ಬೆಂಗಳೂರು, ಮೇ 7- ಪ್ರಚಾರದ ಉಮೇದಿಗಾಗಿ ಪೂರ್ಣ ಪ್ರಯೋಗಕ್ಕೆ ಒಳಪಡದ ಕೋವಿಶೀಲ್ಡ್ ಲಸಿಕೆಯನ್ನು ಜನರಿಗೆ ನೀಡಿ, ಜೀವದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.
ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ಕಾಂಗ್ರೆಸ್, ಕೋವಿಶೀಲ್ಡ್ ಲಸಿಕೆಯ ಗಂಭೀರ ಅಡ್ಡಪರಿಣಾಮದ ಬಗ್ಗೆ ಒಪ್ಪಿಕೊಂಡ ನಂತರ ಜಗತ್ತಿನಾದ್ಯಂತ ಲಸಿಕೆಗಳನ್ನು ಅಸ್ಟ್ರಜೆನಿಕಾ ಕಂಪೆನಿ ಹಿಂಪಡೆದಿದೆ. ಆದರೆ, ಈಗಾಗಲೇ ಜನರ ದೇಹದೊಳಗೆ ಸೇರಿಸಿದ ಲಸಿಕೆಯನ್ನು ಹಿಂಪಡೆಯಲು ಸಾಧ್ಯವೇ ಎಂದು ಕಿಡಿಕಾರಿದೆ.
ಪ್ರಚಾರದ ಉದ್ದೇಶಕ್ಕಾಗಿ ಪೂರ್ಣ ಪ್ರಯೋಗಕ್ಕೆ ಒಳಪಡದ ಲಸಿಕೆಯನ್ನು ಜನತೆಗೆ ಬಲವಂತವಾಗಿ ನೀಡಿ, ಲಸಿಕೆಯಲ್ಲೂ ರಾಜಕಾರಣ ಮಾಡಿದ್ದ, ಸರ್ಟಿಫಿಕೇಟ್ ನಲ್ಲಿ ತಮ ಫೋಟೋ ಮುದ್ರಿಸಿದ್ದ ಮೋದಿಯವರು ಈ ದೇಶದ ಜನರ ಜೀವ, ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದೆ.
ಪೂರ್ಣ ಟ್ರಯಲ್ ಆಗದ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಕೊಟ್ಟವರಿಗೆ ದೇಶದ್ರೋಹಿ ಪಟ್ಟ ಕಟ್ಟಿದ್ದ ಬಿಜೆಪಿಗರೇ ಈಗ ನೀವು ನೈಜ ಜನದ್ರೋಹಿಗಳಲ್ಲವೇ?ಲಸಿಕೆಯ ಪರಿಣಾಮಗಳ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದೇಕೆ?ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿರುವುದೇಕೆ ಎಂದು ಪ್ರಶ್ನಿಸಿದೆ.