವು. ಈಗ ಪಕ್ಷದ ಆಂತರಿಕ ವಲಯದಲ್ಲೇ ಒಂದು ಗುಂಪು ಸಿದ್ದರಾಮಯ್ಯ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದು ಖಾಸಗಿ ಸಮಾರಂಭಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೆಸರು ಬಹಿರಂಗ ಪಡಿಸಲಿಚ್ಛಿಸದ ನಾಯಕರೊಬ್ಬರು ಕನ್ನಡದಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದಿರುವ ಪತ್ರವನ್ನು ಎಐಸಿಸಿ ಸ್ವೀಕರಿಸಿದೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯ ಸಂಘಟನೆಗಳಲ್ಲಿ ಆಯೋಜನೆ ಮಾಡುತ್ತಿದ್ದ ಕಾರ್ಯಕ್ರಮಕ್ಕೆ ಅವಕಾಶ ನೀಡದಿರುವ ಬಗ್ಗೆ ಎಂದು ಉಲ್ಲೇಖಿಸಲಾಗಿದೆ.

ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಯಾದಂದಿನಿಂದಲೂ ಪಕ್ಷದ ವೇದಿಕೆ ಮತ್ತು ಚಿಹ್ನೆಯನ್ನು ದೂರವಿಟ್ಟು ಬೇರೆಬೇರೆ ಸಂಘಟನೆಗಳ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬಂದಿದ್ದಾರೆ. ಕಳೆದ ಬಾರಿ ಹುಟ್ಟುಹಬ್ಬ ಆಚರಿಸುವಾಗಲೂ ಪಕ್ಷವನ್ನು ದೂರವಿಟ್ಟಿದ್ದರು. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ನಾಯಕರೂ ಕಾಂಗ್ರೆಸ್ ಪಕ್ಷದವರೇ ಆಗಿದ್ದರು. ಪಕ್ಷದ ಚಿಹ್ನೆಯಡಿ ಕಾರ್ಯಕ್ರಮ ಮಾಡಿದ್ದರೆ ಕಾಂಗ್ರೆಸ್ಗೆ ಮತ್ತಷ್ಟು ಬಲ ಬರುತ್ತಿತ್ತು. ಈ ಬಗ್ಗೆ ಯಾವ ವರೀಷ್ಠರೂ ಗಮನ ಹರಿಸಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ನಿಂದ ಆಯ್ಕೆಯಾಗಿ 2 ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಮತ್ತು ಸಂಪುಟದಲ್ಲಿ ಸಚಿವರಾಗಿರುವ ಕೆಲವು ಮಂದಿ ಡಿ.5 ರಂದು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲು ಮುಂದಾಗಿದ್ದಾರೆ.ತಮಗೆ ಅಧಿಕಾರ ಕೊಟ್ಟ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ದೂರವಿಟ್ಟಿರುವುದು ಕಾರ್ಯಕರ್ತರಿಗೆ ಬೇಸರ ತರಿಸುವ ಸಂಗತಿಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬೇರೆಬೇರೆ ನಾಯಕರೂ ಸಹ ಇದೇ ರೀತಿ ತಮ ವೈಯಕ್ತಿಕ ಲಾಭಕ್ಕಾಗಿ ಪಕ್ಷವನ್ನು ದುರುಪಯೋಗಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಏನಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಹಾಗೂ ಕೆಲ ಸಚಿವರಿಗೆ ತಿಳಿ ಹೇಳಿ ಪಕ್ಷದ ಚಿಹ್ನೆಯಡಿ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಎಲ್ಲಾ ರೂಪುರೇಷೆಗಳನ್ನು ಕಾಂಗ್ರೆಸ್ ನಾಯಕರೇ ಕಾಂಗ್ರೆಸ್ ಕಚೇರಿಯಲ್ಲೇ ಮಾಡುತ್ತಾರೆ. ಆದರೆ ಕಾರ್ಯಕ್ರಮಕ್ಕೆ ಮಾತ್ರ ಕಾಂಗ್ರೆಸ್ ಚಿಹ್ನೆ ಏಕೆ ಬೇಡ ಎಂಬ ಪ್ರಶ್ನೆ ಕಾರ್ಯಕರ್ತರದ್ದಾಗಿದ್ದು, ಈ ಬಗ್ಗೆ ವರಿಷ್ಠರು ಗಮನ ಹರಿಸಬೇಕು. ಅಧಿಕಾರ ಕೊಟ್ಟ ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಕಾರ್ಯಕ್ರಮವನ್ನು ಮಾಡುವ ಉದ್ದೇಶವಾದರೂ ಏನು ಎಂಬುದನ್ನು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಯಾವುದೇ ಸ್ವಾರ್ಥವಿಲ್ಲದೆ ಪಕ್ಷಕ್ಕಾಗಿ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುವಂತೆ ಮುಖಂಡರು ಮನವಿ ಮಾಡಿದ್ದಾರೆ.

RELATED ARTICLES

Latest News