Wednesday, May 1, 2024
Homeರಾಜ್ಯಗ್ಯಾರಂಟಿಗಳ ಬೇಡ ಎನ್ನುವ ಧೈರ್ಯ ಬಿಜೆಪಿಗಿದೆಯೇ?: ಸಚಿವ ಮಧು ಬಂಗಾರಪ್ಪ

ಗ್ಯಾರಂಟಿಗಳ ಬೇಡ ಎನ್ನುವ ಧೈರ್ಯ ಬಿಜೆಪಿಗಿದೆಯೇ?: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ,ಜ.2- ಬಿಜೆಪಿಯವರು ಪಂಚಖಾತ್ರಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯಯೋಜನೆಯ ಸೌಲಭ್ಯವನ್ನು ಬಿಜೆಪಿ ಕಾರ್ಯಕರ್ತರು ಪಡೆಯಬಾರದು ಎಂದು ಆ ಪಕ್ಷದ ನಾಯಕರು ಕರೆ ನೀಡಲಿ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಖಾತ್ರಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ಬಿಂಬಿಸುತ್ತಿದ್ದಾರೆ. ಈ ಸೌಲಭ್ಯಗಳಿಂದ ಜನರ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ಬಿಜೆಪಿಯವರೂ ಸೇರಿದಂತೆ ಎಲ್ಲರೂ ಯೋಜನೆಯ ಲಾಭ ಪಡೆಯಬೇಕೆಂಬುದು ನಮ್ಮ ಆಶಯ. ಆದರೆ ಟೀಕೆ ಮಾಡು ವವರು ತಮ್ಮ ಕಾರ್ಯಕರ್ತರಿಗೆ ಯೋಜನೆ ಲಾಭ ಪಡೆಯಬೇಡಿ ಎಂದು ಹೇಳುವ ಧೈರ್ಯವಿದೆಯೇ ಎಂದರು.

ಶಿವಮೊಗ್ಗ-ಶಿಕಾರಿಪುರದಲ್ಲಿ ಯಾವುದಾದರೂ ವರ್ಗಾವಣೆಗಳಾ ದರೆ ಅದನ್ನು ತಡೆಹಿಡಿಯುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಒತ್ತಡ ಹಾಕುತ್ತಿದ್ದಾರೆ. ಈಗಲೂ ಇನ್ನೂ ತಮ್ಮದೇ ಸರ್ಕಾರ ಇದೆ ಎಂಬ ಭ್ರಮೆಯಲ್ಲಿ ಅವರು ಇದ್ದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.

ಕಳೆದ 14, 15 ವರ್ಷಗಳಿಂದ ಇಲ್ಲೇ ಟಿಕಾಣಿ ಹೂಡಿದವರನ್ನು ನಾನೇ ಪತ್ರ ಬರೆದು ಎತ್ತಂಗಡಿ ಮಾಡಿಸಿದ್ದೇನೆ. ಅದು ಯಾರೆಂದು ಎಲ್ಲರಿಗೂ ಗೊತ್ತು. ಹೆಸರು ಹೇಳಿ ಅವರನ್ನು ನಾನು ದೊಡ್ಡವರನ್ನಾಗಿ ಮಾಡುವುದಿಲ್ಲ. ಇಲ್ಲಿಂದಲೇ ಸರ್ಕಾರವನ್ನು ನಿಯಂತ್ರಣ ಮಾಡುತ್ತೇವೆ ಎಂಬ ಉದ್ಧಟತನಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದರು.

ನನ್ನ ಕಾರಿನ ಅಪಘಾತ ಪ್ರಕರಣವನ್ನು ಅನಗತ್ಯವಾಗಿ ವೈಭವೀಕರಿಸಲಾಯಿತು. ನನ್ನ ಕಾರು 2 ಕಿ.ಮೀ. ವೇಗದಲ್ಲಿತ್ತು. ಉತ್ತರ ಪ್ರದೇಶದ ಲಾರಿ ಚಾಲಕ ಬಂದು ಡಿಕ್ಕಿ ಹೊಡೆದ. ಅದೊಂದು ಸಣ್ಣ ಮತ್ತು ಮೂರ್ಖತನದ ಅಪಘಾತ. ನನಗಾಗಲೀ, ಸಿಬ್ಬಂದಿಗಾಗಲೀ ಯಾರಿಗೂ ತೊಂದರೆಯಾಗಲಿಲ್ಲ. ತಕ್ಷಣವೇ ನಾನು ಪೊಲೀಸರ ಜೀಪಿನಲ್ಲಿ ಸದರಿ ಲಾರಿ ಚಾಲಕನನ್ನು ಕೂರಿಸಿಕೊಂಡು ಪ್ರಯಾಣವನ್ನು ಮುಂದುವರೆಸಿದೆ. ಕೊನೆಗೆ ಲಾರಿ ಚಾಲಕನನ್ನು ಹೊಡೆಯಬೇಡಿ. ಊಟ ಕೊಡಿಸಿ ಎಂದು ಪೊಲೀಸರಿಗೆ ಹಣ ಕೊಟ್ಟು ಹೋದೆ ಎಂದು ಹೇಳಿದರು.

6 ಕೋಟಿ ಆರ್ಥಿಕ ವಹಿವಾಟಿನ ಪ್ರಕರಣ ಸಂಪೂರ್ಣ ಖಾಸಗಿಯಾದ ವಿಚಾರ. ಅದನ್ನು ಬೇರೆ ರೀತಿ ಬಿಂಬಿಸಲಾಗಿದೆ. ಹೀಗಾಗಿ ನಾನು ಅದರ ಕುರಿತು ಯಾವುದೇ ಮಾಹಿತಿ ನೀಡುವುದಿಲ್ಲ. ಯಾರು ವರದಿ ಮಾಡಿದರೋ ಅವರೇ ಸತ್ಯಾಂಶವನ್ನು ಹುಡುಕಿ ಹೇಳಲಿ ಎಂದು ಸವಾಲು ಹಾಕಿದರು.

ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಬಂಧಿಸಲಾಯಿತು ಎಂದು ಹೇಳುವುದು ಹಾಸ್ಯಾಸ್ಪದ. ಅವನೇನು ದೊಡ್ಡ ಭೂಕ್ಲಾಂಡ ಎಂದು ಪ್ರಶ್ನಿಸಿದರು. ಮರ ಕಡಿದ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅವನ ತಮ್ಮನನ್ನು ಕಾಪಾಡಿಕೊಳ್ಳಲು ನನ್ನ ಹೆಸರು ದುರ್ಬಳಕೆ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಹೋಗದೇ ಇದ್ದರೆ ನಮಗೆ ಇಲ್ಲೇ ಇರುವ ರಾಮನನ್ನು ಪೂಜಿಸಿಕೊಳ್ಳುತ್ತೇವೆ. ರಾಮ ಹೃದಯ ದಲ್ಲಿದ್ದಾನೆ. ಆತ ಎಲ್ಲರಿಗೂ ಸೇರಿದ್ದು, ಬಿಜೆಪಿ ಯವರಿಗೆ ಮಾತ್ರ ಸೀಮಿತವಲ್ಲ ಎಂದರು.

ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಆರ್ಥಿಕ ಅವ್ಯವಹಾರ ಅಗಿದೆ ಎಂಬ ದೂರುಗಳನ್ನು ಕೇಳಿದ್ದೆವು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅದನ್ನು ತನಿಖೆ ಮಾಡಿಸಬೇಕು. ರಾಮ ಪವಿತ್ರವಾದ ದೇವರು. ಅದಕ್ಕೆ ಅವ್ಯವಹಾರದ ಮಂದಿರ ಎಂಬ ಕಳಂಕ ಅಂಟಬಾರದು ಎಂದು ಹೇಳಿದರು.

ರಾಮಮಂದಿರದ ನಿರ್ಮಾಣದ ಹಿಂದೆ ಸಂಪೂರ್ಣ ರಾಜಕೀಯ ಇದೆ. 2008 ರಿಂದಲೂ ಇದರ ಪ್ರಕ್ರಿಯೆಗಳು ನಡೆಯುತ್ತಿದ್ದವು. ಆದರೆ ಚುನಾವಣೆ ಕಾಲಕ್ಕೆ ಇದನ್ನು ದೊಡ್ಡದಾಗಿ ಬಿಂಬಿಸಿಕೊಂಡು ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಜನ ಭಾವನಾತ್ಮಕ ವಿಚಾರಗಳಿಗೆ ಸೊಪ್ಪು ಹಾಕುವುದಿಲ್ಲ. ಪಂಚಖಾತ್ರಿ ಯೋಜನೆಗಳು ಜನರ ಜೀವನವನ್ನು ಸುಧಾರಿಸಿವೆ. ಹೀಗಾಗಿ ಜನ ಭಾವನಾತ್ಮಕ ರಾಜಕಾರಣಕ್ಕಿಂತಲೂ ಬದುಕಿನ ರಾಜಕಾರಣದ ಬಗ್ಗೆ ಯೋಚಿಸುತ್ತಾರೆ ಎಂದರು.

ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಹಣ ವಸೂಲಿ : ವಂಚಕ ಸೆರೆ

ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಮಕ್ಕಳ ಕೈಲಿ ಶೌಚಾಲಯ ಸ್ವಚ್ಛಗೊಳಿಸುವುದು ಸಹನೀಯವಲ್ಲ. ಇದು ಬಿಜೆಪಿಯವರ ಪಾಪಕೃತ್ಯ. ನಾನು ಸರಿಪಡಿಸುತ್ತೇನೆ. ಮುಂದಿನ ದಿನಗಳಲ್ಲಿ ಇಂತಹದ್ದನ್ನು ಮುಂದುವರೆಯಲು ಬಿಡುವುದಿಲ್ಲ ಎಂದು ಹೇಳಿದರು.

ಯುವನಿಧಿ ಯೋಜನೆಯಡಿ ಹಣ ಸಂದಾಯ ಮಾಡುವ ಕಾರ್ಯಕ್ರಮ ಜನವರಿ 12 ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಅದರ ಪೂರ್ವ ತಯಾರಿ ಕುರಿತು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲರೊಂದಿಗೆ ನಾಳೆ ಸಭೆ ನಡೆಸಲಾಗುತ್ತಿದೆ. ಯುವನಿಧಿಗೆ ಈವರೆಗೂ 20 ಸಾವಿರ ಮಂದಿ ನೊಂದಣಿಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ನೊಂದಣಿಯಾಗುವ ಮೂಲಕ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಖಾಸಗಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಂಸದ ಬಿ.ವೈ.ರಾಘವೇಂದ್ರ ನನ್ನ ರಾಜೀನಾಮೆ ಕೇಳಿದ್ದಾರೆ. ಬಿಜೆಪಿಯ ಶಾಸಕ ಬಸನಗೌಡ ಯತ್ನಾಳ್ ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ ಎಂದು ಹೇಳಿದ್ದಾರೆ. ಅದಕ್ಕೆ ಮೊದಲು ಉತ್ತರ ಕೊಡಿ ಎಂದರು.

ವಿಜಯೇಂದ್ರ ಅವರು ನನ್ನ 6 ಸಾಲ ಕೋಟಿ ರೂ. ಪ್ರಕರಣವನ್ನು ಟ್ವೀಟ್ ಮಾಡುವ ಮೂಲಕ ಒಂದೇ ದಿನ ನನ್ನ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಹಲವಾರು ಸ್ನೇಹಿತರು ಕರೆ ಮಾಡಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಅದರ ಮೊತ್ತ ಸರಿಸುಮಾರು 100 ಕೋಟಿ ರೂ.ಗಳಿಗೂ ಅಧಿಕ. ಸದ್ಯಕ್ಕೆ ನನ್ನ ಬಳಿ ನಾನೇ ದುಡಿದ ಹಣ ಇದೆ. ಅದರಿಂದ ಸಾಲ ಪಾವತಿಸುವ ಶಕ್ತಿಯೂ ಇದೆ. ಅಧಿಕಾರದಲ್ಲಿದ್ದೇನೆ ಎಂಬ ಕಾರಣಕ್ಕಾಗಿ 4 ರೂ. ಹೆಚ್ಚಾಗಿ ಬರಬಹುದು ಎಂದು ಕೆಲವರು ಪ್ರಕರಣವನ್ನು ವೈಭವೀಕರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

Latest News