Saturday, July 27, 2024
Homeರಾಜ್ಯಸಿ.ಟಿ.ರವಿಗೆ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಸ್ಥಾನ ಬಹುತೇಕ ಖಚಿತ

ಸಿ.ಟಿ.ರವಿಗೆ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಸ್ಥಾನ ಬಹುತೇಕ ಖಚಿತ

ಬೆಂಗಳೂರು,ಜೂ.2-ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಸಚಿವ ಸಿ.ಟಿ.ರವಿ ಅವರು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಚಿಕ್ಕಮಗಳೂರು, ಉಡುಪಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ ಅವರು ವಿಜೇತರಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ತೆರವಾಗಲಿರುವ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಆದರೆ ಪ್ರತಿಪಕ್ಷದಂತಹ ಮಹತ್ವದ ಹುದ್ದೆಯನ್ನು ನಿಭಾಯಿಸಬೇಕಾದರೆ ವಿಷಯ ಪಾಂಡಿತ್ಯ, ಆಳವಾದ ಅಧ್ಯಯನ, ಜ್ಞಾನ, ವಿಷಯಗಳ ಮೇಲೆ ಹಿಡಿತ, ಸಂದರ್ಭೋಚಿತ ವಿಷಯ ಪ್ರಸ್ತಾವನೆ, ಸರ್ಕಾರದ ಮೇಲೆ ಟೀಕೆ-ಟಿಪ್ಪಣಿ ಹೀಗೆ ಹಲವು ವಿಷಯಗಳ ಮೇಲೆ ಪಾಂಡಿತ್ಯ ಹೊಂದಿರಬೇಕು.

ಪರಿಷತ್‌ನಲ್ಲಿ ಉಪನಾಯಕರಾಗಿರುವ ಸುನಿಲ್‌ ವಲ್ಯಾಪುರೆ ಹಾಗೂ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಕೂಡ ಕಣ್ಣಿಟ್ಟಿದ್ದಾರೆ. ವಿಧಾನಸಭೆಯಲ್ಲಿ ಆರ್‌.ಅಶೋಕ್‌ ಪ್ರತಿಪಕ್ಷದ ನಾಯಕರಾಗಿರುವುದರಿಂದ ಪರಿಷತ್‌ನಲ್ಲೂ ಅದೇ ಸಮುದಾಯಕ್ಕೆ ಮಣೆ ಹಾಕುತ್ತಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸದನದಲ್ಲಿ ಸರ್ಕಾರದ ವಿರುದ್ಧ ರಣತಂತ್ರ ರೂಪಿಸುವುದು, ಎಲ್ಲರನ್ನು ಒಗ್ಗೂಡಿಸುವುದು ಹಾಗೂ ಸದಸ್ಯರ ಮೇಲೆ ಹಿಡಿತ, ಭಾಷೆ ಪಾಂಡಿತ್ಯ ಇರಬೇಕಾಗಿರುವುದರಿಂದ ಸಿ.ಟಿ.ರವಿ ಅವರಿಗೆ ಮಣೆ ಹಾಕಿದರೆ ಅಚ್ಚರಿ ಇಲ್ಲ.

ಮೂಲತಃ ಸಂಘ ಪರಿವಾರದ ಹಿನ್ನಲೆಯ ಸಿ.ಟಿ.ರವಿ ಅವರು ಉಗ್ರ ಹಿಂದೂತ್ವವಾದಿಯೂ ಹೌದು. ಸಂವಿಧಾನ, ಪ್ರಜಾಪ್ರಭುತ್ವ, ಪ್ರಚಲಿತ ವಿದ್ಯಮಾನಗಳು, ಇತಿಹಾಸ, ರಾಜಕೀಯ, ಸಾಹಿತ್ಯ ಹೀಗೆ ಹಲವಾರು ವಿಷಯಗಳ ಮೇಲೆ ತಮದೇ ಆದ ವಿದ್ವತ್‌ ಹೊಂದಿದ್ದಾರೆ.

ಯಾವುದೇ ವಿಷಯದ ಬಗ್ಗೆಯೂ ಸದನದಲ್ಲಿ ನಿರ್ಗಳವಾಗಿ ಮಾತನಾಡುವ ಚಾಕಚಕ್ಯತೆಯೂ ಇದೆ. ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿ.ಟಿ.ರವಿ ಅವರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಬಹುದೆಂಬ ಮಾತು ಬಿಜೆಪಿಯಲ್ಲಿ ಕೇಳಿಬರುತ್ತಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಈ ಎಲ್ಲಾ ಅಂತೆಕಂತೆಗಳಿಗೆ ಪೂರ್ಣ ವಿರಾಮ ಬೀಳಲಿದೆ.

RELATED ARTICLES

Latest News