Friday, November 22, 2024
Homeರಾಜಕೀಯ | Politicsಕಾಂಗ್ರೆಸ್‍ಗೆ ಕಂಟಕವಾದ ಹಿರಿಯರ ಹೇಳಿಕೆ

ಕಾಂಗ್ರೆಸ್‍ಗೆ ಕಂಟಕವಾದ ಹಿರಿಯರ ಹೇಳಿಕೆ

ಬೆಂಗಳೂರು,ಜ.27- ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲೇ ಕಾಂಗ್ರೆಸ್‍ನಲ್ಲಿ ಹಿರಿಯ ನಾಯಕರುಗಳೇ ಶಿಸ್ತು-ಸಂಯಮವನ್ನು ಉಲ್ಲಂಘಿಸಿ ಹೇಳಿಕೆಗಳನ್ನು ನೀಡುತ್ತಿರುವುದು ತೀವ್ರ ಮುಜುಗರವನ್ನುಂಟು ಮಾಡುತ್ತಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕೈಪಡೆ ಕಾಂಗ್ರೆಸ್‍ಗೆ ಮಗ್ಗಲ ಮುಳ್ಳಾಗುತ್ತಿದೆ. ಸಚಿವರಾದ ಕೆ.ಎನ್.ರಾಜಣ್ಣ, ಹಿರಿಯ ಶಾಸಕರಾದ ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕರ ಹೇಳಿಕೆಗಳು ಪಕ್ಷದಲ್ಲಿನ ಭಿನ್ನಮತವನ್ನು ಬಹಿರಂಗಪಡಿಸುತ್ತಿದ್ದು, ಬಿಜೆಪಿಗೆ ಲಾಭ ಮಾಡಿಕೊಡುವ ಸಾಧ್ಯತೆಗಳಿವೆ.

ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಹೈಕಮಾಂಡ್‍ನಿಂದ ಹೇರಲ್ಪಡುವ ಪಟ್ಟಿಯನ್ನು ಒಪ್ಪಿಕೊಳ್ಳಲು ನಾವೇನು ಗುಲಾಮರಲ್ಲ ಎಂದು ಕೆ.ಎನ್.ರಾಜಣ್ಣ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೂ ಮುನ್ನ ಹೈಕಮಾಂಡ್ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕೂಡ ಲೆಕ್ಕಿಸದೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಪದೇಪದೇ ಹೇಳಿಕೆಯನ್ನು ನೀಡುತ್ತಿದ್ದರು.

ತಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಷ್ಠರಾಗಿದ್ದು, ಅವರ ಪರವಾಗಿ ಸದಾಕಾಲ ವಕಾಲತ್ತು ವಹಿಸುವುದಾಗಿಯೇ ಹೇಳುತ್ತಾ ಬಂದಿದ್ದಾರೆ. ಈ ಹಿಂದೆ ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿವಾದಕ್ಕೆ ಗುರಿಯಾಗಿದ್ದರು. ಇತ್ತೀಚೆಗೆ ಪರಮೇಶ್ವರ್‍ರವರ ಜೊತೆ ಹೊಂದಾಣಿಕೆ ಮಾಡಿಕೊಂಡಂತೆ ಕಂಡುಬರುವ ರಾಜಣ್ಣ, ಸಿದ್ದರಾಮಯ್ಯ ಪರವಾಗಿ ಮಾತನಾಡುವ ಬರದಲ್ಲಿ ಪಕ್ಷದ ಹೈಕಮಾಂಡ್ ನಾಯಕತ್ವವನ್ನು ಪ್ರಶ್ನಿಸಲಾರಂಭಿಸಿದ್ದಾರೆ.

ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಉಪಮುಖ್ಯಮಂತ್ರಿಯಾಗಿದ್ದ ಪರಮೇಶ್ವರ್ ಅವರನ್ನು ನಿಂದಿಸಿದ್ದ ರಾಜಣ್ಣ ಅವರಿಗೆ ಮೃದು ಎಚ್ಚರಿಕೆ ನೀಡಿ ಪಕ್ಷದಲ್ಲೇ ಉಳಿಸಿಕೊಳ್ಳಲಾಯಿತು. ಆಗಿನ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದ ರೋಶನ್ ಬೇಗ್ ಅವರನ್ನು ಹೈಕಮಾಂಡ್ ಅಮಾನತುಗೊಳಿಸಿತ್ತು. ಕೊನೆಗೆ ಶಾಸಕರಾಗಿದ್ದ ರೋಶನ್ ಬೇಗ್ ಕಾಂಗ್ರೆಸ್ ಪಕ್ಷದಿಂದಲೇ ದೂರವಾದರು.

ರಾಹುಲ್ ನಡೆಸುತ್ತಿರುವುದು ಭಾರತ್ ತೋಡೋ ಯಾತ್ರೆ : ಅಠಾವಳೆ

ಈ ಮೂಲಕ ಪಕ್ಷದಲ್ಲಿ ಸಿದ್ದರಾಮಯ್ಯ ಅತ್ಯುನ್ನತ ನಾಯಕ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಸಿದ್ದರಾಮಯ್ಯನವರ ಬೆಂಬಲಿಗರು ಎಷ್ಟೇ ವಿವಾದಿತ ಹೇಳಿಕೆಗಳನ್ನು ನೀಡಿದ್ದರೂ ಪಕ್ಷದಲ್ಲಿ ಊರ್ಜಿತಗೊಳ್ಳಬಹುದು ಎಂಬ ಪ್ರತೀತಿ ಇದೆ. ಅದರ ಜೊತೆಗೆ ಶ್ಯಾಮನೂರು ಶಿವಶಂಕರಪ್ಪ ಅವರು ಕೆಪಿಸಿಸಿಯಲ್ಲಿ ದೀರ್ಘಕಾಲ ಖಜಾಂಚಿಯಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೆ ನೀಡಿ ಮುಜುಗರ ಉಂಟುಮಾಡಿದ್ದರು. ಈಗ ಅದೇ ಶ್ಯಾಮನೂರು ಶಿವಶಂಕರಪ್ಪ ಶಿವಮೊಗ್ಗದಲ್ಲಿ ಹೇಳಿಕೆ ನೀಡಿ ಯಡಿಯೂರಪ್ಪ ಅವರ ಪುತ್ರರೂ ಆಗಿರುವ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಪುನರ್ ಆಯ್ಕೆ ಮಾಡುವಂತೆ ಕರೆ ನೀಡಿದ್ದಾರೆ. ಇದು ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಮತ್ತಷ್ಟು ಮುಜುಗರ ಉಂಟುಮಾಡಿದೆ.

ಕಾಂಗ್ರೆಸ್ 25 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಇಂತಹ ಸಂದರ್ಭದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಪಕ್ಷದ ಆತ್ಮವಿಶ್ವಾಸವನ್ನು ಕುಗ್ಗಿಸಲಿದೆ. ಶಿವಮೊಗ್ಗದಿಂದ ಹಾಟ್ರಿಕ್ ಹೀರೊ ಶಿವರಾಜ್‍ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್‍ಕುಮಾರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳಿದ್ದವು.

ಕಲ್ಕತ್ತಾ ಹೈಕೋರ್ಟ್ ಏಕಪೀಠ ಸದಸ್ಯ ಪೀಠದ ತೀರ್ಪಿಗೆ ಸುಪ್ರೀಂ ತಡೆ

ಶ್ಯಾಮನೂರು ಶಿವಶಂಕರಪ್ಪ ಅವರ ಹೇಳಿಕೆಗಳು ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಿದಂತಾಗಿದೆ. ಈ ಹಿಂದೆ ಬಸವರಾಯರೆಡ್ಡಿ, ಬಿ.ಆರ್.ಪಾಟೀಲ್ ಸೇರಿದಂತೆ ಅನೇಕ ಹಿರಿಯ ಶಾಸಕರುಗಳು ಪಕ್ಷದ ವಿರುದ್ಧ ಮುಜುಗರದ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಿದ್ದರು.

ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರು ಇಂತಹ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಿ ಪದೇ ಪದೇ ಸಹಿಸಿಕೊಳ್ಳುತ್ತಿರುವುದರಿಂದಾಗಿ ಗೊಂದಲಗಳು ಹೆಚ್ಚುತ್ತಲೇ ಇವೆ. ನಾಯಕತ್ವ ಮತ್ತು ಪಕ್ಷದ ಸಿದ್ಧಾಂತಗಳನ್ನು ನಿರ್ಲಕ್ಷಿಸಿ ಹೇಳಿಕೆ ನೀಡುವ ಮೂಲಕ ಮುಜುಗರ ಉಂಟುಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ಅಸಮಾಧಾನ ಭುಗಿಲೇಳಬಹುದು. ಅದು ಆಪರೇಷನ್ ಕಮಲಕ್ಕೆ ಪ್ರೇರಣೆ ನೀಡಿದಂತಾಗಿ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸಹುದು ಎಂಬ ಅಳಕು ಕಾಂಗ್ರೆಸ್‍ನಲ್ಲಿದೆ. ಹೀಗಾಗಿ ಲೋಕಸಭೆ ಚುನಾವಣೆವರೆಗೂ ಯಾರು, ಏನೇ ಮಾತನಾಡಿದರೂ ಅವಡುಗಚ್ಚಿಕೊಂಡಿರಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಹೇಳಲಾಗಿದೆ.

RELATED ARTICLES

Latest News