Friday, November 22, 2024
Homeರಾಷ್ಟ್ರೀಯ | Nationalಪ್ರಜ್ವಲ್‌ ರೇವಣ್ಣ ಪೆನ್‌ಪ್ರೈಡ್‌ ಪ್ರಕರಣ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ : ಅಮಿತ್‌ ಷಾ

ಪ್ರಜ್ವಲ್‌ ರೇವಣ್ಣ ಪೆನ್‌ಪ್ರೈಡ್‌ ಪ್ರಕರಣ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ : ಅಮಿತ್‌ ಷಾ

ನವದೆಹಲಿ,ಮೇ6- ಕರ್ನಾಟಕದ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ಲೈಂಗಿಕ ಪೆನ್‌ಪ್ರೈಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಇದು ಅವರಿಗೆ ತಿರುಗುಬಾಣವಾಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಷಾ ಎಚ್ಚರಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪ್ರಕರಣದ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಸಂಪೂರ್ಣವಾದ ಮಾಹಿತಿ ಇತ್ತು. ಮೊದಲ ಹಂತದ ಲೋಕಸಭಾ ಚುನಾವಣೆ ವೇಳೆ ಬಹಿರಂಗಪಡಿಸಿದರೆ ಒಕ್ಕಲಿಗ ಮತಗಳು ಕೈ ಕೊಡಬಹುದೆಂಬ ಭೀತಿಯಿಂದ ಕಾಂಗ್ರೆಸ್‌ ಮುಚ್ಚಿಟ್ಟಿತ್ತೆಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಅವರನ್ನು ರಕ್ಷಣೆ ಮಾಡಿರುವುದೇ ಕಾಂಗ್ರೆಸ್‌ ಸರ್ಕಾರ. ಮತದಾನ ನಡೆಯಲು ಎರಡು ದಿನ ಇರುವಾಗ ಪೆನ್‌ಡ್ರೈವ್‌ ಬಹಿರಂಗೊಂಡಿದ್ದು ಹಾಗೂ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ತೆರಳುವುದಕ್ಕೆ ಕಾಂಗ್ರೆಸ್‌ ಕಾರಣ ಎಂದು ಆಪಾದಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸಂಬಂಧ ಹೇಗಿದೆ ಎಂಬುದು ರಾಜಕಾರಣ ತಿಳಿದುಕೊಂಡಿರುವ ಪ್ರತಿಯೊಬ್ಬರಿಗೂ ಗೊತ್ತು. ಈ ಪ್ರಕರಣ ಆಚೆ ಬಂದರೆ ಒಕ್ಕಲಿಗ ಮತಗಳು ಕಾಂಗ್ರೆಸ್‌ ವಿರುದ್ಧವಾಗಿ ಚಲಾವಣೆಯಾಗಬಹುದೆಂಬ ಭೀತಿಯಿಂದ ಆಚೆಗೆ ಬಿಟ್ಟಿರಲಿಲ್ಲ. ಮತದಾನ ಸಮೀಪಿಸುತ್ತಿದ್ದಂತೆ ಏಕಾಏಕಿ ಪೆನ್‌ಡ್ರೈವ್‌ ಹೊರಬರಲು ಕಾರಣವೇನಾದರೂ ಏನು ಎಂದು ಅಮಿತ್‌ ಷಾ ಪ್ರಶ್ನಿಸಿದ್ದಾರೆ.

ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶದಿಂದಲೇ ಕಾಂಗ್ರೆಸ್‌ ಪ್ರಕರಣವನ್ನು ಮುಚ್ಚಿಡುವ ಪ್ರಯತ್ನ ನಡೆಸಿತ್ತು. ಈಗ ನಮ್ಮ ಮೇಲೆ ವೃಥಾ ಆರೋಪ ಮಾಡುವವರು ಇಷ್ಟೆಲ್ಲಾ ನಡೆದಿದ್ದರೂ ನಿಮಗೆ ಗೊತ್ತಿರಲಿಲ್ಲವೇ? ಪ್ರಜ್ವಲ್‌ ರೇವಣ್ಣ ವಿರುದ್ಧ ದೂರು ದಾಖಲಾದ ಮೇಲೆ ಅವರು ತಲೆಮರೆಸಿಕೊಳ್ಳಬಹುದೆಂಬ ಸಣ್ಣ ಮಾಹಿತಿಯನ್ನು ಗುಪ್ತಚರ ವಿಭಾಗ ಕಲೆ ಹಾಕುವಲ್ಲಿ ವಿಫಲವಾಯಿತೇ? ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಯಾರ ಕೈಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಇರಲಿ, ಎಚ್‌.ಡಿ.ರೇವಣ್ಣನೇ ಇರಲಿ ಕಾನೂನು ಎಲ್ಲರಿಗೂ ಒಂದೇ.ಜೆಡಿಎಸ್‌ ನಮ್ಮ ಮೈತ್ರಿ ಪಕ್ಷ ಎಂಬ ಒಂದೇ ಕಾರಣಕ್ಕಾಗಿ ಅವರದೇ ಪಕ್ಷದ ಸಂಸದ ನಡೆಸಿದ್ದಾರೆ ಎನ್ನಲಾದ ಈ ಪ್ರಕರಣವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಕಾನೂನು ಪ್ರಕಾರವೇ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.

ಈ ವಿಷಯದಲ್ಲಿ ಬಿಜೆಪಿ ನಿಲುವು ತುಂಬ ಸ್ಪಷ್ಟವಾಗಿದೆ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಜರುಗಿಸುವುದಾಗಿ ಸ್ವತಃ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರೇ ಹೇಳಿದ್ದಾರೆ. ಈಗಾಗಲೇ ಒಬ್ಬರನ್ನು ಪಕ್ಷದಿಂದ ಅಮಾನತುಪಡಿಸಿದ್ದಾರೆ.

ನಾವು ಎಲ್ಲಿಯೂ ಕೂಡ ಆರೋಪಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಿಲ್ಲ. ಆದರೆ ಕಾಂಗ್ರೆಸ್‌ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಹೇಳಿದ್ದಾರೆ.

ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬುದಕ್ಕಿಂತ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ಎಷ್ಟು ಲಾಭವಾಗುತ್ತದೆ ಎಂದು ನೋಡುತ್ತಿದೆ. ಸೋಲಿನ ಭೀತಿಯಲ್ಲಿರುವ ಶತಮಾನಗಳ ಇತಿಹಾಸವಿರುವ ಪಕ್ಷ ಕ್ಷುಲ್ಲಕ ರಾಜಕೀಯ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಪ್ರಕರಣದಿಂದಾಗಿ ಬಿಜೆಪಿ, ಜೆಡಿಎಸ್‌ ಮೈತ್ರಿಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ತಮ್ಮ ಕುಟುಂಬದ ಸದಸ್ಯರ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಕಾನೂನು ಮೂಲಕವೇ ಹೋರಾಟ ನಡೆಸುತ್ತೇವೆ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಇದರಲ್ಲಿ ನಮ್ಮ ಪಕ್ಷದ ಪಾತ್ರ ಏನೂ ಇಲ್ಲ ಎಂದು ಅಮಿತ್‌ ಷಾ ಸ್ಪಷ್ಟಪಡಿಸಿದ್ದಾರೆ.

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಅವರನ್ನು ಸ್ವದೇಶಕ್ಕೆ ಕರೆತರಬೇಕಾದರೆ ಕಾನೂನು ಪ್ರಕ್ರಿಯೆಗಳು ಜರುಗಬೇಕು. ಪ್ರಧಾನಮಂತ್ರಿಗೆ ಪತ್ರ ಬರೆಯುವುದರಿಂದ ಯಾವ ಪ್ರಯೋಜನವೂ ಇಲ್ಲ. ನಿಮಗೆ ನಿಜವಾಗಲೂ ಸಂತ್ರಸ್ತರಿಗೆ ನ್ಯಾಯ ಕೊಡಬೇಕೆಂಬ ಕಳಕಳಿ ಇದ್ದರೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆಯಬೇಕಾಗಿರುವುದು ಸಿಬಿಐ ನಿರ್ದೇಶಕರು ಹಾಗೂ ಇಂಟರ್‌ ಪೋಲ್‌ ಮುಖ್ಯಸ್ಥರಿಗೆ. ಮೋದಿಯವರಿಗೆ ಪತ್ರ ಬರೆದ ಉದ್ದೇಶವೇ ರಾಜಕಾರಣ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.

RELATED ARTICLES

Latest News