ತುಮಕೂರು, ಮಾ.15- ಹೊರಗಿನ ಅಭ್ಯರ್ಥಿ ಎನ್ನುವ ವಿಷಯ ನಿನ್ನೆಗೆ ಮುಗಿದು ಹೋಗಿದೆ. ನಾಳೆಯಿಂದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೆಲಸ ಆರಂಭಿಸುತ್ತೇನೆ. ಕಲ್ಪತರು ನಾಡನ್ನು ವಾರಣಾಸಿ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಲೋಕಸಭಾ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.
ಲೋಕಸಭಾ ಟಿಕೇಟ್ ದೊರೆತ ಹಿನ್ನೆಲೆಯಲ್ಲಿ ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದ್ದ ಕ್ಷೇತ್ರವನ್ನು ಬಿಟ್ಟುಕೊಟ್ಟು ಬೇರೆ ಎರಡು ಕ್ಷೇತ್ರದಲ್ಲಿ ಸ್ರ್ಪಧಿಸಿ ಸೋತಿದ್ದೆ.
ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸಗಾರ ಮನೆಯಲ್ಲೇ ಕೂರೋದು ಬೇಡ ಅಂತ ಲೋಕಸಭೆ ಟಿಕೆಟ್ನ್ನು ತುಮಕೂರು ಕ್ಷೇತ್ರದಿಂದ ನೀಡಿದೆ. ನನಗೆ ಕ್ಷೇತ್ರ ಹೊಸ ದೇನು ಅಲ್ಲ. ಮೊದಲಿನಿಂ ದಲೂ ಚಿರಪರಿಚಿತ.ಶ್ರೀ ಸಿದ್ದಗಂಗಾ ಶ್ರೀಗಳು, ಬಾಲಗಂಗಾಧರನಾಥ ಶ್ರೀಗಳು ಸೇರಿದಂತೆ ವಿವಿಧ ಮಠಾೀಶರ ಆಶೀರ್ವಾದ ಇದೆ. ರಾಷ್ಟ್ರದಲ್ಲಿ ಒಂದೇ ವಾರಣಾಸಿ ಇರೋದು.
ತುಮಕೂರು ಕೂಡ ಒಂದು ವಾರಣಾಸಿ ಆಗಬೇಕೆಂದು ಸಂಕಲ್ಪ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿಷಾ, ನಮ್ಮ ಮುಖಂಡರಾದ ಬಿ.ಎಸ್. ಯಡಿಯೂರಪ್ಪ ಅವರೆಲ್ಲರೂ ನನ್ನನ್ನು ಆಯ್ಕೆ ಮಾಡಿ ತುಮಕೂರಿಗೆ ಕಳುಹಿಸಿದ್ದಾರೆ. ನಾಳೆಯಿಂದಲೇ ಚುನಾವಣೆ ಪ್ರಚಾರ ಪ್ರಾರಂಭ ಮಾಡುತ್ತೇನೆ ಎಂದರು.
ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು 28 ಕ್ಷೇತ್ರಗಳನ್ನು ಗೆಲ್ಲಬೇಕು. ಹೊರಗೆ- ಒಳಗೆ ಎಂಬುದನ್ನು ನಿನ್ನೆಗೆ ಮುಗಿದುಹೋದ ವಿಚಾರ. ಎಲ್ಲರೂ ಒಳಗಿನವರೇ. 32 ಜಿಲ್ಲೆಗಳು ನಮ್ಮದೇ. ಮಾಜಿ ಸಚಿವ ಮಾಧುಸ್ವಾಮಿ ಅವರ ವೈಯಕ್ತಿಕ ಹೇಳಿಕೆ ಸಹಜ. ನಾಳೆ ಅವರನ್ನು ಭೇಟಿ ಮಾಡುತ್ತೇನೆ. ಮಠ, ಗುರುಕುಲ ದೇವಾಲಯ ಸೇರಿದಂತೆ ಸಂಜೆಯವರೆಗೂ ವಿವಿಧ ಕಡೆ ಭೇಟಿ ನೀಡುತ್ತೇನೆ.
ನಂತರ ಮಾಧುಸ್ವಾಮಿಯನ್ನು ಭೇಟಿಯಾಗುತ್ತೇನೆ. ಪ್ರಧಾನಿಯಾಗಿ ನರೇಂದ್ರ ಮೋದಿಯವರು ಮೂರನೇ ಭಾರಿ ಆಯ್ಕೆಯಾಗಬೇಕು ಎಂಬುದೇ ನಮ್ಮ ಗುರಿ ಎಂದು ತಿಳಿಸಿದರು. ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ಗೌಡ, ಮಾಜಿ ಶಾಸಕ ಲಕ್ಷ್ಮೀನಾರಾಯಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ, ಬಾವಿಕಟ್ಟೆ ನಾಗಣ್ಣ, ಮಧುಗಿರಿ ಗಂಗರಾಜು, ಭೀಮನಕುಂಟೆ ಹನುಮಂತೇಗೌಡ ಮತ್ತಿತರರಿದ್ದರು.