ಬೆಂಗಳೂರು,ಏ.16- ಪ್ರಸಕ್ತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗದು, ಹಣ, ಮದ್ಯ, ಚಿನ್ನಾಭರಣ ದಾಖಲೆ ಪ್ರಮಾಣದಲ್ಲಿ ಜಪ್ತಿಯಾಗುತ್ತಿರುವುದಷ್ಟೇ ಅಲ್ಲ, ದೂರುಗಳ ಸುರಿಮಳೆಯೂ ಆಗುತ್ತಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಬಂದಾಗಿನಿಂದಲೂ ನಿನ್ನೆಯವರೆಗೆ 357.91 ಕೋಟಿ ರೂ.ನಷ್ಟು ಹಣ ಹಾಗೂ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
1,751 ಎಫ್‍ಐಆರ್‍ಗಳನ್ನು ದಾಖಲಿಸಿದ್ದು, 1,388 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿವಿಜಿಲ್ ಅಪ್ಲಿಕೇಶನ್ ಮೂಲಕ 23,362 ಸ್ವೀಕರಿಸಲಾಗಿತ್ತು. ಈ ಪೈಕಿ 13,935 ದೂರುಗಳು ಅನುಮತಿ ಇಲ್ಲದ ಪೋಸ್ಟರ್, ಬ್ಯಾನರ್‍ಗಳಿಗೆ ಸಂಬಂಧಿಸಿದ್ದರೆ, 1,076 ದೂರುಗಳು ಕಡ್ಡಾಯ ಘೋಷಣೆಯಿಲ್ಲದ ಪೋಸ್ಟರ್‍ಗಳಿಗೆ ಸಂಬಂಧಿಸಿವೆ. ಹಣ ವಿತರಣೆ ಬಗ್ಗೆ 191 ಉಚಿತ ಉಡುಗೊರೆ, ಕೂಪನ್‍ಗಳಿಗೆ ಸಂಬಂಧಿಸಿದಂತೆ 113, ಮದ್ಯ ಹಂಚಿಕೆಗೆ ಸಂಬಂಧಪಟ್ಟಂತೆ 129 ಸೇರಿದಂತೆ ವಿವಿಧ ರೀತಿಯ ದೂರುಗಳನ್ನು ಸಲ್ಲಿಸಲಾಗಿದೆ.
ಒಟ್ಟು 22,045 ದೂರುಗಳು ಸರಿಯಾಗಿವೆ ಎಂದು ಕಂಡುಹಿಡಿದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಇ-ಮೇಲ್ ಮೂಲಕ 183, ಪತ್ರಗಳ ಮೂಲಕ 568 ಹಾಗೂ ಸಾಮಾಜಿಕ ಜಾಲತಾಣ ಮಾಧ್ಯಮದ ಮೂಲಕ 53 ದೂರುಗಳನ್ನು ಸ್ವೀಕರಿಸಿದ್ದು, ಒಟ್ಟು 860 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.
ಸುವಿಧ ಅಡಿಯಲ್ಲಿ ಅನುಮತಿಗಾಗಿ 5,337 ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 3,918 ಅರ್ಜಿಗಳನ್ನು ಅಂಗೀಕರಿಸಿದ್ದು, 833 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 220 ಅರ್ಜಿಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪೊಲೀಸ್ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು 104.27 ರೂ. ಮೌಲ್ಯದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ, ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿದ್ದರೆ, ಅಬಕಾರಿ ಇಲಾಖೆಯವರು 160.33 ಕೋಟಿ ರೂ. ಮೌಲ್ಯದ ಮದ್ಯ, ಡ್ರಗ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಆದಾಯ ತೆರಿಗೆ ಇಲಾಖೆಯವರು 13.80 ಕೋಟಿ ರೂ. ಮೌಲ್ಯದ ನಗದು, ಚಿನ್ನ, ಬೆಳ್ಳಿ, ವಜ್ರದ ವಸ್ತುಗಳನ್ನು ವಶಪಡಿಸಿಕೊಂಡಿದ್ದರೆ, ವಾಣಿಜ್ಯ ತೆರಿಗೆ ಅಧಿಕಾರಿಗಳು 79.51 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಅಬಕಾರಿ ಇಲಾಖೆಯವರು 35.24 ಲಕ್ಷ ರೂ. ಮೌಲ್ಯದ 4,978.485 ಲೀ ಮದ್ಯವನ್ನು ಜೆ.ಪಿ.ನಗರದಲ್ಲಿ ಮತ್ತು ವಿದ್ಯಾಪೀಠ ವೃತ್ತದಲ್ಲಿ ವಶಪಡಿಸಿಕೊಂಡಿದ್ದಾರೆ.77.84 ಲಕ್ಷ ರೂ. ಮೌಲ್ಯದ 4,371.970 ಲೀ ಮದ್ಯವನ್ನು ಬೆಂಗಳೂರು ವಿಹಾರ ಕೇಂದ್ರ ಹಾಗೂ ಬನಶಂಕರಿಯಲ್ಲಿ ವಶಪಡಿಸಿಕೊಂಡಿದ್ದರೆ, 20 ಲಕ್ಷ ರೂ. ನಗದನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.