ಹಾಸನ, ಆ.29– ಬಹುನಿರೀಕ್ಷಿತ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಏತ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಈ ಯೋಜನೆ ಉದ್ಘಾಟನಾ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ ಸಕಲೇಶಪುರದ ಕೆಸವನಹಳ್ಳಿ ಗ್ರಾಮದ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಚರಣೆಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಎತ್ತಿಹೊಳೆ ನಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ತಾಯಿ ಗಂಗೆ ಪೂಜೆ ಮಾಡಿ ಖುದ್ದಾಗಿ ನಾನೇ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಿದ್ದೇನೆ. ನಮ ಅಧಿಕಾರಿಗಳು ಈ ಯೋಜನೆಯ ವಿವರ ಮತ್ತು ವಿಡಿಯೋಗಳನ್ನು ತೋರಿಸಿದರು. ನಾನು ಕಣ್ಣಾರೆ ನೋಡಬೇಕು ಎಂದು ಬಂದಿದ್ದೇನೆ. ಈ ಹಿಂದೆ ಭೇಟಿ ನೀಡಿದಾಗ ಶೀಘ್ರವಾಗಿ ಕೆಲಸ ಮುಗಿಸಬೇಕು ಎಂದು ತಿಳಿಸಿದ್ದೇ, ಅದರಂತೆ ಒಂದೆರಡು ತಿಂಗಳು ತಡವಾಗಿಯಾದರೂ ಕೆಲಸ ಮುಗಿದಿದೆ ಎಂದು ತಿಳಿಸಿದರು.
ಒಟ್ಟು 8 ವಿಯರ್‌ಗಳಲ್ಲಿ 5 ವಿಯರ್‌ಗಳಿಗೆ ಚಾಲನೆ ನೀಡಲಾಗಿದೆ. 1,500 ಕ್ಯೂಸೆಕ್ಸ್ ನೀರನ್ನು ಮೇಲಕ್ಕೆ ಎತ್ತಲಾಗಿದೆ. ನೀರು ಕಡಿಮೆ ಆಗುವ ಮೊದಲು ಶುಭದಿನ, ಶುಭ ಘಳಿಗೆ ನೋಡಿ ಮುಖ್ಯಮಂತ್ರಿಗಳಿಂದ ಚಾಲನೆ ಮಾಡಿಸಲಾಗುವುದು ಎಂದರು.
ನಂತರ ಯೋಜನೆ ಕುರಿತು ವಿವರಣೆ ನೀಡಿದ ಅವರು, ಈ ಯೋಜನೆಯಿಂದ 24.01 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಕುಡಿಯಲು ನೀರು ಪೂರೈಸಲಾಗುವುದು.
ಬರಪೀಡಿತ 29 ತಾಲೂಕಿನ 38 ಪಟ್ಟಣ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರು ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ನೀರನ್ನು ಒದಗಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ತುಮಕೂರು ವ್ಯಾಪ್ತಿಯ 527 ಕೆರೆಗಳಿಗೆ 9.953 ಟಿಎಂಸಿ ನೀರನ್ನು ಹರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
23,251 ಕೋಟಿ ಮೊತ್ತದ ಈ ಮಹತ್ವಾಕಾಂಕ್ಷಿ ಯೋಜನೆಯು ಹಲವು ವರ್ಷಗಳಿಂದ ಮೊದಲನೇ ಹಂತದಲ್ಲಿ ಏತ ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳಲ್ಲಿ ಅಚಡಣೆ ಉದ್ಭವಿಸಿದ್ದ ಕಾರಣ ಈ ಯೋಜನೆ ಪೂರ್ಣಗೊಳಿಸುವುದು ವಿಳಂಬವಾಗಿತ್ತು. ಈ ಅಡಚಣೆಗಳನ್ನು ನಿವಾರಣೆ ಮಾಡಿಕೊಂಡು ಈಗ ಯೋಜನೆಯು ನಿರ್ಣಾಯಕ ಘಟ್ಟ ತಲುಪಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಡಿ. ಸುಧಾಕರ್, ಶಾಸಕರಾದ ಶಿವಲಿಂಗೇಗೌಡ, ಸಿಮೆಂಟ್ ಮಂಜು, ಶರತ್ ಬಚ್ಚೇಗೌಡ, ಜಲ ಸಂಪನೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ವಿಶ್ವೇಶ್ವರಯ್ಯ ಜಲ ನಿಗಮದ ಎಂ.ಡಿ.ಸಣ್ಣಚಿತ್ತಯ್ಯ, ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಡಿಸಿಎಂ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.