Thursday, December 5, 2024
Homeರಾಜಕೀಯ | Politicsಉಪಸಮರದ ಫಲಿತಾಂಶಕ್ಕೆ ಕ್ಷಣಗಣನೆ : ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಉಪಸಮರದ ಫಲಿತಾಂಶಕ್ಕೆ ಕ್ಷಣಗಣನೆ : ಅಭ್ಯರ್ಥಿಗಳ ಎದೆಯಲ್ಲಿ ಢವಢವ

Countdown for by-election results

ಬೆಂಗಳೂರು,ನ.22– ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯ ಒಳಗೆ ಬಹುತೇಕ ಸ್ಪಷ್ಟವಾದ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು,ಯಾರಿಗೆ ವಿಜಯಲಕ್ಷೀ ಒಲಿಯಲಿದ್ದಾಳೆ ಎಂಬುದು ನಾಳೆ ತಿಳಿಯಲಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯೂ ರಾಮನಗರದ ಅರ್ಚಕರ ಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ. ಅದೇ ರೀತಿ ಶಿಗ್ಗಾಂವಿ ಮತ ಎಣಿಕೆಯೂ ಹಾವೇರಿ ಜಿಲ್ಲೆಯ ದೇವಗಿರಿ ಸರ್ಕಾರಿ ಎಂಜನಿಯರಿಂಗ್‌ ಕಾಲೇಜು ಹಾಗೂ ಸಂಡೂರು ಕ್ಷೇತ್ರದ ಎಣಿಕೆಯು ಬಳ್ಳಾರಿ ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನಡೆಯಲಿದೆ.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟ ಗೆಲ್ಲುವ ಸಾಧ್ಯತೆಯಿದೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ. ಹೀಗಾಗಿ ಫಲಿತಾಂಶದ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ಸೋಲನ್ನಪ್ಪಿ ಬಿಜೆಪಿ ಬೆಂಬಲಿತ ಜೆಡಿಎಸ್‌‍ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಜೆಡಿಎಸ್‌‍ ಭದ್ರಕೋಟೆಯಾಗಿದ್ದರೂ ಇದು ಡಿಕೆ ಬ್ರದರ್ಸ್‌ಗೆ ಪ್ರತಿಷ್ಠೆಯ ಕಣವಾಗಿತ್ತು.

ಶಿಗ್ಗಾಂವಿಯಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಶಿಗ್ಗಾಂವಿಯಲ್ಲಿ ಈ ಬಾರಿ ಮಾಜಿ ಸಿಎಂ ಬಸವರಾಜ ಬೊಮಾಯಿ ಅವರ ಮಗ ಭರತ್‌ ಬೊಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್‌‍ ಯಾಸಿರ್‌ ಅಹಮದ್‌ ಖಾನ್‌ ಪಠಾಣ್‌ ಅವರನ್ನು ಕಣಕ್ಕಿಳಿಸಿತ್ತು. ಮುಸ್ಲಿಮರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಲಿಂಗಾಯತರ ಮತಗಳೂ ನಿರ್ಣಾಯಕವಾಗಿವೆ. ಈ ಬಾರಿ ಇಲ್ಲಿನ ಮತದಾರರು ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದು ಎಕ್ಸಿಟ್‌ ಪೋಲ್‌ ಫಲಿತಾಂಶ ಹೇಳಿದೆ.

ಇನ್ನು, ಸಂಡೂರು ಕ್ಷೇತ್ರ ಈ ಬಾರಿ ಕಾಂಗ್ರೆಸ್‌‍ ಪಾಲಾಗುವ ಸಾಧ್ಯತೆಯಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌‍ನ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌‍ ಕೂಡ ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಆತವಿಶ್ವಾಸದಲ್ಲಿದೆ.

ಭರ್ಜರಿ ಬೆಟ್ಟಿಂಗ್‌ :
ಈ ನಡುವೆ ಗೆಲ್ಲುವ ಕುದುರೆ ಯಾರೆಂಬ ಲೆಕ್ಕಾಚಾರ ತೀವ್ರಗೊಂಡಿದೆ. ಕ್ಷೇತ್ರಗಳಲ್ಲಿ ಬೆಟ್ಟಿಂಗ್‌ ಭರ್ಜರಿಯಾಗಿ ನಡೆಯುತ್ತಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಂತೂ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಯಾರಿಗೆ ಗೆಲುವು, ಗೆಲ್ಲುವ ಅಂತರ ಎಷ್ಟು? ಇತ್ಯಾದಿ ಆಧಾರದಲ್ಲಿ ಬೆಟ್ಟಿಂಗ್‌ ನಡೆಯುತ್ತಿದೆ. ಕುತೂಹಲ ಎಂದರೆ ಈ ಮೂರು ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ಬೆಟ್ಟಿಂಗ್‌ ಭರಾಟೆ ನಡೆಯುತ್ತಿಲ್ಲ, ಈ ಚುನಾವಣೆಯ ಬಗ್ಗೆ ಆಸಕ್ತಿ ಹೊಂದಿದ ಇತರ ಜಿಲ್ಲೆಗಳ ಬೆಟ್ಟಿಂಗ್‌ ದಂಧೆಕೋರರು ಬಾಜಿ ಕಟ್ಟಿದ್ದಾರೆ ಎಂಬ ಮಾಹಿತಿಯೂ ಇದೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಭಾರೀ ಅಂತರದಲ್ಲಿ ಗೆದ್ದು ಈಗ ಚನ್ನಪಟ್ಟಣ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಟ್ಟಿದ್ದಾರೆ. ಇದರಿಂದ ಈ ಬಾರಿ ಚುನಾವಣೆಗೆ ಮಂಡ್ಯದ ನಂಟು ಪ್ರಬಲವಾಗಿದೆ. 25 ಸಾವಿರಕ್ಕೂ ಅಧಿಕ ಜೆಡಿಎಸ್‌‍ ಕಾರ್ಯಕರ್ತರು, ಮುಖಂಡರು ಮಂಡ್ಯದಿಂದ ಚನ್ನಪಟ್ಟಣಕ್ಕೆ ಬಂದು ಚುನಾವಣೆ ಮಾಡಿದ್ದಾರೆ. ಈಗ ಬೆಟ್ಟಿಂಗ್‌ ಭರಾಟೆಯೂ ಮಂಡ್ಯದವರ ಪ್ರವೇಶದಿಂದ ಹೆಚ್ಚಿದೆ.

ಈ ಚುನಾವಣೆಯಲ್ಲಿ ಜೆಡಿಎಸ್‌‍ನ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌‍ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ನಡುವೆಯೇ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದೆ. ಯಾರೂ ಗೆದ್ದರೂ ಕೂದಲೆಳೆಯ ಅಂತರ ಎನ್ನುವ ಕುತೂಹಲವಿದೆ.

ಕೊನೆ ದಿನಗಳಲ್ಲಿ ನಿಖಿಲ್‌ ಕುಮಾರಸ್ವಾಮಿ ತಮ ನಡವಳಿಕೆ ಮೂಲಕ ಜನರ ಅನುಕಂಪ ಪಡೆದುಕೊಂಡರು ಎನ್ನುವ ಮಾತುಗಳು ಇರುವುದರಿಂದ ನಿಖಿಲ್‌ ಪರವಾಗಿಯೇ ಬೆಟ್ಟಿಂಗ್‌ ನಡೆಯುತ್ತಿದೆ. ಇನ್ನು ಕೆಲವರು ಯೋಗೇಶ್ವರ್‌ ಪರವಾಗಿಯೂ ಬೆಟ್ಟಿಂಗ್‌ಗೆ ಇಳಿದಿದ್ದಾರೆ. ಕೆಲವರು ಹಣವನ್ನು ನೇರವಾಗಿ ಕಟ್ಟಿದರೆ, ಇನ್ನು ಕೆಲವರು ಜಮೀನು, ಟ್ರಾಕ್ಟರ್‌ ಸಹಿತ ವಾಹನಗಳನ್ನೇ ಇರಿಸಿದ್ದಾರೆ.

ಬೊಂಬೆನಗರಿಯ ಉಪಚುನಾವಣೆಗೆ ಶೇ.88.81ರಷ್ಟು ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಮತಗಳು ಚಲಾವಣೆಗೊಂಡಿರುವುದು, ಹೆಚ್ಚಿನ ಮುಸ್ಲಿಂ ಮತಗಳು, ಮಹಿಳಾ ಮತದಾರರುಗಳೇ ಫಲಿತಾಂಶ ನಿರ್ಧರಿಸುವ ಅಂಶಗಳಾಗಿ ಪರಿಗಣಿತವಾಗುತ್ತಿದ್ದು, ಅವುಗಳ ಆಧಾರದ ಮೇಲೆಯೇ ಸೋಲು, ಗೆಲುವಿನ ಸಾಧ್ಯತೆಗಳು ಚರ್ಚೆಯಲ್ಲಿವೆ. ಈಗಾಗಲೇ ಹೋಟೆಲ್‌ಗಳು, ಟೀ ಅಂಗಡಿಗಳು, ಸಾರ್ವಜನಿಕ ಸ್ಥಳಗಳು ಚರ್ಚಾ ತಾಣಗಳಾಗಿದ್ದು, ಬೆಟ್ಟಿಂಗ್‌ ದಂಧೆಯವರು ಮತ್ತು ಬುಕ್ಕಿಗಳು ಜೂಜಿನಲ್ಲಿ ನಿರತರಾಗಿದ್ದಾರೆ.

ಯಾರು ಗೆದ್ದರೂ ಕೂದಲೆಳೆ ಅಂತರದಿಂದ ಗೆಲುವು :
ಕಾಂಗ್ರೆಸ್‌‍ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಹಾಗೂ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ನಡುವೆ ನೇರ ಸ್ಪರ್ಧೆ ಏರ್ಪಟಿದ್ದು, ಯಾರೇ ಗೆದ್ದರೂ ಕೂದಲೆಳೆ ಅಂತರದಲ್ಲಿ ಎಂಬ ಮಾತುಗಳು ಕೇಳಿಬರುತ್ತಿವೆ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಎರಡು ಕಡೆಯವರು ಬಾರಿ ಪೈಪೋಟಿ ನಡೆಸಿದ್ದು, ಎರಡು ಕಡೆಯೂ ಮತಗಳು ಹಂಚಿಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿಪಿವೈ ಹೇಳಿಕೆಯಿಂದ ಗೊಂದಲ! :
ಆರಂಭದಲ್ಲಿ ಚನ್ನಪಟ್ಟಣದಲ್ಲಿ ಸಿಪಿವೈ ಮೇಲುಗೈ ಸಾಧಿಸಿದ್ದರು. ಆದರೆ ಬರಬರುತ್ತಾ ನಿಖಿಲ್‌ ಕುಮಾರಸ್ವಾಮಿ ಅವರಲ್ಲಿ ಆತವಿಶ್ವಾಸ ಎದ್ದು ಕಾಣುತ್ತಿತ್ತು. ಚುನಾವಣೆಯ ಕೊನೆಯ ಹಂತದಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ನೀಡಿದ್ದ ಹೇಳಿಕೆ ಚುನಾವಣೆಯಲ್ಲಿ ಪ್ರಭಾವ ಬೀರಿದೆ. ಇದನ್ನು ಸ್ವತಃ ಸಿಪಿವೈ ಒಪ್ಪಿಕೊಂಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಗೆಲ್ಲುವ ಬಗ್ಗೆ ಪೂರ್ತಿ ವಿಶ್ವಾಸವನ್ನು ಅವರು ವ್ಯಕ್ತಪಡಿಸಿಲ್ಲ, ಸಿಪಿವೈ ಈ ಹೇಳಿಕೆ ಬೆಟ್ಟಿಂಗ್‌ ಮೇಲೂ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.

ಸಂಡೂರು 70 – 30! :
ಇನ್ನು ಕಾಂಗ್ರೆಸ್‌‍ ಭದ್ರಕೋಟೆಯಾಗಿರುವ ಸಂಡೂರಿನಲ್ಲಿ ಈ ಬಾರಿಯೂ ಕಾಂಗ್ರೆಸ್‌‍ ಅಭ್ಯರ್ಥಿಯತ್ತ ಬೆಟ್ಟಿಂಗ್‌ ಒಲವು ವ್ಯಕ್ತವಾಗುತ್ತಿದೆ. ಅನ್ನಪೂರ್ಣ ಅವರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಹೆಚ್ಚಿನ ಬೆಟ್ಟಿಂಗ್‌ ನಡೆಯುತ್ತಿದೆ. ಶೇ. 70ರಷ್ಟು ಬೆಟ್ಟಿಂಗ್‌ ಅನ್ನಪೂರ್ಣ ಪರವಾಗಿ ಇದೆ ಎನ್ನಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಈ ಬಾರಿ ಕ್ಷೇತ್ರದಲ್ಲಿ ಪೈಪೋಟಿ ನೀಡಿದರೂ ಗೆಲ್ಲುವ ಸಾಧ್ಯತೆ ಕಾಂಗ್ರೆಸ್‌‍ ಪರವಾಗಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಶಿಗ್ಗಾಂವಿಯಲ್ಲಿ 60-40 :
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌‍ ನಡುವೆ ಪೈಪೋಟಿ ಇದ್ದರೂ, ಕಾಂಗ್ರೆಸ್‌‍ ಆಂತರಿಕ ಜಗಳ, ಕಿತ್ತಾಟ ಬಿಜೆಪಿಗೆ ಲಾಭವಾಗಿದೆ ಎಂಬ ಅಭಿಪ್ರಾಯ ಇದೆ. ಆದರೂ ಇಲ್ಲೂ ಸೋಲು ಗೆಲುವಿನ ಅಂತರ ದೊಡ್ಡ ಪ್ರಮಾಣದಲ್ಲಿ ಇರಲು ಸಾಧ್ಯವಿಲ್ಲ. ಹೀಗಾಗಿ ಶಿಗ್ಗಾಂವಿಯಲ್ಲೂ ಬೆಟ್ಟಿಂಗ್‌ ಎಚ್ಚರಿಕೆಯಿಂದಲೇ ನಡೆಯುತ್ತಿದೆ. ಚುನಾವಣೆಯ ಕೊನೆಯ ಹಂತದ ಬೆಳವಣಿಗೆಗಳ ಆಧಾರದಲ್ಲಿ ಭರತ್‌ ಬೊಮಾಯಿ ಅವರ ಪರವಾಗಿ ಬೆಟ್ಟಿಂಗ್‌ ಒಲವು ಕಾಣಿಸುತ್ತಿದೆ ಎಂಬ ಮಾಹಿತಿ ಇದೆ.

1000 ದಿಂದ ಆರಂಭಗೊಂಡು ಲಕ್ಷಾಂತರ ರೂಪಾಯಿಯವರೆಗೂ ಬೆಟ್ಟಿಂಗ್‌ ನಡೆಯುತ್ತದೆ. ಕೆಲವರು ನೇರ ಬೆಟ್ಟಿಂಗ್‌ ನಡೆಸಿದರೆ, ದೊಡ್ಡ ಮಟ್ಟದಲ್ಲಿ ಪರ್ಸಂಟೇಜ್‌ ಲೆಕ್ಕದಲ್ಲಿ ಬೆಟ್ಟಿಂಗ್‌ ನಡೆಯುತ್ತದೆ. ಉದಾಹರಣೆಗೆ ಎಕ್‌್ಸ ಅಭ್ಯರ್ಥಿ ಗೆಲ್ಲುತ್ತಾನೆ ಎಂದು ಓರ್ವ 1000 ರೂಪಾಯಿ ಬೆಟ್ಟಿಂಗ್‌ ಕಟ್ಟಿದರೆ ಎದುರಾಳಿ ವೈ ಅಭ್ಯರ್ಥಿ ಗೆಲ್ಲುತ್ತಾನೆ ಎಂದು ಮತ್ತೋರ್ವ 400 ಬೆಟ್ಟಿಂಗ್‌ ಕಟ್ಟಬಹುದು. ಒಂದು ಪಕ್ಷ ಎಕ್‌್ಸ ಅಭ್ಯರ್ಥಿ ಸೋತಲ್ಲಿ 1000 ರೂಪಾಯಿ ಎದುರಾಳಿಗೆ ನೀಡಬೇಕು. ಇತ್ತ ವೈ ಅಭ್ಯರ್ಥಿ ಸೋತಲ್ಲಿ 400 ರೂಪಾಯಿ ಕೊಡಬೇಕಾಗುತ್ತದೆ.

RELATED ARTICLES

Latest News