ಬೆಂಗಳೂರು,ಏ.6- ಚುನಾವಣಾ ಅಕ್ರಮಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಹಲವೆಡೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಕಾಧಿರಿಗಳೇ ಅಖಾಡಕ್ಕಿಳಿದು ಖುದ್ದು ಪರಿಶೀಲನೆ ನಡೆಸಲಾರಂಭಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ಗುರುವಾರ ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ನಿಷ್ಪಕ್ಷಪಾತ , ನಿರ್ಭೀತ, ನ್ಯಾಯಸಮ್ಮತ ಹಾಗೂ ಕಳಂಕರಹಿತ ಚುನಾವಣೆಯ ಪರಿಸ್ಥಿತಿಯನ್ನು ಖಾತ್ರಿಪಡಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತು.
ಜೊತೆಗೆ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಭಾಗಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿತ್ತು. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಡಳಿತಗಳಿಗೆ ಮಾರ್ಗಸೂಚಿಯನ್ನು ರವಾನಿಸಿದ್ದು, ಅದರ ಆಧಾರದ ಮೇಲೆ ಇಂದು ಹಲವು ಕಡೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಕಾಧಿರಿಗಳು ಕ್ಷೇತ್ರ ಮಟ್ಟದ ಪರಿಶೀಲನೆ ನಡೆಸಿದ್ದಾರೆ.
ತುಮಕೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಖುದ್ದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಶೋಕ್ರವರು ಹಾಜರಿದ್ದು, ಪರಿಶೀಲನೆ ನಡೆಸಿದರು. ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಖುದ್ದು ಪರಿಶೀಲಿಸಿದ್ದಲ್ಲದೆ, ಅಂತರ ಜಿಲ್ಲೆಗಳಿಗೆ ಸಂಚರಿಸುವ ಸಾರಿಗೆ ಬಸ್ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪ್ರಯಾಣಿಕರ ಸೋಗಿನಲ್ಲಿ ಸಾಗಿಸಲಾಗುವ ಲಗೇಜ್ಗಳಲ್ಲಿ ಅನುಮಾನಾಸ್ಪದ ವಸ್ತುಗಳಿದ್ದರೆ ಅದನ್ನು ಪರಿಶೀಲಿಸುವಂತೆಯೂ ಸೂಚನೆ ನೀಡಲಾಗಿದೆ.ಮತ್ತೊಂದೆಡೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಪಟೇಲ್ ಚೆಕ್ ಪೊಸ್ಟ್ಗಳಲ್ಲಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಬೆಳಗಾವಿ, ಮಹಾರಾಷ್ಟ್ರ ದೊಂದಿಗೆ ಗಡಿ ಹಂಚಿಕೊಂಡಿದ್ದು, 24 ಗಡಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಒಟ್ಟು 66 ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿಗಳು ಹಗಲು-ರಾತ್ರಿ ಮೂರು ಪಾಳಿಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈವರೆಗೂ 40 ಲಕ್ಷ ರೂ.ಗಳ ಮೌಲ್ಯದ ನಗದು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 2ನೇ ಹಂತದ ಚುನಾವಣಾ ಅಭ್ಯರ್ಥಿಗೆ ಏ.12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆ ಬಳಿಕ ಮತ್ತಷ್ಟು ವಸ್ತುಗಳು ಜಪ್ತಿಯಾಗಬಹುದು ಎಂದು ಜಿಲ್ಲಾಧಿಕಾರಿ ನಿತೀಶ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮೊದಲು ವಿಧಾನಸಭಾ ಚುನಾವಣೆ ವೇಳೆ ಇದೇ ಚೆಕ್ ಪೋಸ್ಟ್ ನಲ್ಲಿ ಭಾರಿ ಪ್ರಮಾಣದ ನಗದು ಹಾಗೂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಪ್ರಸ್ತುತ ಸಾರ್ವತ್ರಿಕ ಚುನಾವಣೆ ದೇಶದೆಲ್ಲೆಡೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿರುವುದರಿಂದಾಗಿ ಅಕ್ರಮಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
200 ಕೋಟಿ ರೂ. ಮೌಲ್ಯದ ಗಡಿ ದಾಟುತ್ತಿರುವ ಅಕ್ರಮ :
ಕಳೆದ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ನಡೆದ ಒಟ್ಟು ಕಾರ್ಯಾಚರಣೆಯಲ್ಲಿ ಸರಿಸುಮಾರು 100 ಕೋಟಿ ರೂ.ಗಳಷ್ಟು ವಸ್ತುಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭೆಯ ಚುನಾವಣೆಯನ್ನೂ ಮೀರಿದ ಚುನಾವಣಾ ಅಕ್ರಮಗಳ ಸನ್ನದು ಕಂಡುಬರುತ್ತಿದೆ.
ಮಾ.16 ರಂದು ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಅಂದಿನಿಂದಲೂ ನೀತಿ ಸಂಹಿತೆ ಜಾರಿಯಲ್ಲಿದೆ. 21 ದಿನಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 195 ಕೋಟಿ ರೂ. ಮೌಲ್ಯದ ಚುನಾವಣಾ ಅಕ್ರಮಕ್ಕೆ ಸಂಬಂಧಪಟ್ಟಂತಹ ನಗದು ಹಾಗೂ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ನಿನ್ನೆ ಒಂದೇ ದಿನ ಆದಾಯ ತೆರಿಗೆ ಇಲಾಖೆ 4 ಕೋಟಿ ರೂ.ಗೂ ಅಕ ಮೊತ್ತವನ್ನು ಜಪ್ತಿ ಮಾಡಿತ್ತು. ಈವರೆಗೂ 34.59 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. 1.79 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳನ್ನು, 11.10 ಕೋಟಿ ರೂ. ಮೌಲ್ಯದ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈವರೆಗೂ 133 ಕೋಟಿ ರೂ. ಮೊತ್ತದ 133 ಲೀಟರ್ ಮದ್ಯವನ್ನು ಚುನಾವಣಾ ಕರ್ತವ್ಯದಲ್ಲಿರುವ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
5.35 ಕೋಟಿ ರೂ. ಮೌಲ್ಯದ 333 ಕೆ.ಜಿ. ಮಾದಕ ದ್ರವ್ಯ ಸಿಕ್ಕಿಬಿದ್ದಿದ್ದರೆ, 9.43 ಕೋಟಿ ರೂ. ಮೌಲ್ಯದ 16 ಕೆ.ಜಿ. ಗೂ ಅಕ ಪ್ರಮಾಣದ ಚಿನ್ನ, 27 ಲಕ್ಷ ರೂ. ಮೌಲ್ಯದ 59 ಕೆ.ಜಿ. ಬೆಳ್ಳಿ, 9 ಲಕ್ಷ ರೂ. ಮೌಲ್ಯದ 21 ಕ್ಯಾರೆಟ್ ವಜ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಹಿರಿಯ ಅಧಿಕಾರಿಗಳು ಖುದ್ದು ಅಖಾಡಕ್ಕೆ ಇಳಿದಿರುವುದರಿಂದಾಗಿ ತಪಾಸಣೆ ಮತ್ತಷ್ಟು ಬಿಗಿಯಾಗಲಿದ್ದು, ಮುಂದಿನ ದಿನಗಳಲ್ಲಿ ಚುನಾವಣಾ ಅಕ್ರಮ ನಡೆಸುವವರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.