Sunday, May 5, 2024
Homeರಾಜಕೀಯಕೋವಿಡ್ ಹಗರಣದ ಪಾಲು ಕೇಂದ್ರಕ್ಕೆ ಹೋಗಿದೆಯೇ..? : ಸಚಿವ ಪ್ರಿಯಾಂಕ್ ಖರ್ಗೆ

ಕೋವಿಡ್ ಹಗರಣದ ಪಾಲು ಕೇಂದ್ರಕ್ಕೆ ಹೋಗಿದೆಯೇ..? : ಸಚಿವ ಪ್ರಿಯಾಂಕ್ ಖರ್ಗೆ

ಹುಬ್ಬಳ್ಳಿ, ಡಿ.27- ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂಪಾಯಿ ಹಗರಣ ಆಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪ ಗಂಭೀರವಾದದ್ದು, ಹಗರಣದ ಸ್ವರೂಪ ನೋಡಿದರೆ ಹಿಂದಿನ ಸರ್ಕಾರದಲ್ಲಿ ಬಿಜೆಪಿಯ ಕೇಂದ್ರ ನಾಯಕರಿಗೂ ಪಾಲು ಹೋಗಿರಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಶಂಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೆಣದ ಮೇಲೆ ಹಣ ಮಾಡಲಾಗಿದೆ ಎಂದು ಆರೋಪ ಮಾಡಿದ್ದು ಕಾಂಗ್ರೆಸ್ ನಾಯಕರಲ್ಲ. ಅವರದೇ ಪಕ್ಷದ ಶಾಸಕ ಯತ್ನಾಳ್. ಅದು ಕೂಡ ಕೇಂದ್ರದ ಮಾಜಿ ಸಚಿವರಾಗಿದ್ದವರು, ಹಾಲಿ ಶಾಸಕರಾಗಿದ್ದವರು ಆರೋಪ ಮಾಡಿದ್ದಾರೆ. ಕೋವಿಡ್ ನಲ್ಲಿ 40 ಸಾವಿರ ಕೋಟಿ ಹಗರಣ ಆಗಿದೆ. ಹೆಣದ ಮೇಲೆ ಹಣ ಮಾಡಿದ್ದಾರೆ ಎಂದು ಹೇಳಿದ್ದಾರೆ, ಹಣದ ಮೇಲೆ ಹಣ ಮಾಡುವುದು ಮನುಷ್ಯತ್ವ ಅಲ್ಲ. ಯತ್ನಾಳ್ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಉತ್ತರ ನೀಡಬೇಕಿದೆ ಎಂದರು.

ಕೋವಿಡ್ ಭ್ರಷ್ಟಾಚಾರದಲ್ಲಿ ಕೇಂದ್ರಕ್ಕೂ ಪಾಲು ಹೋಗಿರಬಹುದು. 40 ಪರ್ಸೆಂಟ್ ಸರ್ಕಾರ ಬಿರುದು ಬಂದಿರೋದು ನಮ್ಮಿಂದ ಅಲ್ಲ, ಬಿಜೆಪಿಯವರಿಂದ. ಕೇಂದ್ರ ನಾಯಕರು, ರಾಜ್ಯ ನಾಯಕರಿಗೂ ಪಾಲು ಹೋಗಿದೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೋವಿಡ್ ಹಗರಣದ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕುತ್ತಿತ್ತು. ಆಗಿನ ವಿಧಾನ ಸಭಾಧ್ಯಕ್ಷ ರಾಗಿದ್ದವರು ಲೆಕ್ಕಪತ್ರ ಸಮಿತಿಗೆ ಪತ್ರ ಬರೆದು ವಿಚಾರಣೆ ಮುಂದುವರೆಸದಂತೆ ಸೂಚಿಸಿದ್ದರು. ಇತಿಹಾಸದಲ್ಲೇ ವಿಧಾನಸಭಾಧ್ಯಕ್ಷರು ಲೆಕ್ಕಪತ್ರ ಸಮಿತಿಗೆ ಪತ್ರ ಬರೆದು ಈ ರೀತಿ ನಿರ್ದೇಶನ ನೀಡಿದ ಉದಾಹರಣೆ ಇಲ್ಲ ಎಂದರು.

ರೊಚ್ಚಿಗೆದ್ದ ರಕ್ಷಣಾ ವೇದಿಕೆ, ಇಂಗ್ಲೀಷ್ ನಾಮಫಲಕಗಳ ಧ್ವಂಸ

40 ಸಾವಿರ ಕೋಟಿ ರೂಪಾಯಿ ಎಂದರೆ ಸಾಮಾನ್ಯವಾದ ವಿಚಾರವಲ್ಲ. ಅಷ್ಟು ಹಣ ಹೇಗೆ ಲೂಟಿಯಾಯಿತು ಎಂಬ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸುತ್ತಿದೆ. ಯತ್ನಾಳ್ ಪ್ರಾಮಾಣಿಕರು ಎಂದು ಜನ ನಂಬಿದ್ದಾರೆ. ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ವಿಳಂಬ ಮಾಡದರೆ ದಾಖಲೆಗಳನ್ನು ಬಹಿರಂಗ ಪಡಿಸಬೇಕು ಅಥವಾ ನ್ಯಾಯಾಂಗ ಸಮಿತಿಗಾದರೂ ದಾಖಲೆ ನೀಡಬೇಕು. ಎಂದು ಒತ್ತಾಯಿಸಿದರು.
ಯತ್ನಾಳ್ ಅವರ ಆರೋಪಕ್ಕೆ ವಿಜಯೇಂದ್ರ ಉತ್ತರ ಕೊಡಬೇಕು. ನಮ್ಮ ಪಕ್ಷದ ಮಾಜಿ ಶಾಸಕ ಯತೀಂದ್ರರನ್ನು ಶ್ಯಾಡೋ ಸಿಎಂ ಅಂತಾ ವಿಜಯೇಂದ್ರ ಆರೋಪ ಮಾಡಿದ್ದರು. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಯಾರಾಗಿದ್ದರು ಎಂದು ಪ್ರಶ್ನಿಸಿದರು.

ದೇಶ ನಡೆಯುತ್ತಿರುವುದು ಭಗವದ್ಗೀತೆ, ಕುರಾನ್, ಬೈಬಲ್ ಆಧಾರಿತವಾಗಿ ಅಲ್ಲ. ಸರ್ಕಾರಗಳು ಸಂವಿಧಾನದ ಮೇಲೆ. ಯಾರ ಏನಾದರೂ ಎನ್ನಲಿ, ಕರ್ನಾಟಕದಲ್ಲಿ ಸಂವಿಧಾನದ ಸರ್ಕಾರವಿದೆ. ಬಸವ ತತ್ವ, ಅಂಬೇಡ್ಕರ್ ತತ್ವದ ಮೇಲೆ ಸರ್ಕಾರ ನಡೆಯುತ್ತಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಹಿಂದೆ ಹಿಂದುತ್ವದ ಮೇಲೆ ಸರ್ಕಾರ ನಡೆಯುತ್ತಿತ್ತು. ವಿಧಾನಸಭಾಧ್ಯಕ್ಷರ ಪೀಠದ ಮೇಲೆ ಕುಳಿತು ವಿಶ್ವೇಶ್ವರ ಕಾಗೇರಿ ನಾನು ಆರ್‍ಎಸ್‍ಎಸ್‍ನವನು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಮುಂದೊಂದು ದಿನ ದಲಿತರು, ಮುಸ್ಲಿಂರು ಆರ್‍ಎಸ್‍ಎಸ್ ಒಪ್ಪುತ್ತಾರೆ ಎಂದು ಪ್ರತಿಪಾದಿಸಿದ್ದರು. ಅದರಿಂದ ಹಿಂದೆ ಹಿಂದುತ್ವದ ಸರ್ಕಾರವಿತ್ತು ಎಂಬುದರಲ್ಲಿ ಯಾವುದೇ ಅನುಮಾನ ಇರಲಿಲ್ಲ ಎಂದರು.

ಅಫಘಾನಿಸ್ತಾನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್

ಬಿಜೆಪಿಯವರು ಬ್ರಿಟಿಷರ ಬೂಟು ನೆಕ್ಕೋರು ಎಂದು ಕಾಂಗ್ರೆಸ್ ನಾಯಕ ಹರಿಪ್ರಸಾದ್ ಹೇಳಿರುವುದರಲ್ಲಿ ತಪ್ಪೇನಿದೆ. ಕ್ಷಮಾ ಪತ್ರ ಬರೆದಿದ್ದು ಯಾರು? ಬ್ರಿಟಿಷರ ಬಳಿ 60 ರೂಪಾಯಿ ಪಿಂಚಣಿ ಪಡೆದುಕೊಂಡಿದ್ದು ಯಾರು, ಎಲ್ಲವೂ ದಾಖಲೆ ಇದೆ. ಬಿಜೆಪಿ ವಾಟ್ಸ್‍ಅಪ್ ವಿಶ್ವವಿದ್ಯಾಲಯ ಸೃಷ್ಟಿಸುವ ದಿನಕ್ಕೊಂದು ಸುಳ್ಳೆ ನಿಜ ಎಂಬಂತಾಗಿದೆ ಎಂದರು.

ಈಗ ಬಿಜೆಪಿಯವರು ಎಂದು ಹೇಳಿಕೊಳ್ಳುವವರ ಪೂರ್ವಜರು ಕಾಂಗ್ರೆಸ್‍ಗೆ ಮತ ಹಾಕಿದ್ದರು. ಗಾಂಜಿಯವರ ಜೊತೆ ನಡೆದಿರಬೇಕು. ನಡೆದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗೆ ಸ್ವಂತ ಇತಿಹಾಸ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಇಲ್ಲ. ಹಾಗಾಗಿ ಈಗ ಸುಳ್ಳು ಸೃಷ್ಟಿಯ ಮೂಲಕ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

RELATED ARTICLES

Latest News