Sunday, April 28, 2024
Homeರಾಷ್ಟ್ರೀಯಡಯಾಲಿಸಿಸ್ ಕೇಂದ್ರಗಳ ಸಮಸ್ಯೆ ನಿವಾರಿಸಲು ಆಗ್ರಹ

ಡಯಾಲಿಸಿಸ್ ಕೇಂದ್ರಗಳ ಸಮಸ್ಯೆ ನಿವಾರಿಸಲು ಆಗ್ರಹ

ಬೆಳಗಾವಿ, ಡಿ.7- ಮೂತ್ರಪಿಂಡ ಆರೋಗ್ಯದ ಸಮಸ್ಯೆಗೊಳಗಾದ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲು ಒಂದು ತಿಂಗಳ ಒಳಗಾಗಿ ಸಮರ್ಪಕ ವ್ಯವಸ್ಥೆಗಳನ್ನು ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ಗುಂಡೂರಾವ್ ತಿಳಿಸಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಕೇಳಿದ ಪ್ರಶ್ನೆ ವ್ಯಾಪಕ ಚರ್ಚೆಗೆ ಗ್ರಾಸವಾಯಿತು.

ಪಕ್ಷಾತೀತವಾಗಿ ಶಾಸಕರು ಡಯಾಲಿಸಿಸ್ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ಕಾರವಾರದ ಮಂಡಸೂಡು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯವಿಲ್ಲದೆ ಸಯ್ಯದ್ ಎಂಬುವರು ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಸರ್ಕಾರ ಏಜೆನ್ಸಿ ಬದಲಾವಣೆಗೆ ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ ಪರ್ಯಾಯ ಸೌಲಭ್ಯಗಳಿಗೆ ಮುನ್ನೆಚ್ಚರಿಕೆ ವಹಿಸಬೇಕು. ತುರ್ತು ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ತೊಂದರೆಯಾಗಬಾರದು ಎಂದು ಒತ್ತಾಯಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಡಯಾಲಿಸಿಸ್ ಯಂತ್ರಗಳನ್ನು ಖರೀದಿಸಲು ಶಾಸಕರು ಕ್ರಮ ಕೈಗೊಳ್ಳುತ್ತಾರೆ. ಅದರ ನಿರ್ವಹಣೆಗೆ ತಂತ್ರಜ್ಞರನ್ನು ನೇಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ತುರ್ತು ಸಮಸ್ಯೆ ಇರುವವರಿಗೆ ಸಹಾಯವಾಗಲಿದೆ ಮತ್ತು ಡಯಾಲಿಸಿಸ್ ಸೌಲಭ್ಯವನ್ನು ಆರೋಗ್ಯ ಕರ್ನಾಟಕ ವಿಮಾ ವ್ಯಾಪ್ತಿಗೆ ಒಳಪಡಿಸಿದರೆ ಖಾಸಗಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ಹೇಳಿದರು. ಪಿ.ಎಂ.ಅಶೋಕ್, ರಾಜೇಗೌಡ ಸೇರಿದಂತೆ ಹಲವಾರು ಶಾಸಕರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಸಚಿವ ದಿನೇಶ್ ಗುಂಡೂರಾವ್, ಈ ಹಿಂದೆ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದ್ದ ಇಎಸ್‍ಕೆಎಜಿ ಸಂಸ್ಥೆ ಸಿಬ್ಬಂದಿಗಳಿಗೆ ವೇತನ, ಇಎಸ್‍ಐ, ಪಿಎಫ್ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿರಲಿಲ್ಲ. ಹೀಗಾಗಿ ಸರ್ಕಾರದಿಂದಲೇ ಇಎಸ್‍ಐ, ಪಿಎಫ್ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆ ಪಡೆದ ಇಎಸ್‍ಕೆಎಜಿ ಸಂಸ್ಥೆಗೆ ಅಸಮರ್ಥ ಸೇವೆಗಾಗಿ ದಂಡ ವಿಸಲಾಗಿದ್ದು, ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಜೊತೆಗೆ ರಾಜ್ಯದಲ್ಲಿ 4 ಕಂದಾಯ ವಿಭಾಗಗಳಲ್ಲೂ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ಹೊಸ ಗುತ್ತಿಗೆಗಾಗಿ ಟೆಂಡರ್ ಕರೆಯಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗಗಳ ಗುತ್ತಿಗೆ ಅಂತಿಮಗೊಂಡಿವೆ. ಒಂದು ತಿಂಗಳ ಒಳಗಾಗಿ ಹೊಸ ಗುತ್ತಿಗೆದಾರರು ಆಧುನಿಕವಾದ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಿದ್ದಾರೆ. ತಂತ್ರಜ್ಞರು ವೇತನ ಪಾವತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಿ ಉತ್ತಮವಾಗಿ ನಿರ್ವಹಣೆ ಮಾಡುವ ನಿರೀಕ್ಷೆಯಿದೆ.

ಈ ಬಾರಿ ಏಕ ಬಳಕೆಯ ಡಯಲೈಸರ್‍ಗಳನ್ನು ಉಪಯೋಗಿಸಲು ನಿರ್ಧರಿಸಲಾಗಿದೆ. ಈ ಮೊದಲು ಬಹು ಬಳಕೆಯ ಡಯಲೈಸರ್‍ಗಳಿಂದಾಗಿ ಸೋಂಕು ವ್ಯಾಪಿಸುವ ಆತಂಕ ಇತ್ತು. ಶುದ್ಧ ನೀರಿನ ಘಟಕ ಸೇರಿದಂತೆ ಹಲವಾರು ಅಗತ್ಯಗಳು ಬೇಕಿದ್ದು, ಏಕ ಬಳಕೆ ಸುರಕ್ಷಿತವಾಗಿದೆ ಎಂದು ತಿಳಿಸಿದರು.

ರಾಷ್ಟ್ರ ಉಳಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು : ಸುಪ್ರೀಂ ಕೋರ್ಟ್

ಕಲಬುರ್ಗಿ ವಿಭಾಗದ ಟೆಂಡರ್‍ನ ದರದಲ್ಲಿ ಹೊಂದಾಣಿಕೆಯಾಗಿಲ್ಲ. ಹೀಗಾಗಿ ಅಲ್ಲಿಗೆ ಮರು ಟೆಂಡರ್ ಕರೆಯಲಾಗಿದೆ. ಡಯಾಲಿಸಿಸ್ ಕೇಂದ್ರಗಳನ್ನು ನಮ್ಮ ಸರ್ಕಾರ 168 ರಿಂದ 219 ಕ್ಕೆ ಹೆಚ್ಚಿಸಿದೆ. ಡಯಾಲಿಸಿಸ್ ಯಂತ್ರಗಳ ಸಂಖ್ಯೆಯನ್ನು 490 ರಿಂದ 800 ಕ್ಕೆ ಹೆಚ್ಚಿಸಲಾಗಿದೆ. 59 ಹೊಸ ತಾಲೂಕುಗಳ 48 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಮುಷ್ಕರ ನಿರತ ತಂತ್ರಜ್ಞರ ಜೊತೆ ಸಂಧಾನ ನಡೆಸಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಈಗ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಸಂಸ್ಥೆಯ ಬದಲಾಗಿ ಆಯಾ ಜಿಲ್ಲೆಗಳ ಕುಟುಂಬ ಕಲ್ಯಾಣ ಆರೋಗ್ಯಾಧಿಕಾರಿಗಳೇ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವುದಾದರೆ ಅಗತ್ಯವಾದ ತಂತ್ರಜ್ಞರನ್ನು ಒದಗಿಸಲು ಸರ್ಕಾರ ಸಿದ್ಧವಿದೆ.

ಪ್ರಸ್ತುತ ಡಯಾಲಿಸಿಸ್ ಕೇಂದ್ರಗಳಲ್ಲಿ ಗುತ್ತಿಗೆ ಪಡೆದ ಸಂಸ್ಥೆಗಳೇ ಯಂತ್ರಗಳನ್ನು ಅಳವಡಿಸುತ್ತಾರೆ. ಸರ್ಕಾರ ಯಾವುದೇ ಯಂತ್ರಗಳನ್ನೂ ಹಾಕುವುದಿಲ್ಲ ಎಂದು ತಿಳಿಸಿದರು. ಡಯಾಲಿಸಿಸ್ ಸೇವೆಯನ್ನು ಆರೋಗ್ಯ ಕರ್ನಾಟಕ ವಿಮಾ ವ್ಯಾಪ್ತಿಗೆ ಒಳಪಡಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.

RELATED ARTICLES

Latest News