ಬೆಂಗಳೂರು,ಏ.17- ಬಿಸಿಲ ಧಗೆ ಹಾಗೂ ಶ್ರೀ ರಾಮ ನವಮಿ ಹಬ್ಬದ ಹಿನ್ನಲೆಯಲ್ಲಿ ಕರ್ಬೂಜ, ಸೌತೆಕಾಯಿ, ನಿಂಬೆಹಣ್ಣುಗಳ ಬೆಲೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಲೇ ಇದ್ದು ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ದಾಹ ತಣಿಸಿಕೊಳ್ಳಲು ಜನರು ಹರಸಾಹಸ ಪಡುವಂತಾಗಿದೆ, ಈ ಹಿನ್ನಲೆಯಲ್ಲಿ ಬಹಳಷ್ಟು ಜನರು ತಂಪು ಪಾನೀಯ, ಜೂಸ್, ಎಳನೀರು ಮೊರೆ ಹೋಗಿದ್ದಾರೆ, ಆದರೆ ಬೆಲೆ ಬಿಸಿಲಿನಷ್ಟೇ ಬಿಸಿಯಾಗಿದೆ.
ಬೆಲೆ ಏರಿಕೆ:
ಶ್ರೀರಾಮ ನವಮಿಗೆ ಸಾಮಾನ್ಯವಾಗಿ ಎಲ್ಲೆಡೆ ಪಾನಕ , ಕೋಸಂಬರಿ ಪ್ರಸಾದವಾಗಿ ವಿತರಿಸಲಾಗುತ್ತದೆ ಆದರೆ ಪಾನಕ ತಯಾರಿಸಲು ಮುಖ್ಯವಾಗಿ ಕರಬೂಜ ಅವಶ್ಯಕವಾಗಿದ್ದು ಬರದ ಹಿನ್ನಲೆಯಲ್ಲಿ ಇದೆ ಮೊದಲ ಬಾರಿಗೆ ಕೆಜಿಗೆ 60 ರೂ. ದಾಟಿದೆ, ಅದೆ ರಿತಿ ನಿಂಬೆ ಹಣ್ಣಿನ ಬೆಲೆಯಲ್ಲೂ ಸಹ ಹೆಚ್ಚಳವಾಗಿದ್ದು ಗಾತ್ರಕ್ಕೆ ಅನುಗುಣವಾಗಿ ಒಂದಕ್ಕೆ 8 ರಿಂದ 10 ರೂ.ಗೆ ಮಾರಾಟ ವಾಗುತ್ತಿದೆ.
ಶ್ರೀರಾಮನವಮಿ ಹಿನ್ನಲೆಯಲ್ಲಿ ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ವಿಜಯನಗರ ಸೇರಿದಂತೆ ನಗರದ ಪ್ರಮುಖ ಕಡೆ ಕರ್ಬೂಜ ಹಣ್ಣಿನ ರಾಶಿ ಇದ್ದು ಖರೀದಿ ಭರಾಟೆ ಜೋರಾಗಿತ್ತು.
ದೇಹಕ್ಕೆ ತಂಪು ಕರ್ಬೂಜ ಜ್ಯೂಸ್:
ಕರಬೂಜ ಜ್ಯೂಸ್ ದೇಹಕ್ಕೆ ತಂಪು ನೀಡಲಿದ್ದು ಜನರು ಬಿಸಲಿಲಿನಿಂದ ದೇಹವನ್ನು ತಣ್ಣಗಿಡಲು ಕರಬೂಜ ಪಾನಕ ವನ್ನು ಹೆಚ್ಚಾಗಿ ಸೇವಿಸುತ್ತಾರೆ, ಆದರೆ ಬೇಡಿಕೆ ಹೆಚ್ಚಾಗಿದೆ ಸರಬರಾಜು ಕಡಿಮೆಯಾಗಿದೆ.
ರಾಜ್ಯದೆಲ್ಲೆಡೆ ತೀವ್ರ ಬರಗಾಲ ಆವರಿಸಿದ್ದು ನೀರಲ್ಲದ ಕಾರಣ ರೈತರು ಬೆಳೆ ಬೆಳೆಯಲು ಮುಂದಾಗದ ಕಾರಣ ಉತ್ಪಾದನೆ ಇಳಿಮುಖವಾಗಿದೆ ಜೊತೆಗೆ ಬಿಸಿಲಿಗೆ ನಿರೀಕ್ಷೆಯಂತೆ ಬೆಳೆ ಬಾರದೆ ಇಳುವರಿ ಕುಂಠಿತವಾಗಿರುವುದರಿಂದ ಬೆಲೆ ಹೆಚ್ಚಳವಾಗಿದೆ ನೆರೆಯ ತಮಿಳುನಾಡು ಆಂಧ್ರದಿಂದ ಹಣ್ಣು ಬರುತ್ತಿದ್ದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಇಳುವರಿ ಕಡಿಮೆ:
ಬಾರಿ ಬಿಸಿಲಿಗೆ ನಿಂಬೆಗಿಡದಲ್ಲಿ ಹೂಗಳು ಒಣಗಿ ಹೋಗುತ್ತಿದ್ದು ಇಳುವರಿ ಕಡಿಮೆಯಾಗಿದ್ದು ಜೊತೆಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಬೆಲೆ ಏರಿಕೆಯಾಗಿದೆ .ನೀರಿನ ಅಂಶ ಹೆಚ್ಚಾಗಿರುವ ಹಾಗೂ ಸ್ವಲ್ಪ ಮಟ್ಟಿಗೆ ದಾಹ ನೀಗಿಸುವ ಸೌತೆಯ ಬೆಲೆಯೂ ಸಹ ಏರಿಕೆಯಾಗಿದೆ ಸಾಮಾನ್ಯವಾಗಿ ಸೌತೆ ಕೆಜಿಗೆ 30 ರೂ. ದಾಟಿದರೆ ಹೆಚ್ಚು ಆದರೆ ಈ ಬಾರಿ 40 ರಿಂದ 45 ರೂ.ಗೆ ಮರಾಟವಾಗುತ್ತಿದೆ .ಈ ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇದ್ದು ರೈತರು ಬೆಳೆ ಬೆಳೆಯಲು ಅಷ್ಟಾಗಿ ಒಲವು ತೋರದ ಕಾರಣ ಮಾರುಕಟ್ಟೆಗೆ ನಿಗದಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಜಾಸ್ತಿಯಾಗಿದೆ ಎಂದು ಹೇಳಲಾಗುತ್ತಿದೆ.