Thursday, December 26, 2024
Homeರಾಜಕೀಯ | Politicsಯತ್ನಾಳ್‌ ವಿರುದ್ಧ ಶಿಸ್ತು ಕ್ರಮ ಜರಿಗಿಸುವ ಕುರಿತು ಬಿಜೆಪಿಯಲ್ಲೇ ಗೊಂದಲ

ಯತ್ನಾಳ್‌ ವಿರುದ್ಧ ಶಿಸ್ತು ಕ್ರಮ ಜರಿಗಿಸುವ ಕುರಿತು ಬಿಜೆಪಿಯಲ್ಲೇ ಗೊಂದಲ

Confusion within BJP over disciplinary action against Yatnal

ಬೆಂಗಳೂರು,ಡಿ.3-ಸ್ವಪಕ್ಷೀಯರ ವಿರುದ್ಧವೇ ಬಹಿರಂಗವಾಗಿ ಬೆಂಕಿ ಉಗುಳುತ್ತಿರುವ ಖಾಯಂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಶಿಸ್ತು ಕ್ರಮ ಜರಿಗಿಸುವ ಕುರಿತು ಬಿಜೆಪಿಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ತಮ ಹಾಗೂ ಕುಟುಂಬದವರ ವಿರುದ್ಧ ವಾಚಮ ಗೋಚರವಾಗಿ ನಾಲಿಗೆ ಹರಿಬಿಟ್ಟು ಟೀಕೆ ಮಾಡುತ್ತಿರುವ ಯತ್ನಾಳ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಬೇಕೆಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಅವರ ಬಣದ ಪ್ರಮುಖ ಬೇಡಿಕೆ.

ಆದರೆ ಬಿಜೆಪಿಯೊಳಗಿರುವ ವಿಜಯೇಂದ್ರ ಹಾಗೂ ಯಡಿಯೂರಪ್ಪ ಬಣ ಯತ್ನಾಳ್‌ ಅವರನ್ನು ಪಕ್ಷದಿಂದ ಕಿತ್ತು ಹಾಕುವಂತಹ ಕಠಿಣ ಕ್ರಮ ಜರುಗಿಸದೆ ಇನ್ನು ಮುಂದೆ ಲಕ್ಷ್ಮಣ ರೇಖೆ ದಾಟದೆ ಪಕ್ಷ ಹಾಗೂ ನಾಯಕರ ವಿರುದ್ಧ ಯಾವುದೇ ಹೇಳಿಕೆ ನೀಡಬಾರದೆಂದು ಎಚ್ಚರಿಕೆ ಕೊಟ್ಟು ಬಿಕ್ಕಟ್ಟು ಇತ್ಯರ್ಥಪಡಿಸಬೇಕೆಂಬ ಒಲವು ತೋರಿದೆ.

ಯತ್ನಾಳ್‌ ಪ್ರಕರಣದಲ್ಲಿ ವಿಜಯೇಂದ್ರ ಬಣ ಮೇಲಗೈ ಸಾಧಿಸಿದರೆ ಬರುವ ದಿನಗಳಲ್ಲಿ ತಮಗೂ ತಮ ರಾಜಕೀಯ ಭವಿಷ್ಯಕ್ಕೆ ಕಂಟಕವಾಗಬಹುದೆಂಬ ಕಾರಣಕ್ಕಾಗಿ ಎರಡು ಕಡೆ ಸಮತೋಲನ ಸಾಧಿಸಲು ಮುಂದಾಗಿದ್ದಾರೆ.

ಹೀಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಪ್ರಭಾವಿ ಸಚಿವರೊಬ್ಬರು ಯತ್ನಾಳ್‌ ಹಾಗೂ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಳ್ಳದೆ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಪರಿಹರಿಸಲು ದೆಹಲಿ ನಾಯಕರ ಮೇಲೆ ಒತ್ತಡ ಹಾಕಿದ್ದಾರೆ.

ಇದಕ್ಕೆ ನೀಡುತ್ತಿರುವ ಕಾರಣಗಳೆಂದರೆ ಕಲ್ಯಾಣ ಮತ್ತು ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯ ಪ್ರಬಲವಾಗಿದ್ದು, ಯತ್ನಾಳ್‌ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಸಮುದಾಯ ಪಕ್ಷಕ್ಕೆ ಕೈಕೊಡಬಹುದೆಂಬ ಆತಂಕವನ್ನು ಹೊರಹಾಕಿದ್ದಾರೆ.

ಹೀಗಾಗಿ ಯತ್ನಾಳ್‌ ಮತ್ತು ವಿಜಯೇಂದ್ರ ಅವರನ್ನು ಪರಸ್ಪರ ಮುಖಾಮುಖಿ ಕೂರಿಸಿ ಬಿಕ್ಕಟ್ಟನ್ನು ಇತ್ಯರ್ಥಪಡಿಸಬೇಕು. ಇಲ್ಲಿ ಯಾರೊಬ್ಬರ ಕೈ ಮೇಲಾಗುವುದಾಗಲಿ ಅಥವಾ ಹಿನ್ನಡೆಯಾಗದಂತೆ ಅತ್ಯಂತ ಜಾಗರೂಕತೆಯಿಂದ ಸಮಸ್ಯೆಯನ್ನು ಪರಿಹರಿಸುವಂತೆ ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿದ್ದಾರೆ.

ಬಿಜೆಪಿ ಬಣಗಳ ಬಡಿದಾಟದಿಂದ ಹೈಕಮಾಂಡ್‌ ತಟಸ್ಥವಾಗಿದೆ. ವಿಜಯೇಂದ್ರ ಪರವೂ ಇಲ್ಲ, ಯತ್ನಾಳ್‌ ವಿರುದ್ಧವೂ ಇಲ್ಲ ಎನ್ನಲಾಗುತ್ತಿದೆ. ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿದ್ದ ವಿಜಯೇಂದ್ರ, ಯತ್ನಾಳ್‌ ವಿರುದ್ಧ ಕ್ರಮಕೈಕೊಳ್ಳುವಂತೆ ಒತ್ತಡ ಹೇರಿದ್ದರು. ಹೀಗಾಗಿ ವಿಜಯೇಂದ್ರ ಒತ್ತಡಕ್ಕೆ ಮಣಿದು ಹೈಕಮಾಂಡ್‌ ಯತ್ನಾಳ್‌ಗೆ ನೋಟಿಸ್‌‍ ಜಾರಿ ಮಾಡಿದೆ. ಹತ್ತು ದಿನಗಳಲ್ಲಿ ಉತ್ತರ ನೀಡುವಂತೆ ಹೇಳಿದೆ. ಆದರೆ 10 ದಿನಗಳ ಬಳಿಕ ಹೈಕಮಾಂಡ್‌ ಯಾವ ಕ್ರಮಕೈಗೊಳ್ಳುತ್ತದೆ ಎನ್ನುವುದೇ ಮುಂದಿರುವ ಪ್ರಶ್ನೆ.

ಒಂದು ವೇಳೆ ವಿಜಯೇಂದ್ರ ಬದಲಿಸಿದರೆ ಲಿಂಗಾಯತರನ್ನು ಎದುರು ಹಾಕಿಕೊಂಡಂತಾಗುತ್ತದೆ. ಈಗಾಗಲೇ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಕೈಸುಟ್ಟುಕೊಂಡಾಗಿದೆ. ಈಗ ಏಕಾಏಕಿ ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷದಿಂದ ಕೆಳಗಿಳಿಸಿದರೆ ಲಿಂಗಾಯತ ಸಮುದಾಯವನ್ನು ಮತ್ತಷ್ಟು ಕೆರಳಿಸಿದಂತಾಗುತ್ತದೆ ಎನ್ನುವುದು ಹೈಕಮಾಂಡ್‌ ನಾಯಕರ ತಲೆಯಲ್ಲಿದೆ.

ಯತ್ನಾಳ್‌ ವಿರುದ್ಧ ಕ್ರಮಕೈಗೊಂಡರೇ ಹಿಂದುತ್ವ ಎಂದು ಹೇಳಿಕೊಂಡು ತಿರುಗಾಡಿ ಕಟ್ಟರ್‌ ಹಿಂದುತ್ವವಾದಿಗಳನ್ನು ತುಳಿಯುತ್ತೀರಿ ಎನ್ನುವ ಆರೋಪಗಳು ಕೇಳಿಬರುತ್ತವೆ. ಇದು ಹೈಕಮಾಂಡ್‌ ಗಮನಕ್ಕೂ ಇದೆ. ಈಗಾಗಲೇ ಅನಂತ್‌ಕುಮಾರ್‌ ಹೆಗಡೆ ಸೇರಿದಂತೆ ಕಟ್ಟರ್‌ ಹಿಂದೂ ರಾಷ್ಟ್ರೀಯವಾದಿ ನಾಯಕರನ್ನು ಕರ್ನಾಟಕ ಬಿಜೆಪಿಯಲ್ಲಿ ಸೈಡ್ಲೈನ್‌ ಮಾಡಲಾಗಿದೆ ಎನ್ನುವ ಆರೋಪಗಳು ಇವೆ. ಇದರ ಮಧ್ಯ ಇದೀಗ ವಿಜಯೇಂದ್ರ ಮಾತು ಕಟ್ಟಿಕೊಂಡು ಯತ್ನಾಳ್‌ ವಿರುದ್ಧ ಕ್ರಮಕೈಗೊಂಡರೇ ಮತ್ತಷ್ಟು ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವುದು ಹೈಕಮಾಂಡ್‌ಗೆ ಗೊತ್ತಿದೆ. ಹೀಗಾಗಿ ಯತ್ನಾಳ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಸ್ಥಿತಿಯಲ್ಲಿದೆೆ.

ಒಂದು ವೇಳೆ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳುವುದೇ ಆಗಿದ್ದರೆ ಈ ಹಿಂದೆಯೇ ಅಮಾನತು ಮಾಡಬಹುದಿತ್ತು. ಆದರೆ ಅದನ್ನು ಹೈಕಮಾಂಡ್‌ ಮಾಡಿಲ್ಲ. ಕೇವಲ ಯತ್ನಾಳ್‌ ಬಿಎಸ್‌‍ವೈ ಕುಟುಂಬದ ವಿರುದ್ಧ ಆರೋಪ ಮಾಡಿದಾಗಲೆಲ್ಲ ನೋಟಿಸ್‌‍ ನೀಡಿ ಸುಮನಾಗಿದೆ. ಈಗಲೂ ಅದೇ ಆಗಲಿದೆ.

ಯತ್ನಾಳ್‌ ವಿರುದ್ಧ ಕ್ರಮಕ್ಕೆ ಬಿಗಿಪಟ್ಟು:
ಈ ನಡುವೆ ಯತ್ನಾಳ್‌ಗೆ ಕೇವಲ ಶೋಕಾಸ್‌‍ ನೋಟೀಸ್‌‍ ಮಾತ್ರ ನೀಡಿ ಉತ್ತರ ಪಡೆದು ಹೈಕಮಾಂಡ್‌ ಸುಮನಾಗಬಹುದು ಎಂಬ ಅನುಮಾನ ವಿಜಯೇಂದ್ರ ಆಪ್ತರಲ್ಲಿ ಮನೆ ಮಾಡಿದೆ. ಅದಕ್ಕಾಗಿ ಯತ್ನಾಳ್‌ ಗೆ ಕೇವಲ ನೋಟೀಸ್‌‍ ಕೊಡದೇ ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯವನ್ನು ವಿಜಯೇಂದ್ರ ನಿಷ್ಠರು ಶುರು ಮಾಡಿದ್ದಾರೆ.

ಎಂ.ಪಿ.ರೇಣುಕಾಚಾರ್ಯ ನೇತೃತ್ವದ ವಿಜಯೇಂದ್ರ ಬಣ ಈಗಾಗಲೇ ಎಲ್ಲಾ ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದು, ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ ಮಾಡುವ ಮೂಲಕ ಬಿಎಸ್‌‍ವೈ ಹಾಗೂ ವಿಜಯೇಂದ್ರ ಪರವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಪರೋಕ್ಷವಾಗಿ ಹೈಕಮಾಂಡ್‌ಗೂ ತಮ ಶಕ್ತಿ ಏನು ಎನ್ನುವುದನ್ನು ತೋರಿಸಲು ಮುಂದಾಗಿದೆ.

RELATED ARTICLES

Latest News