Saturday, May 4, 2024
Homeರಾಜ್ಯಬರ ನಿರ್ವಹಣೆಗೆ ಹಣ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬರ ನಿರ್ವಹಣೆಗೆ ಹಣ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು,ಏ.23- ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಆರ್ಥಿಕ ನೆರವು ನೀಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ವಿಧಾನ ಸೌಧದ ಬಳಿಯ ಮಹಾತ್ಮಗಾಂಧಿ ಪ್ರತಿಮೆ ಎದುರು ಇಂದು ಪ್ರತಿಭಟನೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಭೈರತಿ ಸುರೇಶ್, ಶಾಸಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬರ ನಿರ್ವಹಣೆಗೆ ಹಣ ನೀಡದೇ ಕರ್ನಾಟಕದ ಮಣ್ಣಿನ ಮೇಲೆ ಕಾಲಿಡುವ ನೈತಿಕತೆ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಕ್ಕಾಗಿ ಪ್ರಧಾನಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ರಾಜ್ಯಕ್ಕೆ ಆರ್ಥಿಕ ನೆರವು ನೀಡದೇ ವಂಚನೆ ಮಾಡುತ್ತಿದ್ದಾರೆ. ಭಾರತೀಯ ಚೊಂಬು ಪಾರ್ಟಿ ಯಾವ ಮುಖ ಇಟ್ಟುಕೊಂಡು ಕನ್ನಡಿಗರ ಬಳಿ ಮತ ಕೇಳುತ್ತಿದೆ ಎಂದು ಪ್ರಶ್ನಿಸಿದರು.

ಇದೇ ವೇಳೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಕೇಂದ್ರ ಸರ್ಕಾರ ಬರನಿರ್ವಹಣೆಗೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ನಾವು ಸುಪ್ರೀಂಕೋರ್ಟ್‍ನ ಮೊರೆ ಹೋಗಬೇಕಾಯಿತು. ನಿನ್ನೆಯ ವಿಚಾರಣೆ ವೇಳೆ ಹಣ ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಇನ್ನೂ ಒಂದು ರೂಪಾಯಿ ಕೂಡಾ ನೀಡಿಲ್ಲ. ಆದರೆ ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ನಾಚಿಕೆ, ಮಾನ ಮರ್ಯಾದೆ ಇಲ್ಲದೆ ರಾಜ್ಯದ ಬರ ನಿರ್ವಹಣೆಗೆ ಹಣ ನೀಡಿದ ಪ್ರಧಾನಿಯವರಿಗೆ ಧನ್ಯವಾದ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಸುಪ್ರೀಂಕೋರ್ಟ್‍ನ ನಿರ್ದೇಶನದ ಮೇರೆಗೆ ಬಿಡುಗಡೆಯಾಗುವ ಹಣವನ್ನು ರಾಜ್ಯಸರ್ಕಾರ ಬೇರೆ ಉದ್ದೇಶಗಳಿಗೆ ಬಳಕೆ ಮಾಡುವುದಿಲ್ಲ. ನೇರವಾಗಿ ರೈತರ ಖಾತೆಗಳಿಗೆ ಬೆಳೆನಷ್ಟ ಪರಿಹಾರವಾಗಿ ಸಂದಾಯ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಸಂಕಷ್ಟ ಸಮಯದಲ್ಲಿ ಹಣ ನೀಡದೇ ಬರ ಮುಗಿದ ಮೇಲೆ ಪರಿಹಾರ ನೀಡಿದರೆ ಪ್ರಯೋಜನವಿಲ್ಲ. ಇದು ರೈತ ಸಮುದಾಯವನ್ನು ಅಪಮಾನ ಮಾಡಿ ಅಪಹಾಸ್ಯ ಮಾಡಿದಂತಾಗುತ್ತದೆ. ಬರ ನಿರ್ವಹಣೆಗೆ ಹಕ್ಕಿನ ಪಾಲು ಕೇಳಿದ್ದಕ್ಕಾಗಿ ರಾಜ್ಯಸರ್ಕಾರದ ಮೇಲೆ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸುಳ್ಳು ಮಾಹಿತಿಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

ನಾವು ಏನು ಮೋಸ ಮಾಡಿದ್ದೇವೆ, ಅವರು ನಮ್ಮ ಮೇಲೆ ಏಕೆ ಇಷ್ಟು ದ್ವೇಷ ಸಾಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಕೃಷ್ಣಭೈರೇಗೌಡ, ಆರ್ಥಿಕ ನೆರವಿಗಾಗಿ ನ್ಯಾಯಯುತ ಹೋರಾಟ ನಡೆಸುತ್ತೇವೆ. ಈ ವಿಷಯದಲ್ಲಿ ನಮಗೆ ರಾಜಕೀಯ ಅಥವಾ ಪ್ರತಿಷ್ಠೆ ಮುಖ್ಯವಲ್ಲ ಎಂದು ಹೇಳಿದರು.

ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆ 2-3 ಪಟ್ಟು ಹೆಚ್ಚಾಗಿದೆ. ಬಡ ಹಾಗೂ ಮಧ್ಯಮ ವರ್ಗದದವರ ದುಡಿಮೆ ಶ್ರೀಮಂತರ ಪಾಲಾಗುತ್ತಿದೆ. ನಿರುದ್ಯೋಗದ ಪ್ರಮಾಣ 1947ರ ನಂತರದ ಅತ್ಯಧಿಕ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.

ಈ ಎಲ್ಲಾ ವಿಚಾರಗಳನ್ನು ಮರೆಮಾಚಲು ಬಿಜೆಪಿಯವರು ಜನರ ಮನಸ್ಸಿನಲ್ಲಿ ಕೋಮು ಭಾವನೆಗಳನ್ನು ಬಿತ್ತುತ್ತಿದ್ದಾರೆ. ಬೆಲೆ ಏರಿಕೆ ಕೇವಲ ಮುಸ್ಲಿಮರಿಗಷ್ಟೇ ಅಲ್ಲ, ಶೇ.85 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಹಿಂದೂಗಳನ್ನೂ ಕಾಡುತ್ತಿದೆ ಎಂದು ವಿವರಿಸಿದರು. ಈ ವೇಳೆ ಬಿತ್ತಿಪತ್ರಗಳನ್ನು ಹಿಡಿದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮತ್ತು ಕೇಂದ್ರ ಗೃಹಸಚಿವ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.

ರಣದೀಪ್ ಸಿಂಗ್ ಸುರ್ಜೇವಾಲ ಕನ್ನಡದಲ್ಲೇ ನ್ಯಾಯ ಕೊಡಿ ಎಂದು ಘೋಷಣೆ ಕೂಗುವ ಮೂಲಕ ಗಮನ ಸೆಳೆದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಚೊಂಬು ತೋರಿಸಿದ ದೇವೇಗೌಡರಿಗೆ ಜಯವಾಗಲಿ ಎಂದು ಸಚಿವ ಕೃಷ್ಣ ಭೈರೇಗೌಡ ಘೋಷಣೆ ಕೂಗಿದರು.

RELATED ARTICLES

Latest News