Monday, May 6, 2024
Homeರಾಜಕೀಯಗುತ್ತಿಗೆದಾರರ ಬಿಲ್ ಬಾಕಿಗೆ ಬಿಜೆಪಿಯೇ ಹೊಣೆ : ಸತೀಶ್ ಜಾರಕಿಹೊಳಿ

ಗುತ್ತಿಗೆದಾರರ ಬಿಲ್ ಬಾಕಿಗೆ ಬಿಜೆಪಿಯೇ ಹೊಣೆ : ಸತೀಶ್ ಜಾರಕಿಹೊಳಿ

ಬೆಂಗಳೂರು, ಅ.13- ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ವಿಳಂಬವಾಗಲು ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಗಳ ಕುರಿತು ಸ್ಪಷ್ಟನೆ ನೀಡಿದರು.

ಗುತ್ತಿಗೆ ಬಾಕಿ ಬಿಲ್ ಬಿಡುಗಡೆ ಆಗಿಲ್ಲ ಅಂದರೆ ಅದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕಾರಣವೇ ಹೊರತು ನಾವಲ್ಲ. ಹಿಂದಿನ ಸರ್ಕಾರ ಅನುದಾನ ಬಿಟ್ಟು ಮೂರು ಪಟ್ಟು ಕಾಮಗಾರಿಗೆ ಹಣ ಖರ್ಚು ಮಾಡಿದ್ದಾರೆ. 1500 ಕೋಟಿ ಅನುದಾನ ಲಭ್ಯವಿದ್ದರೆ 5000 ಕೋಟಿ ವರೆಗೂ ಕಾಮಗಾರಿ ಮಂಜೂರಾತಿ ನೀಡಿದ್ದಾರೆ. ತಮ್ಮ ಲೋಕೋಪಯೋಗಿ ಇಲಾಖೆಯಲ್ಲೂ ಈ ರೀತಿ ನಡೆದಿದೆ. ಹಣ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದರು.

ಅನುದಾನ ಇರುವುದು 1500 ಕೋಟಿ, ಕೆಲಸ ನೀಡಿರುವುದು 6000 ಕೋಟಿ ರೂಪಾಯಿಗೆ. ಅದರಿಂದಾಗಿಯೇ ಬಾಕಿ ಬಿಲ್‍ಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಹಣವೆಲ್ಲಾ ಪಂಚಖಾತ್ರಿಗಳಿಗೆ ಹೋಗಿದೆ ಎಂದು ಆಧಾರ ರಹಿತವಾಗಿ ಆರೋಪ ಮಾಡಲಾಗುತ್ತಿದೆ ಎಂದರು.

ನಾವು ಯಾವ ರಾಜ್ಯಗಳಿಗೂ ಹಣ ಕಳಿಸಿಲ್ಲ : ಸಿಎಂ ಸಿದ್ದರಾಮಯ್ಯ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಾಕಿ ಬಿಲ್ ಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಹಿಂದೆ ಅವರು ಮಾಡಿದ ಆರೋಪಕ್ಕೂ ಈಗಿನ ಬಿಲ್ ಬಾಕಿ ಬಿಡುಗಡೆ ಮಾಡಬೇಕೆಂದ ಒತ್ತಾಯಕ್ಕೂ ವ್ಯತ್ಯಾಸವಿದೆ ಎಂದರು. ಕಮಿಷನ್ ಬಗ್ಗೆ ವಿರೋಧ ಪಕ್ಷಗಳು ಆರೋಪ ಮಾಡಿದ್ದರೆ ಅದನ್ನು ಸಾಬೀತು ಮಾಡಲಿ. ನಮ್ಮ ಸರ್ಕಾರ ಬಾಕಿ ಬಿಲ್‍ಗಳ ಬಿಡುಗಡೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದೆ.

ಕೆಂಪಣ್ಣ ಅವರು ಒತ್ತಾಯಿಸಿರುವಂತೆ ಹೆಚ್ಚಿನ ಹಣ ಬಿಡುಗಡೆಗೆ ಹೆಚ್ಚುವರಿ ಹಣ ನೀಡುವಂತೆ ಮುಖ್ಯಮಂತ್ರಿಯವರ ಬಳಿ ಒತ್ತಾಯಿಸುವುದಾಗಿ ಹೇಳಿದರು. ಆರ್ಥಿಕ ಇಲಾಖೆಯಿಂದ 1500 ಕೋಟಿ ಮಾತ್ರ ಬಿಡುಗಡೆಯಾಗಲಿದೆ. ಉಳಿದ 3500 ಕೋಟಿ ಹಣಕಾಸು ಇಲಾಖೆ ಕೊಡುವುದಿಲ್ಲ. ಹೀಗಾಗಿ ವ್ಯತ್ಯಾಸವಾಗುತ್ತಿದೆ. ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಪೋಕ್ಸೋ ಪ್ರಕರಣ : ಪರಮಶಿವಯ್ಯಗೆ ಹೈಕೋರ್ಟ್ ಜಾಮೀನು

ಆದಾಯ ತೆರಿಗೆ ದಾಳಿಗೂ ಕಾಂಗ್ರೆಸ್‍ಗೂ ಸಂಬಂಧ ಇಲ್ಲ:
ಆದಾಯ ದಾಳಿಗೂ, ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ 500 ದಾಳಿಗಳಾಗಿವೆ. ಅವುಗಳಿಗೂ ಕಾಂಗ್ರೆಸ್ ಸಂಬಂಧ ಇಲ್ಲ. ಬೆಂಗಳೂರಿನಲ್ಲಿ ದಾಳಿ ನಡೆದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಬಹುಶಃ ದಾಳಿಗೆ ಒಳಗಾದವರು ಗುತ್ತಿಗೆದಾರರಿರಬಹುದು ಎಂದರು.

ಸಾಕಷ್ಟು ಜನ ಗುತ್ತಿಗೆದಾರರು ಎಲ್ಲರ ಜೊತೆ ಸ್ನೇಹದಿಂದ ಇರುತ್ತಾರೆ, ಎಲ್ಲಾ ಪಕ್ಷಗಳ ಜೊತೆಯೂ ಗುರುತಿಸಿಕೊಂಡಿರುತ್ತಾರೆ. ಹಾಗಾಗಿ ಬೆಂಗಳೂರಿನಲ್ಲಿ ದಾಳಿ ನಡೆದಿರವವರಿಗೂ ನಮಗೂ ಸಂಬಂಧ ಇಲ್ಲ. ಅದೇನಿದ್ದರೂ ಆದಾಯ ತೆರಿಗೆ ಮತ್ತು ದಾಳಿಗೆ ಒಳಗಾದವರ ನಡುವಿನ ವಿಚಾರ. ದಾಳಿ ನಡೆದಾಕ್ಷಣ ಅವರನ್ನು ಕಾಂಗ್ರೆಸ್‍ನವರು ಎಂದು ಸಂಪರ್ಕ ಕಲ್ಪಿಸುವುದು ಸರಿಯಲ್ಲ. ಎಲ್ಲದಕ್ಕೂ ರಾಜಕೀಯ ಸೇರಿಸುವುದು ಒಳ್ಳೆಯದಲ್ಲ. ಕೆಲವೊಮ್ಮೆ ಸ್ವಾಭಾವಿಕವಾಗಿಯೂ ದಾಳಿಗಳು ನಡೆಯುತ್ತವೆ ಎಂದರು.

RELATED ARTICLES

Latest News