Sunday, April 28, 2024
Homeರಾಜ್ಯರೊಚ್ಚಿಗೆದ್ದ ರಕ್ಷಣಾ ವೇದಿಕೆ, ಇಂಗ್ಲೀಷ್ ನಾಮಫಲಕಗಳ ಧ್ವಂಸ

ರೊಚ್ಚಿಗೆದ್ದ ರಕ್ಷಣಾ ವೇದಿಕೆ, ಇಂಗ್ಲೀಷ್ ನಾಮಫಲಕಗಳ ಧ್ವಂಸ

ಬೆಂಗಳೂರು, ಡಿ.27- ಆಂಗ್ಲಭಾಷೆಯ ನಾಮಫಲಕಗಳ ವಿರುದ್ಧ ಸಮರ ಸಾರಿರುವ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಇಂದು ಹಲವು ವಾಣಿಜ್ಯ ಸಂಸ್ಥೆಗಳ ಎದುರು ಪ್ರತಿಭಟನೆ ನಡೆಸಿದ್ದಾರೆ. ಬೃಹತ್ ವಾಣಿಜ್ಯ ಸಂಸ್ಥೆಗಳಿಗೆ ತೆರಳಿ ಅಲ್ಲಿ ವಿಜೃಂಭಿಸುತ್ತಿದ್ದ ಆಂಗ್ಲ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಸಂಘರ್ಷವೂ ನಡೆದಿದೆ.

ಕೆಲವು ಸಂಸ್ಥೆಗಳು ಕರವೇಯ ಪ್ರತಿಭಟನೆಗೆ ಮಣಿದು ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಿವೆ. ಮಾಲ್ ಏಷ್ಯಾ ಸೇರಿದಂತೆ ಅನೇಕ ಬೃಹತ್ ವಾಣಿಜ್ಯ ಮಳಿಗೆಗಳು ಕನ್ನಡ ಭಾಷೆಯ ನಾಮಫಲಕ ಹಾಕಲು ತಿರಸ್ಕಾರ ಧೋರಣೆ ಅನುಸರಿಸಿದ್ದವು. ಕಳೆದ ವಾರದಿಂದ ಬೃಹತ್ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದ್ದಂತೆ ಮಾಲ್ ಏಷ್ಯಾ ನಾಮಫಲಕವನ್ನು ಬದಲಿಸಿದೆ.

ಈ ಹಿಂದೆ ಕಾವೇರಿ ನದಿವಿವಾದ ತೀವ್ರವಾಗಿದ್ದ ಸಂದರ್ಭದಲ್ಲೇ ನಾರಾಯಣಗೌಡರು ಮುಂದಿನ ಡಿಸೆಂಬರ್‍ನಲ್ಲಿ ಆಂಗ್ಲಭಾಷೆಗಳ ನಾಮಫಲಕಗಳ ವಿರುದ್ಧ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಕನ್ನಡವನ್ನು ಕಡೆಗಣಿಸುವ ವಾಣಿಜ್ಯ ಮಳಿಗೆಗಳು ಹಾಗೂ ಉದ್ಯಮಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಅದರ ಹೊರತಾಗಿಯೂ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಮಾಲ್ ಏಷ್ಯಾದಲ್ಲಿ ಕನ್ನಡ ನಾಮಫಲಕವನ್ನು ಹಾಕುವಂತೆ ನಾರಾಯಣಗೌಡರು ಲಿಖಿತ ರೂಪದಲ್ಲಿ ಮನವಿ ನೀಡಿದ್ದರು. ಅದರ ವಿರುದ್ಧ ದೂರು ನೀಡಿದ್ದ ಮಾಲ್ ಏಷ್ಯಾದವರು ನಾರಾಯಣಗೌಡರ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಅದರ ಬಳಿಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕರವೇ ಕಾರ್ಯಕರ್ತರು ನಗರಾದ್ಯಂತ ಪ್ರತಿಭಟನೆ ಗಳನ್ನು ನಡೆಸುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಜಗ್ಗದೇ ಇದ್ದ ವಾಣಿಜ್ಯಸಂಸ್ಥೆಗಳ ಮುಂಭಾಗದಲ್ಲಿರುವ ಫಲಕಗಳನ್ನು ಸ್ವಯಂ ಕಿತ್ತುಹಾಕುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ವಿಮಾನನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್ ಬಳಿ ಕರವೇ ಕಾರ್ಯಕರ್ತರು ಬೃಹತ್ ಪ್ರಮಾಣದಲ್ಲಿ ಜಮಾಯಿಸಿದರು. ಸಾದಹಳ್ಳಿಯ ಟೋಲ್‍ನಲ್ಲಿರುವ ಇಂಗ್ಲಿಷ್ ನಾಮಫಲಕವನ್ನು ಧ್ವಂಸಗೊಳಿಸಿದ್ದರು. ಅಲ್ಲಿಂದ ನಗರದತ್ತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.

ರಸ್ತೆಯುದ್ದಕ್ಕೂ ಕನ್ನಡ ಸಂಘಟನೆಯ ಕಾರ್ಯಕರ್ತರ ಕಲರವ ಕಂಡುಬಂದಿತು. ಅಲ್ಲಲ್ಲಿ ರಸ್ತೆತಡೆಗಳು ನಡೆದವು. ವಿಮಾನನಿಲ್ದಾಣದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ಜೊತೆಗೆ ಇತರ ಪ್ರಮುಖ ರಸ್ತೆಗಳಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದಿವೆ. ದಾರಿ ಮಧ್ಯೆ ಅಳವಡಿಸಲಾಗಿದ್ದ ಇಂಗ್ಲಿಷ್ ಭಾಷೆಯ ಬೃಹತ್ ಫ್ಲೆಕ್ಸ್ ಬ್ಯಾನರ್‍ಗಳನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದ್ದಾರೆ.

ಜ.14 ರಿಂದ ರಾಹುಲ್ ಗಾಂಧಿ ಭಾರತ್ ನ್ಯಾಯ ಯಾತ್ರೆ

ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮೇಕ್ರಿ ವೃತ್ತದ ಬಳಿಕ ಕರವೇ ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದುಕೊಂಡರು. ಆದರೆ ಬೇರೆ ಬೇರೆ ಪ್ರದೇಶಗಳಲ್ಲಿ ಸಂಘಟಿತರಾಗಿದ್ದ ಕಾರ್ಯಕರ್ತರು ಇಂಗ್ಲಿಷ್ ನಾಮಫಲಕಗಳ ವಿರುದ್ಧ ಸಮರ ಮುಂದುವರೆಸಿದ್ದಾರೆ. ರಾಜ್ಯಸರ್ಕಾರ ಫೆಬ್ರವರಿ 28 ರೊಳಗೆ ನಿಯಮಾನುಸಾರ ನಾಮಫಲಕದಲ್ಲಿ ಕನ್ನಡಕ್ಕೆ ಶೇ. 60 ರಷ್ಟು ಮಾನ್ಯತೆ ನೀಡಬೇಕು. ಇಲ್ಲವಾದರೆ ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಅದರ ನಡುವೆ ಕರವೇಯ ಪ್ರತಿಭಟನೆ ಇಂಗ್ಲಿಷ್ ವ್ಯಾಮೋಹಿಗಳಿಗೆ ಬಿಸಿ ಮುಟ್ಟಿಸಿದೆ.


ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಬೆಂಗಳೂರು ಕನ್ನಡಮಯವಾಗಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಕನ್ನಡಿಗರಿಗೆ ಉಳಿಗಾಲ ಇಲ್ಲದಂತಾಗುತ್ತದೆ. ವಾಣಿಜ್ಯ ಸಂಸ್ಥೆಗಳು, ಮಾಲ್‍ಗಳು ಕೇವಲ ಹೊರಗಿನ ನಾಮಫಲಕಗಳಲ್ಲಿ ಕನ್ನಡ ಬಳಸಿದರೆ ಸಾಲದು, ಒಳಗೂ ಕನ್ನಡ ಇರಬೇಕು ಎಂದು ಆಗ್ರಹಿಸಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆ ಮುನ್ನವೇ ಅಭ್ಯರ್ಥಿಗಳ ಲಿಸ್ಟ್ ಪ್ರಕಟಿಸಲು ಮುಂದಾದ ಬಿಜೆಪಿ

ಇಂದು ಕರವೇಯ ಪ್ರತಿಭಟನೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ಬಲವಂತವಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದರೆ ಕಾರ್ಯಕರ್ತರು ಹೋರಾಟವನ್ನು ಮುಂದುವರೆಸಲಿದ್ದಾರೆ ಎಂದು ಎಚ್ಚರಿಸಿದರು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ 28 ರವರೆಗೆ ಗಡುವು ನಿಗದಿ ಮಾಡಿದೆ. ಆನಂತರವೂ ಕನ್ನಡೀಕರಣವಾಗದೇ ಇದ್ದರೆ, ಮುಂದಿನ ದಿನಗಳಲ್ಲಿನ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಈ ಹೋರಾಟ ಬೆಂಗಳೂರಿಗಷ್ಟೇ ಅಲ್ಲ ರಾಜ್ಯಾದ್ಯಂತ ನಡೆಯುತ್ತದೆ ಎಂದು ಹೇಳಿದ್ದಾರೆ.

RELATED ARTICLES

Latest News