Sunday, October 13, 2024
Homeರಾಜ್ಯಭಾವನಾತ್ಮಕ ರಾಜಕಾರಣ ಬದಲಿಸಲು ಕಾಂಗ್ರೆಸ್ ಕಾರ್ಯತಂತ್ರ

ಭಾವನಾತ್ಮಕ ರಾಜಕಾರಣ ಬದಲಿಸಲು ಕಾಂಗ್ರೆಸ್ ಕಾರ್ಯತಂತ್ರ

ಬೆಂಗಳೂರು,ಜ.21- ಭಾವನಾತ್ಮಕ ರಾಜಕಾರಣದ ಅಲೆಯಲ್ಲಿರುವ ಮತದಾರರನ್ನು ಮಾರ್ಗ ಬದಲಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಕಾಂಗ್ರೆಸ್ ವಲಯದ ಚಿಂತಕರ ಛಾವಡಿ ಹರಸಾಹಸ ನಡೆಸುತ್ತಿದೆ. ಶ್ರೀರಾಮಮಂದಿರದ ಹೆಸರಿನಲ್ಲಿ ಬಿಜೆಪಿ ಪ್ರತಿದಿನ ಅಬ್ಬರದ ಪ್ರಚಾರ, ಬಿರುಸಿನ ಹೇಳಿಕೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾಂಗ್ರೆಸ್ ವಂಶಾವಳಿಯೇ ಹಿಂದೂ ವಿರೋಧಿ ಎಂಬಂತೆ ಬಿಂಬಿಸಿದೆ.

ಇದಕ್ಕೆ ಕಾಲಕಾಲಕ್ಕೆ ಸ್ಪಷ್ಟನೆ ನೀಡಿ ಜನಾಭಿಪ್ರಾಯವನ್ನು ಸಹಜ ಸ್ಥಿತಿಗೆ ತರಲು ಕಾಂಗ್ರೆಸ್‍ಗೆ ಸಾಧ್ಯವಾಗಿಲ್ಲ. ನಮ್ಮದು ಜಾತ್ಯತೀತ ರಾಷ್ಟ್ರ. ನಾವು ಎಲ್ಲಾ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂಬ ಸಿದ್ಧ ಹೇಳಿಕೆಯನ್ನು ಪದೇಪದೇ ಗಿಣಿಪಾಠ ಮಾಡುವ ಕಾಂಗ್ರೆಸಿಗರು ಪ್ರಸ್ತುತ ಭಾವನಾತ್ಮಕ ರಾಜಕಾರಣದ ಸವಾಲನ್ನು ಸರಿದೂಗಿಸುವಲ್ಲಿ ಯಶಸ್ಸು ಸಾಧಿಸಲಾಗಿಲ್ಲ.

ರಾಮಜನ್ಮಭೂಮಿ ವಿಚಾರ ಆಧಾರಿತ ಭಾವನಾತ್ಮಕ ರಾಜಕಾರಣ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆಯನ್ನು ಕಾಂಗ್ರೆಸ್ ಹೊಂದಿದೆ. ಆದರೆ ಜನಾಭಿಪ್ರಾಯಗಳು ದಿನೇದಿನೇ ಭಾವನಾತ್ಮಕ ರಾಜಕಾರಣದ ನಿಟ್ಟಿನಲ್ಲೇ ಗಟ್ಟಿಗೊಳ್ಳುತ್ತಿವೆ. ಈ ಸವಾಲನ್ನು ಎದುರಿಸಲು ಮತ್ತೊಮ್ಮೆ ಭಾವನಾತ್ಮಕ ವಿಚಾರಗಳ ಮೊರೆ ಹೋಗಬೇಕೆ ಅಥವಾ ಅಭಿವೃದ್ಧಿ ರಾಜಕಾರಣವನ್ನು ಮುಂದಿಟ್ಟುಕೊಂಡು ಜನರನ್ನು ಜಾಗೃತಗೊಳಿಸಬೇಕೇ ಎಂಬ ಗೊಂದಲದಲ್ಲಿ ಕಾಂಗ್ರೆಸಿಗರು ಇದ್ದಂತಿದೆ.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಅಭಿವೃದ್ಧಿ ವಿಚಾರವಾಗಿ ಹೆಚ್ಚಿನ ಚರ್ಚೆ ಮಾಡುತ್ತಿಲ್ಲ. ಚಾಲ್ತಿಯಲ್ಲಿರುವ 12 ಜನಪ್ರಿಯ ಕಾರ್ಯಕ್ರಮಗಳಲ್ಲಿ 10 ಹಿಂದಿನ ಸರ್ಕಾರದಲ್ಲಿ ಜಾರಿಯಲ್ಲಿದ್ದ ಯೋಜನೆಗಳು. ಅವುಗಳಲ್ಲಾಗಿರುವ ಪ್ರಗತಿಯನ್ನೇ ಬೃಹತ್ ಸಾಧನೆ ಎಂದು ವಿಕಸಿತ ಸಂಕಲ್ಪ ಯಾತ್ರೆಯಲ್ಲಿ ಬಿಂಬಿಸಲಾಗುತ್ತಿದೆ. ಕೃಷಿ ಸನ್ಮಾನ್ ಹೊರತುಪಡಿಸಿದರೆ ಉಳಿದೆಲ್ಲಾ ಯೋಜನೆಗಳಲ್ಲು ರಾಜ್ಯಸರ್ಕಾರದ ಸಹಭಾಗಿತ್ವ ಮತ್ತು ಪಾಲುದಾರಿಕೆಯಿದೆ. ಹೊಸದಾಗಿರುವ ಯೋಜನೆಯೂ ಅದೊಂದೇ ಆಗಿದೆ ಎಂದು ಕಾಂಗ್ರೆಸ್‍ನ ಚಿಂತಕರ ಛಾವಡಿಯ ಪ್ರಮುಖರು ವಾದ ಮಾಡುತ್ತಿದ್ದಾರೆ.

ರಾಮಸೇತು ಅರಿಚಲಮುನೈನಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ

ಈ ಹಿಂದೆ ಯುಪಿಎ ಸರ್ಕಾರ ರೂಪಿಸಿದ್ದ ಉದ್ಯೋಗ ಖಾತ್ರಿ, ಆಹಾರ ಭದ್ರತೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕಿನಂತಹ ಸರ್ವರನ್ನೂ ಒಳಗೊಳ್ಳುವ ಜನಪರವಾದ ಯಾವುದೇ ಯೋಜನೆಗಳು ಕಳೆದ 10 ವರ್ಷಗಳಲ್ಲಿ ಜಾರಿಗೊಂಡಿಲ್ಲ. ಇಡಬ್ಲ್ಯೂಎಸ್ 370, ಜಿಎಸ್‍ಟಿ, ನೋಟು ಅಮಾನೀಕರಣ, ತ್ರಿಬ್ಬಲ್ ತಲಾಕ್‍ನಂತಹ ಕಾಯಿದೆಗಳು ಕೆಲವು ವರ್ಗ ಹಾಗೂ ಸಮುದಾಯಗಳಿಗೆ ಸೀಮಿತವಾಗಿದ್ದವು. ಇದರಲ್ಲಿನ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರಶ್ನಿಸಬೇಕು ಎಂದು ಕಾಂಗ್ರೆಸ್‍ನ ಸಲಹೆಗಾರರು ಪ್ರತಿಪಾದಿಸುತ್ತಿದ್ದಾರೆ.

ಜ.22 ರಂದು ರಾಮಜನ್ಮಭೂಮಿಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆಯ ಚರ್ಚೆಗಳು ತಣ್ಣಗಾಗುತ್ತವೆ. ಬಾಕಿ ಉಳಿದ ಅವಯಲ್ಲಿ ಅಭಿವೃದ್ಧಿ ವಿಚಾರಗಳನ್ನೇ ಪ್ರಸ್ತಾಪಿಸುವ ಮೂಲಕ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ದಿನ ಭಾವನಾತ್ಮಕ ರಾಜಕಾರಣದ ಅಲೆಯ ವೈಭವೀಕರಣದ ಬಗ್ಗೆ ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸಿದರೆ ಅದು ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ಜ.22 ರ ನಂತರ ಹಂತಹಂತವಾಗಿ ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಕೂಡ ದತ್ತಾಂಶಗಳ ಸಂಗ್ರಹ ಹಾಗೂ ಮಾಹಿತಿ ಕ್ರೂಢೀಕರಣ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News