Wednesday, February 28, 2024
Homeರಾಜಕೀಯಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣತಂತ್ರ, ಯುವಶಕ್ತಿಗಳಿಗೆ ಚಾನ್ಸ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣತಂತ್ರ, ಯುವಶಕ್ತಿಗಳಿಗೆ ಚಾನ್ಸ್

ಬೆಂಗಳೂರು, ಡಿ.7 – ಮಿನಿ ಮಹಾ ಸಮರ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸುಗಳಿಸದೆ ಮುಗ್ಗರಿಸಿರುವ ಕಾಂಗ್ರೆಸ್‍ಗೆ ಮುಂಬರುವ ಲೋಕಸಭೆ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅದರಲ್ಲೂ ದಕ್ಷಿಣ ಭಾರತ ಕಾಂಗ್ರೆಸ್ ಕೈ ಹಿಡಿದಿರುವುದರಿಂದ ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕದೆ ಯುವಕರು, ಪಕ್ಷಕ್ಕೆ ಬೌದ್ಧಿಕ ಆಸ್ತಿಯಾಗಿರುವವರು ಮತ್ತು ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲು ಚಿಂತನೆ ನಡೆದಿದೆ.

ಬಹುತೇಕ ಸಚಿವರು, ಶಾಸಕರು, ಪ್ರಭಾವಿ ನಾಯಕರು ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ಕೇಳಲಾರಂಭಿಸಿದ್ದಾರೆ. ನಾವು ಹೇಳಿದವರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಎಂಬ ಷರತ್ತನ್ನು ಬಹುತೇಕ ಸಚಿವರು ಅನೌಪಚಾರಿಕವಾಗಿ ಮುಂದಿಟ್ಟಿದ್ದಾರೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆಯಿದೆ.

ಅದಕ್ಕಾಗಿ ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡುವ ಚರ್ಚೆಗಳು ನಡೆದಿವೆ. ಲೋಕಸಭಾ ಕ್ಷೇತ್ರದ ವೀಕ್ಷಕರಾಗಿರುವ ಸಚಿವರು ಸಭೆ ನಡೆಸಿದಾಗ ಕೆಲವು ಕಡೆ ಗಲಾಟೆಗಳಾಗಿವೆ. ಪಕ್ಷನಿಷ್ಠರಿಗೆ ಮಣೆ ಹಾಕಬೇಕು, ಹೊಸದಾಗಿ ಪಕ್ಷಕ್ಕೆ ಬರುವವರ ಅದರಲ್ಲೂ ಚುನಾವಣೆ ಕಾಲದಲ್ಲಿ ಗ್ರೀನ್ ಕಾರ್ಡ್ ಎಂಟ್ರಿ ಪಡೆದುಕೊಳ್ಳುವವರಿಗೆ ಅವಕಾಶ ನೀಡಬಾರದು. ಈಗಾಗಲೇ ಹಲವು ಬಾರಿ ಪಕ್ಷದ ಸೋಲಿಗೆ ಕಾರಣರಾದವರಿಗೆ ಮಣೆ ಹಾಕಬಾರದು ಎಂದು ಕಾರ್ಯಕರ್ತರು, ಮುಖಂಡರು ವೀಕ್ಷಕರ ಮುಂದೆ ಅಹವಾಲು ಸಲ್ಲಿಸಿದ್ದು, ಕೆಲವು ಕಡೆ ಪತ್ರ ಬರೆದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ಪಕ್ಷ ಸಂಘಟನೆ ಜೊತೆಗೆ ಜನಾಕರ್ಷಣೆ ಹಾಗೂ ಬೌದ್ಧಿಕ ವಿಚಾರಗಳನ್ನು ಹರಡುವ ತನ್ಮೂಲಕ ಸಾಮೂಹಿಕ ಪ್ರಭಾವಳಿ ಹೆಚ್ಚಿಸುವ ನಾಯಕರ ಕೊರತೆ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಇರುವ ಹಳೆಯ ನಾಯಕರು ಆಧುನಿಕ ಕಾಲಕ್ಕನುಗುಣವಾಗಿ ಅಪ್‍ಡೇಟ್ ಆಗುತ್ತಿಲ್ಲ. ಹೊಸ ನಾಯಕತ್ವ ಬೆಳೆಯುತ್ತಿಲ್ಲ ಎಂಬ ಕೊರಗು ಒಂದು ಕಡೆಯಾದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಪ್ರಮಾಣದ ರಿಸ್ಕ್ ತೆಗೆದುಕೊಂಡು ಹಳೆಯ ತಲೆಮಾರನ್ನು ಬದಿಗೆ ಸರಿಸಿ, ಹೊಸ ಆಲೋಚನೆಗಳು ಹಾಗೂ ಸಕ್ರಿಯ ಸಂಘಟನಾ ಶಕ್ತಿ ಹೊಂದಿರುವವರಿಗೆ ಅವಕಾಶ ಮಾಡಿಕೊಟ್ಟಿತ್ತು.

ಬಿಜೆಪಿ ಆಡಳಿತ ಹಾಗೂ ಕಾಂಗ್ರೆಸ್ ಗ್ಯಾರಂಟಿಗಳ ಕಾರಣಕ್ಕೆ ಬಿಜೆಪಿಗೆ ಹಿನ್ನೆಡೆಯಾಯಿತಾದರೂ ಕೇಸರಿ ಪಡೆಗೆ ಹೊಸ ನಾಯಕತ್ವದ ಮೂಲ ಬಂಡವಾಳ ಹೆಚ್ಚಾಗಿದೆ. ಮುಂದಿನ 25 ವರ್ಷಗಳ ಕಾಲ ನವ ನಾಯಕತ್ವ ಬಿಜೆಪಿಯನ್ನು ಎಂತಹ ಸಂಕಷ್ಟ ಕಾಲದಲ್ಲೂ ಎತ್ತಿ ಹಿಡಿಯಲಿದೆ. ಜೊತೆಗೆ ಸಂಘ ಪರಿವಾರದಲ್ಲಿ ತರಬೇತಿ ಪಡೆದ ವಾಗ್ಮಿಗಳು ಬಾಹ್ಯವಾಗಿ ಆರ್‍ಎಸ್‍ಎಸ್ ಸೈದ್ಧಾಂತಿಕ ನಿಲುವುಗಳನ್ನು ಸರ್ವಶ್ರೇಷ್ಠ ಎಂದು ಪ್ರಬಲವಾದ ಜನಾಭಿಪ್ರಾಯ ಮೂಡಿಸುತ್ತಿದ್ದಾರೆ. ಇನ್ನೂ ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿಯ ಸೈದ್ಧಾಂತಿಕ ನಿಲುವುಗಳ ಬಗ್ಗೆ ಕಡು ಸಮರ್ಥನೆ ಮಾಡಿಕೊಳ್ಳುವ ನೂರಾರು ವಾಗ್ಮಿಗಳು, ನಾಯಕರು ಕೇಸರಿ ಪಾಳಯದಲ್ಲಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವ ಜೊತೆಗೆ ಕಾಂಗ್ರೆಸ್‍ಅನ್ನು ಹೀಗಳೆಯುವ, ಕಾಲೆಳೆಯುವ ಟೀಕೆಗಳು ಯಥೇಚ್ಛವಾಗಿ ಕೇಳಿ ಬರುತ್ತಿವೆ. ಅಂತಹವಕ್ಕೆ ಪ್ರತ್ಯುತ್ತರಿಸುವ, ಬಲವಾದ ಸಮರ್ಥನೆ ಮಾಡಿಕೊಳ್ಳುವ ವೈಚಾರಿಕ ಪ್ರಖರತೆ ಇರುವ ನಾಯಕರ ಕೊರತೆ ಕಾಂಗ್ರೆಸ್‍ನಲ್ಲಿ ಎದ್ದು ಕಾಣುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಅವರಂತಹ ಆಯ್ದ ನಾಯಕರು ಒಂದಿಷ್ಟು ಕೌಂಟರ್ ನೀಡಬಲ್ಲರೆ ಹೊರತು ಟೀಕಾಕಾರರ ಹಂತಕ್ಕೆ ಇಳಿದು ಪ್ರತ್ಯುತ್ತರಿಸಲಾರರು.

ಈ ಕೊರತೆ ನಿವಾರಿಸಲು ಕಾಂಗ್ರೆಸ್ ಲೋಕಸಭೆ ಚುನಾವಣೆಯನ್ನು ವೇದಿಕೆ ಮಾಡಿಕೊಳ್ಳಲು ಮುಂದಾಗಿದೆ. ಕಾಂಗ್ರೆಸ್ ಪರವಾಗಿ ಸಾಮಾಜಿಕವಾಗಿ ಪ್ರಭಾವ ಬೀರುವ ವಾಗ್ಮಿಗಳ ದಂಡು, ನಾಯಕರ ಪಡೆಯೇ ಇದೆ. ಅವರಲ್ಲಿ ಸುೀರ್ ಕುಮಾರ್ ಮುರೋಳಿ, ನಿಖಿತ್ ರಾಜ್ ಮೌರ್ಯ, ಡಾ.ರವೀಂದ್ರಗೌಡ, ಭವ್ಯ ನರಸಿಂಹಮೂರ್ತಿ, ಕುಸುಮಾ, ನಟರಾಜ್ ಗೌಡ, ರಮೇಶ್ ಬಾಬು, ಸೂರ್ಯ ಮುಕುಂದರಾಜ್, ಶೈಲಜಾ ಹಿರೇಮಠ, ಮಂಜುನಾಥ್ ಅದ್ದೆ, ಮನ್ಸೂರ್‍ಖಾನ್, ವಿನಯ್ ಕಸ್ವೆ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾಮಾಜಿಕವಾಗಿ ಸಕ್ರಿಯವಾಗಿದ್ದಾರೆ. ಕಾಂಗ್ರೆಸ್ ವಿರುದ್ಧದ ಅಪಪ್ರಚಾರ ತೀವ್ರಗೊಂಡಾಗ ಇವರು ಯಾರ ಪ್ರೋತ್ಸಾಹವೂ ಇಲ್ಲದೆ ಅಖಾಡಕ್ಕಿಳಿಯುತ್ತಾರೆ. ಬಹುತೇಕ ಈ ನಾಯಕರ ಬರವಣಿಗೆ, ಅಭಿಪ್ರಾಯಗಳು ಕೇಸರಿ ಪಡೆಯ ಟೀಕೆಗಳಿಗೆ ಪ್ರತ್ಯುತ್ತರಿಸುವಲ್ಲಿ ಪರಿಣಾಮಕಾರಿಯಾಗಿರುತ್ತವೆ.

ವೈಚಾರಿಕವಾಗಿ ಸಕ್ರಿಯವಾಗಿರುವ ಈ ನಾಯಕರ ಪೈಕಿ ಸುೀರ್ ಕುಮಾರ್ ಮುರೋಳಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ, ನಿಖಿತ್‍ರಾಜ್ ಮೌರ್ಯ ತುಮಕೂರಿನಿಂದ, ಮನ್ಸೂರ್‍ಖಾನ್ ಬೆಂಗಳೂರು ಕೇಂದ್ರದಿಂದ, ಶೈಲಜಾ ಹಿರೇಮಠ ಕೊಪ್ಪಳ ಕ್ಷೇತ್ರದಿಂದ, ಡಾ.ರವೀಂದ್ರಗೌಡ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸುೀರ್ ಕುಮಾರ್ ಮರೋಳಿ ಮಲೆನಾಡು, ಕರಾವಳಿ ಭಾಗದಲ್ಲಿ ಕೋಮುವಾದದ ವಿರುದ್ಧ ಪ್ರತ್ಯಾಸ್ತ್ರವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಬಹುತೇಕ ನೆಲಕಚ್ಚಿದ್ದ ಕಾಂಗ್ರೆಸ್‍ಗೆ ವೈಚಾರಿಕವಾಗಿ ಬಲತುಂಬುವ, ನಿರುತ್ಸಾಹಿಗಳಾಗಿರುವ ಯುವ ಕಾರ್ಯಕರ್ತರಿಗೆ ಹೊಸ ಚೈತನ್ಯ ಮೂಡಿಸುವ ನಾಯಕರ ಅಗತ್ಯ ಇದೆ.

ರಜಪೂತ ಕರ್ಣಿ ಸೇನೆ ಅಧ್ಯಕ್ಷರ ಹತ್ಯೆ : ಇಬ್ಬರು ಪೊಲೀಸರ ಅಮಾನತು

ಸುೀಧಿರ್ ಕುಮಾರ್ ಸಂಘ ಪರಿವಾರದ ಶೈಲಿಯಲ್ಲೇ ವಾಗ್ಮಿಗಳಾಗಿದ್ದು, ಅದೇ ಧಾಟಿಯಲ್ಲಿ ಧರ್ಮ, ಆಧ್ಯಾತ್ಮಿಕ, ಸಾಮಾಜಿಕ ನೆಲೆಗಟ್ಟಿನಲ್ಲಿ ತಿರುಗೇಟು ನೀಡುವಲ್ಲಿ ಸಿದ್ಧಹಸ್ತರಾಗಿದ್ದಾರೆ. ನಿಖಿತ್‍ರಾಜ್ ಮೌರ್ಯ ಮತ್ತು ಸುೀಧಿರ್ ಕುಮಾರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಿಗಿಂತಲೂ ಹೆಚ್ಚು ಬೇಡಿಕೆ ಹೊಂದಿದ ನಾಯಕರಾಗಿದ್ದರು. ಅವರ ಭಾಷಣಗಳ ವಿಡಿಯೋಗಳು ಬಿಜೆಪಿಯ ಟೀಕೆಗಳಿಗೆ ಪ್ರತ್ಯಾಸ್ತ್ರಗಳಾಗಿ ಕೆಲಸ ಮಾಡಿದ್ದವು. ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿ ಧರ್ಮ ಕುರಿತು ತಪ್ಪು ವ್ಯಾಖ್ಯಾನಗಳಿಗೆ ಕೌಂಟರ್ ಆಗಿದ್ದವು. ಕೆಲವು ಕ್ಷೇತ್ರಗಳಲ್ಲಿ ಇಂತಹ ನಾಯಕರಿಗೆ ಅವಕಾಶ ಮಾಡಿಕೊಟ್ಟರೆ ಕಾಂಗ್ರೆಸ್‍ನ ಬೌದ್ಧಿಕ ಆಸ್ತಿ ಹೆಚ್ಚಾಗಲಿದೆ ಎಂಬ ಅಭಿಪ್ರಾಯಗಳಿವೆ.

ಲೋಕಸಭೆಯಲ್ಲೂ ಬಿಜೆಪಿಯ ಆಕ್ರಮಣಕಾರಿ ವಾಗ್ದಾಳಿಗಳಿಗೆ ಅದೇ ಧಾಟಿಯಲ್ಲಿ ಎದುರೇಟು ನೀಡುವ ನಾಯಕತ್ವ ಬೆಳೆಯಬೇಕಿದೆ ಎಂಬ ನಿಟ್ಟಿನಲ್ಲಿ ರಾಜ್ಯದ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ವೈಚಾರಿಕವಾಗಿ ಹೆಚ್ಚು ಮಾತನಾಡುವವರು ಜನಮಾನಸದಲ್ಲಿ ಜನಪ್ರಿಯತೆ ಗಳಿಸುವುದು ಕಡಿಮೆ. ಆದಕ್ಕೆ ಅಪವಾದ ಎಂಬಂತೆ ಸುೀಧಿರ್ ಕುಮಾರ್ ಮುರೋಳಿ, ನಿಖಿತ್ ರಾಜ್ ಮೌರ್ಯ, ಶೈಲಜಾ ಹಿರೇಮಠ್, ಡಾ.ರವೀಂದ್ರಗೌಡ ತಮ್ಮ ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗಳಲ್ಲಿ ಜನಪ್ರಿಯ ನಾಯಕರೂ ಆಗಿದ್ದಾರೆ.

ವಿಪರ್ಯಾಸವೆಂದರೆ ಕಾಂಗ್ರೆಸ್‍ನ ಕೆಲವರು ವಲಸಿಗ ನಾಯಕರಿಗೆ ಆದ್ಯತೆ ನೀಡಲು ಹವಣಿಸುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸುೀಧಿರ್ ಕುಮಾರ್ ಮರೋಳಿಯವರಿಗೆ ಅವಕಾಶ ನೀಡಬೇಕು ಎಂದು ಸ್ಥಳೀಯರು ಹಕ್ಕೋತ್ತಾಯ ಮಾಡುತ್ತಿದ್ದಾರೆ. ಆದರೆ ಈಗಲೂ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ, ಕಾಂಗ್ರೆಸ್‍ನಿಂದ ಹಲವು ಬಾರಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಸೋಲು ಕಂಡಿರುವ ಜಯಪ್ರಕಾಶ್ ಹೆಗ್ಡೆಯವರಿಗೆ ಮಣೆ ಹಾಕಲು ಪ್ರಯತ್ನಗಳಾಗುತ್ತಿವೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿರುವ ಹಾಗೂ ಆಯೋಗದಿಂದ ನಡೆಸಲಾದ ವರದಿ ನೀಡುವ ಸಲುವಾಗಿ ಅಧಿಕಾರವಯನ್ನು ಎರಡು ತಿಂಗಳ ಮಟ್ಟಿಗೆ ವಿಸ್ತರಣೆ ಪಡೆದುಕೊಂಡಿರುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಕ್ಷೇತ್ರಕ್ಕೆ ಗ್ರೀನ್ ಕಾರ್ಡ್ ಎಂಟ್ರಿ ಕೊಡಬಾರದು ಎಂದು ಸ್ಥಳೀಯರು ಕೆಪಿಸಿಸಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಅಧಿಕಾರ ದುರುಪಯೋಗಪಡಿಸಿಕೊಂಡ ಅಧಿಕಾರಿಗಳನ್ನು ವಜಾ ಮಾಡಿದ ಯೋಗಿ

ಇನ್ನು ತುಮಕೂರು ಕ್ಷೇತ್ರದಲ್ಲಿ ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅವರಲ್ಲಿ ಸಚಿವ ಕೆ.ಎನ್.ರಾಜಣ್ಣ, ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಗೌರಿಶಂಕರ, ನಿಖಿತ್‍ರಾಜ್‍ಮೌರ್ಯ ಪ್ರಮುಖರು, ಆದರೆ ಕಾಂಗ್ರೆಸಿಗರು ಪ್ರಸ್ತುತ ಬಿಜೆಪಿಯಲ್ಲಿರುವ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಕರೆತಂದು ಕಣಕ್ಕಿಳಿಸುವ ಹವಣಿಕೆಯಲ್ಲಿದ್ದಾರೆ. ಅದಕ್ಕೆ ಸ್ಥಳೀಯ ಕಾಂಗ್ರೆಸಿಗರು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಮಂಡ್ಯ ರಾಜಕೀಯದಲ್ಲಿ ತಟಸ್ಥವಾಗಿರುವ ಮಾಜಿ ಸಂಸದೆ ರಮ್ಯಾ ಅವರನ್ನು ಕರೆತಂದು ಕಣಕ್ಕಿಳಿಸಬೇಕು ಎಂದು ಕೆಲವರು ಪ್ರಯತ್ನ ನಡೆಸಿದ್ದಾರೆ. ಮೇಲುಕೋಟೆ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ರವೀಂದ್ರಗೌಡ ಸರ್ವೋದಯ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದಾಗ ಮರು ಮಾತನಾಡದೆ ಕಣದಿಂದ ಹಿಂದೆ ಸರಿದರು. ಕಳೆದ ಬಾರಿ ಲೋಕಸಭೆ ಚುನಾವಣೆಗೂ ಟಿಕೆಟ್ ಕೇಳಿದರು. ಆದರೆ ಕುಟುಂಬ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುವ ಕಾಂಗ್ರೆಸ್ ಸಕ್ರಿಯ ಹಾಗೂ ಸಂಚಲನಾತ್ಮಕ ಸಂಘಟನಾ ಶಕ್ತಿಯಿರುವ ಯುವ ನಾಯಕರನ್ನು ನೇಪಥ್ಯದಲ್ಲಿಡುತ್ತಿದೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯಸಭೆ, ವಿಧಾನ ಪರಿಷತ್‍ಗೆ ಬಹುತೇಕ ಅಪರಿಚಿತರಾಗಿದ್ದ, ಆದರೆ ತೆರೆಮರೆಯಲ್ಲಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಆಯ್ಕೆ ಮಾಡಿ ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಸಾಬೀತುಪಡಿಸಿದ್ದಲ್ಲದೆ ಘಟಾನುಘಟಿ ನಾಯಕರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು. ಆದರೆ ಕಾಂಗ್ರೆಸ್ ಈವರೆಗೂ ಹಣಬಲ, ತೋಳ್ಬಲ, ಕುಟುಂಬ ರಾಜಕಾರಣಕ್ಕೆ ಜೋತು ಬೀಳುವ ಸಾಂಕ್ರಾಮಿಕದಿಂದ ಹೊರ ಬಂದಿಲ್ಲ. ಅದರ ಪರಿಣಾಮ ಹಲವು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಡೆದ ಗ್ಯಾರಂಟಿಗಳ ಜಾದು, ಲೋಕಸಭೆಗೆ ಹಳಸಲಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾಣತನವೇ ಗೆಲುವಿಗೆ ಮೂಲ ಮಂತ್ರ ಎಂದು ನಾಯಕರು ಮನನ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
#ಉಮೇಶ್ ಕೊಲಿಗೆರೆ

RELATED ARTICLES

Latest News