Wednesday, February 28, 2024
Homeರಾಜ್ಯದಟ್ಟ ಮಂಜು ತಂದ ಆಪತ್ತು, 25ಕ್ಕೂ ಹೆಚ್ಚು ಮಂದಿಗೆ ಗಾಯ

ದಟ್ಟ ಮಂಜು ತಂದ ಆಪತ್ತು, 25ಕ್ಕೂ ಹೆಚ್ಚು ಮಂದಿಗೆ ಗಾಯ

ಬೆಂಗಳೂರು, ಡಿ.27- ದಟ್ಟ ಮಂಜಿನಿಂದ ಕೂಡಿದ ವಾತಾವರಣದಿಂದಾಗಿ ಇಂದು ಮುಂಜಾನೆ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಾಗ, ಇದರ ಹಿಂದೆ ಬರುತ್ತಿದ್ದ ಮತ್ತೆರಡು ಖಾಸಗಿ ಬಸ್‍ಗಳು ಅಪ್ಪಳಿಸಿ ಸಂಭವಿಸಿದ ಸರಣಿ ಅಪಘಾತದಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರು- ಬೆಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ತೊಣಚಿ ಗುಪ್ಪೆ ಬಳಿ ಇಂದು ಮುಂಜಾನೆ 6.15ರ ಸುಮಾರಿನಲ್ಲಿ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಈ ಬಸ್ ಹಿಂಬಾಗ ಬರುತ್ತಿದ್ದ ಮತ್ತೆರಡು ಖಾಸಗಿ ಬಸ್‍ಗಳು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

ಜ.14 ರಿಂದ ರಾಹುಲ್ ಗಾಂಧಿ ಭಾರತ್ ನ್ಯಾಯ ಯಾತ್ರೆ

ಘಟನೆಯಿಂದಾಗಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರೆಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಮುಂಜಾನೆ ಅಪಘಾತ ಸಂಭವಿಸಿದ್ದರಿಂದ ಈ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುದ್ದಿ ತಿಳಿದು ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಜೆಸಿಬಿಯಿಂದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮುಂಜಾನೆ ಮಂಜು ಕವಿದ ವಾತಾವರಣದಿಂದಾಗಿ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳು ಸರಿಯಾಗಿ ಕಾಣಿಸದೆ ಅಪಘಾತ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News