Friday, April 26, 2024
Homeರಾಜ್ಯಬಿಜೆಪಿಗೆ ತಲೆನೋವಾದ ದಾವಣಗೆರೆ ಕ್ಷೇತ್ರ: ಬಂಡಾಯ ಅಭ್ಯರ್ಥಿ ಕಣಕ್ಕೆ..?

ಬಿಜೆಪಿಗೆ ತಲೆನೋವಾದ ದಾವಣಗೆರೆ ಕ್ಷೇತ್ರ: ಬಂಡಾಯ ಅಭ್ಯರ್ಥಿ ಕಣಕ್ಕೆ..?

ಬೆಂಗಳೂರು,ಮಾ.25- ಪ್ರತಿಷ್ಠೆಯ ಕಣವಾಗಿರುವ ಮಧ್ಯಕರ್ನಾಟಕ ರಾಜಧಾನಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧವೇ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಭಿನ್ನಮತೀಯರು ಮುಂದಾಗಿದ್ದಾರೆ. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್ ಇಲ್ಲವೇ ಎಂ.ಪಿ.ರೇಣುಕಾಚಾರ್ಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಿದ್ದತೆಯನ್ನು ಮಾಡಿಕೊಂಡಿದ್ದು, ಬಿಜೆಪಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಏಕೆಂದರೆ ಪುತ್ರನಿಗೆ ಟಿಕೆಟ್ ಸಿಗದ ಕಾರಣ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಕಣಕ್ಕಿಳಿಯಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ದಾವಣಗೆರೆಯಲ್ಲೂ ಇದೇ ಬೆಳವಣಿಗೆ ಕಂಡುಬಂದಿರುವುದು ಬಿಜೆಪಿಗೆ ಮತ್ತಷ್ಟು ಚಿಂತೆಗೀಡು ಮಾಡಿದೆ. ದಾವಣಗೆರೆ ಹಾಲಿ ಸಂಸದರಾಗಿದ್ದ ಜಿ.ಎಂ.ಸಿದ್ದೇಶ್ವರ್‍ಗೆ ವಿರೋಧದ ನಡುವೆಯೂ ಟಿಕೆಟ್ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟಿಕೆಟ್ ವಂಚಿತರು ಅಧಿಕೃತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿರುದ್ಧವೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಮೂಲಗಳ ಪ್ರಕಾರ ಈ ಕ್ಷೇತ್ರದಿಂದ ಮಾಜಿ ಸಚಿವರಾದ ಎಸ್.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ ಇಲ್ಲವೇ ಡಾ.ರವಿ ಗೌಡರ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿರುವ ಭಿನ್ನಮತೀಯ ನಾಯಕರು ಯಾವುದೇ ಕಾರಣಕ್ಕೂ ಸಂದಾನಕ್ಕೆ ಒಪ್ಪದೇ ಬಂಡಾಯ ಅಭ್ಯರ್ಥಿಯನ್ನೇ ಕಣದಲ್ಲಿ ಮುಂದುವರೆಸಬೇಕೆಂಬ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.

ಬಿಎಸ್‍ವೈ ಕಸರತ್ತು:
ಬಹುತೇಕ ಟಿಕೆಟ್ ಹಂಚಿಕೆ ಅಂತಿಮ ಘಟ್ಟ ತಲುಪಿದ್ದರೂ ಬಿಜೆಪಿಯಲ್ಲಿ ಹೊತ್ತಿಕೊಂಡಿರುವ ಭಿನ್ನಮತ ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅದರಲ್ಲೂ ಮಧ್ಯ ಕರ್ನಾಟಕದ ಎರಡು ಪ್ರಮುಖ ಲೋಕಸಭಾ ಕ್ಷೇತ್ರಗಳಾದ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬಂಡಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಧಿಕೃತ ಅಭ್ಯರ್ಥಿಗೆ ತಲೆನೋವಾಗಿ ಪರಿಣಮಿಸಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಯಾದ ನಂತರ ಅಧಿಕೃತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‍ಗೆ ಟಿಕೆಟ್ ನೀಡಿರುವುದಕ್ಕೆ ಮುನಿಸಿಕೊಂಡಿರುವ ಭಿನ್ನಮತವನ್ನು ಶಮನಗೊಳಿಸಲು ಖುದ್ದು ಯಡಿಯೂರಪ್ಪನವರೇ ಅಖಾಡಕ್ಕೆ ಇಳಿದಿದ್ದಾರೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಮುಖಂಡರ ಜೊತೆ ಸಂಧಾನ ಸಭೆ ನಡೆಸಲು ಕಸರತ್ತು ನಡೆಸಿದರು. ಸಭೆಗೆ ಮಾಜಿ ಸಂಸದ ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ರಾಮಚಂದ್ರ ಸೇರಿದಂತೆ ಮತ್ತಿತರರು ಆಗಮಿಸಿದ್ದರು.

ಆದರೆ ಸಭೆಗೆ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಮತ್ತಿತರರು ಗೈರು ಹಾಜರಾಗಿದ್ದರು. ಸಭೆಗೆ ಎಲ್ಲರೂ ಬರಬೇಕೆಂದು ಖುದ್ದು ಯಡಿಯೂರಪ್ಪನವರೇ ಸೂಚನೆ ಕೊಟ್ಟಿದ್ದರೂ ಅವರ ಆದೇಶವನ್ನು ಕ್ಕರಿಸಿ ದೂರ ಉಳಿದಿದ್ದರು. ಭಿನ್ನಮತ ಎಲ್ಲವೂ ಸರಿ ಹೋಗುತ್ತದೆ ಎಂದು ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಮುಖರ ಗೈರುಹಾಜರಿ ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾರಿ ಹೇಳುತಿತ್ತು. ಹೀಗಾಗಿ ಮಂಗಳವಾರ ಖುದ್ದು ಯಡಿಯೂರಪ್ಪನವರೇ ಮನವೊಲಿಸಲು ದಾವಣಗೆರೆಗೆ ತೆರಳುತ್ತಿದ್ದಾರೆ.

ಇನ್ನೊಂದೆಡೆ ಟಿಕೆಟ್ ವಂಚಿತರಾಗಿರುವ ಕೊಪ್ಪಳದ ಕರಡಿ ಸಂಗಣ್ಣ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಒಂದೆರಡು ದಿನದಲ್ಲಿ ತಮ್ಮ ನಿರ್ಧಾರನ್ನು ಪ್ರಕಟಿಸುತ್ತೇನೆ ಎಂದು ಕರಡಿ ಸಂಗಣ್ಣ ಹೇಳಿರುವುದು ಪಕ್ಷ ಬಿಡುವ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಶಿವಮೊಗ್ಗದಲ್ಲಿ ಬಂಡಾಯ ಸಾರಿರುವ ಈಶ್ವರಪ್ಪ ಯಾರ ಮಾತಿಗೂ ಜಗ್ಗುತ್ತಿಲ್ಲ. ಕಣದಲ್ಲಿ ಉಳಿಯುತ್ತೇನೆ ಎಂದು ಶಪಥ ಮಾಡಿರುವುದು ಬಿಜೆಪಿಗೆ ತಲೆನೋವು ಉಂಟು ಮಾಡಿದೆ. ಕಾರ್ಯಕರ್ತರ ವಿರೋಧದ ನಡುವೆಯೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಜಗದೀಶ್ ಶೆಟ್ಟರ್‍ಗೂ ಬೆಳಗಾವಿಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಹೀಗೆ ಹಲವು ಕಡೆ ಬಿಜೆಪಿಗೆ ಭಿನ್ನಮತ ಎದುರಾಗಿರುವುದು ಅಕೃತ ಅಭ್ಯರ್ಥಿಗಳ ಮಂಡೆ ಬಿಸಿ ಮಾಡಿದೆ.

RELATED ARTICLES

Latest News