Thursday, May 2, 2024
Homeರಾಜ್ಯನಿಗಮ-ಮಂಡಳಿಗಳಿಗೆ ನೇಮಕ ವಿಳಂಬ, ಕಾರ್ಯಕರ್ತರು ಸಿಡಿಮಿಡಿ

ನಿಗಮ-ಮಂಡಳಿಗಳಿಗೆ ನೇಮಕ ವಿಳಂಬ, ಕಾರ್ಯಕರ್ತರು ಸಿಡಿಮಿಡಿ

ಬೆಂಗಳೂರು,ಜ.15- ವಿಧಾನಸಭೆ ಚುನಾವಣೆಯಲ್ಲಿ ಹಗಲು-ರಾತ್ರಿ ದುಡಿದು ಪಕ್ಷ ಅಧಿಕಾರಕ್ಕೆ ತಂದ ಕಾರ್ಯ ಕರ್ತರಿಗೆ ಆಡಳಿತದಲ್ಲಿ ಸಹಭಾಗಿತ್ವ ಸಿಗದೆ ದಿನೇದಿನೇ ಅಸಹನೆ ಹೆಚ್ಚುತ್ತಿರುವುದು ಕಂಡುಬಂದಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದರೂ ರಾಜ್ಯದಲ್ಲಿ ನಿಗಮಮಂಡಳಿಗಳ ನೇಮಕಾತಿ ಸೇರಿದಂತೆ ವಿವಿಧ ರಾಜಕೀಯ ಸ್ಥಾನಮಾನಗಳು ಸಿಗದೆ ಕಾರ್ಯಕರ್ತರು ಸಿಡಿಮಿಡಿಗೊಳ್ಳುತ್ತಿದ್ದಾರೆ.

ಸುಮಾರು 80 ಕ್ಕೂ ಹೆಚ್ಚು ನಿಗಮ ಮಂಡಳಿಗಳು 3 ಸಾವಿರಕ್ಕೂ ಹೆಚ್ಚು ಸ್ಥಳೀಯ ಸಮಿತಿಗಳ ಹುದ್ದೆಗಳು, ಪ್ರಾಧಿಕಾರ, ಅಕಾಡೆಮಿ ಸೇರಿದಂತೆ ನಾನಾ ರೀತಿಯ ರಾಜಕೀಯ ಅವಕಾಶಗಳಿದ್ದರೂ ಈವರೆಗೂ ಯಾವುದಕ್ಕೂ ನೇಮಕಾತಿಗಳಾಗಿಲ್ಲ. ಪ್ರತಿ ಬಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ದೆಹಲಿಗೆ ಭೇಟಿ ನೀಡುವಾಗ ನಿಗಮ ಮಂಡಳಿಗಳ ಕುರಿತು ಚರ್ಚೆ ನಡೆಸುವುದಾಗಿ ಕಾರ್ಯಕರ್ತರ ಮೂಗಿಗೆ ತುಪ್ಪ ಸವರಲಾಗುತ್ತದೆ.ಆದರೆ ಅಲ್ಲಿಗೆ ಹೋದ ಬಳಿಕ ಚರ್ಚೆಯಾಗುವುದೇ ಬೇರೆ ವಿಚಾರಗಳು.

ಹೀಗಾಗಿ ದಸರಾ, ದೀಪಾವಳಿ, ಹೊಸ ವರ್ಷ, ಸಂಕ್ರಾಂತಿ ಎಂದು ಒಂದೊಂದು ಹಬ್ಬದ ಸಂದರ್ಭದಲ್ಲೂ ಅವಕಾಶ ಸಿಗಬಹುದು ಎಂದು ಕಾದು ಕುಳಿತಿದ್ದವರಿಗೆ ನಿರಾಶೆಯ ಬುತ್ತಿ ಭಾರವಾಗಲಾರಂಭಿಸಿದೆ.ಹೀಗಾಗಿ ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ಸಚಿವರುಗಳು ಕೂಡ ಪ್ರತಿದಿನ ಕಾರ್ಯಕರ್ತರು, ಮುಖಂಡರುಗಳ ಅರ್ಜಿಗಳನ್ನು ಪಡೆದು ಭರವಸೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಒಂದಿಷ್ಟು ವರ್ಗಾವಣೆ ಹೊರತುಪಡಿಸಿ ಉಳಿದ ಯಾವ ಕೆಲಸಗಳೂ ಆಗುತ್ತಿಲ್ಲ ಎಂಬ ಅಸಹನೆಯನ್ನು ಹೊರಹಾಕುತ್ತಿದ್ದಾರೆ.

ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿಯೂ ನೇಮಕಾತಿಗಳ ಕುರಿತು ಪ್ರಸ್ತಾಪಗಳಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರುವ ಹುದ್ದೆಗಳಿಗೇ ನೇಮಕಾತಿ ಮಾಡಿಲ್ಲ. ಅದರ ಜೊತೆಗೆ ಪಂಚಖಾತ್ರಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸುವುದಾಗಿ ಘೋಷಿಸಿದ್ದರು. ಇದು ಅನಗತ್ಯವಾಗಿ ವಿವಾದ ಹುಟ್ಟಿಹಾಕಿದ್ದನ್ನು ಹೊರತುಪಡಿಸಿದರೆ ಬೇರೆ ಯಾವ ಲಾಭವಾದಂತೆಯೂ ಕಂಡುಬರುತ್ತಿಲ್ಲ.

56 ದೇಶಗಳ 10 ಕೋಟಿ ಮನೆಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ

ಇದೇ ತಿಂಗಳ 21 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಪಕ್ಷದ ನಾಯಕರು ಈಗ ಅದರತ್ತ ಗಮನ ಹರಿಸುತ್ತಿದ್ದಾರೆ. ಅಷ್ಟರಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಪೂರ್ವ ತಯಾರಿಗಳೂ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ 2-3 ತಿಂಗಳು ಕಾಲಾಹರಣವಾಗುವ ನಿರೀಕ್ಷೆಗಳಿವೆ.ಒಟ್ಟಾರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಇದೇ ರೀತಿ ಸಮಯ ವ್ಯರ್ಥ ಮಾಡಿ ಕೊನೆಗೆ ನೇಮಕಾತಿ ಮಾಡಿದರೂ ಕೂಡ ಕಾಲಾವ ಕಡಿಮೆ ಸಿಗಲಿದೆ ಎಂಬ ಅತೃಪ್ತಿ ಕಾರ್ಯಕರ್ತರನ್ನು ಕಾಡುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರೇ ಆಸ್ತಿ ಎನ್ನುವ ನಾಯಕರು ಅಧಿಕಾರ ಸಿಗುತ್ತಿದ್ದಂತೆ ಅದರ ಮೋಜಿನಲ್ಲಿ ಮೈಮರೆಯುತ್ತಾರೆ ಎಂಬ ಟೀಕೆಗಳಿವೆ. ಸ್ಥಳೀಯವಾಗಿ ಆರಾಧನ, ಆಶಯ, ವಿವಿಧ ನಗರ ಪ್ರಾಧಿಕಾರಗಳು, ಸ್ಥಳೀಯ ಸಂಸ್ಥೆಗಳ ಸದಸ್ಯತ್ವ ಸೇರಿದಂತೆ ಕೆಳ ಹಂತದಲ್ಲಿ 3 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ. ಅವುಗಳಿಗೆ ಒಂದು ವಾರದಲ್ಲೇ ನೇಮಕಾತಿ ಮಾಡಬೇಕು ಎಂದು ಮುಖ್ಯಮಂತ್ರಿಯವರು ಎಲ್ಲಾ ಶಾಸಕರಿಗೂ ತಾಕೀತು ಮಾಡಿದರು. ಆದರೆ ಸ್ಥಳೀಯ ಮಟ್ಟದಲ್ಲಿ ಈವರೆಗೂ ನೇಮಕಾತಿಯ ಪಟ್ಟಿಗಳೇ ಸಿದ್ಧವಾಗಿಲ್ಲ.
ನಿಗಮ ಮಂಡಳಿಗಳ ನೇಮಕಾತಿಯಂತೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡುವಿನ ಭಿನ್ನಮತದಿಂದಲೇ ನೆನೆಗುದಿಗೆ ಬಿದ್ದಿದೆ ಎಂಬ ಆರೋಪಗಳಿವೆ.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಉಮೇದಿನಲ್ಲಿರುವ ಕಾಂಗ್ರೆಸ್‍ಗೆ ಕಾರ್ಯಕರ್ತರ ನಿರುತ್ಸಾಹ ಸವಾಲಾಗುವ ಸಾಧ್ಯತೆಗಳಿವೆ. ಒಂದೆಡೆ ನಿಗಮ ಮಂಡಳಿಗಳ ನೇಮಕಾತಿ ಮಾಡಿದರೆ ಅತೃಪ್ತರ ಬಂಡಾಯಗಳು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕವೂ ನಾಯಕರನ್ನು ಕಾಡುತ್ತಿದೆ.ಒಟ್ಟಾರೆ ಕಾರ್ಯಕರ್ತರ ಮೂಗಿಗೆ ತುಪ್ಪ ಸವರುತ್ತಲೇ ಸಿದ್ದರಾಮಯ್ಯನವರ ಸರ್ಕಾರ ಒಂದು ವರ್ಷ ಕಾಲ ಕಳೆದಂತಾಗಿದೆ.

RELATED ARTICLES

Latest News