Thursday, December 12, 2024
Homeರಾಜ್ಯಒಗ್ಗಟ್ಟು ಪ್ರದರ್ಶನ : ಕಾಂಗ್ರೆಸ್ ವಿರುದ್ಧ ಜೆಡಿಎಸ್-ಬಿಜೆಪಿ ಮೈತ್ರಿ ತಂತ್ರ ಯಶಸ್ವಿ

ಒಗ್ಗಟ್ಟು ಪ್ರದರ್ಶನ : ಕಾಂಗ್ರೆಸ್ ವಿರುದ್ಧ ಜೆಡಿಎಸ್-ಬಿಜೆಪಿ ಮೈತ್ರಿ ತಂತ್ರ ಯಶಸ್ವಿ

ಬೆಂಗಳೂರು, ಡಿ.7- ಎನ್‍ಡಿಎ ಮೈತ್ರಿಕೂಟ ಸೇರಿದ ಬೆನ್ನಲ್ಲೇ ಮಿತ್ರ ಪಕ್ಷಗಳಾದ ಜೆಡಿಎಸ್-ಬಿಜೆಪಿ ನಡುವೆ ಒಗ್ಗಟ್ಟು ಪ್ರದರ್ಶನವಾಗುತ್ತಿದೆ. ಸದನದ ಒಳ-ಹೊರಗೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಆರೋಪ, ಟೀಕೆಗಳನ್ನು ಮಾಡುತ್ತಿವೆ. ಸರ್ಕಾರದ ಲೋಪ-ದೋಷಗಳನ್ನು ಮುಂದಿಟ್ಟುಕೊಂಡು ಹರಿಹಾಯುತ್ತಿವೆ.

ಮುಂಬರುವ ಲೋಕಸಭೆ ಚುನಾವಣೆಯನ್ನು ಗುರಿಯಲ್ಲಿಟ್ಟುಕೊಂಡು ಉಭಯ ಪಕ್ಷಗಳು ಒಂದಾಗಿವೆ. ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧದ ಹೋರಾಟಗಳನ್ನು ಎರಡೂ ಪಕ್ಷಗಳು ಜತೆಗೂಡಿ ನಡೆಸುತ್ತಿವೆ. ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಪರಿಸ್ಥಿತಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಎರಡೂ ಪಕ್ಷಗಳು ಜಂಟಿಯಾಗಿ ನೋಟಿಸ್ ನೀಡಿ ಚರ್ಚೆ ಆರಂಭಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ನೀಡುವ ಬಹಿರಂಗ ಹೇಳಿಕೆಗಳ ವಿರುದ್ಧವಾಗಿ ಬಿಜೆಪಿ-ಜೆಡಿಎಸ್ ಟೀಕಿಸುವ ಇಲ್ಲವೆ ವಿರೋಧಿಸುವ ಮೂಲಕ ತೀಕ್ಷ್ಣ ಹೇಳಿಕೆ ನೀಡುತ್ತಿವೆ.

ಆದರೆ, ವಿಧಾನಸಭೆ ಚುನಾವಣೆಗೂ ಮುನ್ನ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಈ ಎರಡೂ ಪಕ್ಷಗಳು ಈಗ ಪರಸ್ಪರ ಟೀಕಿಸುವ ಇಲ್ಲವೆ ಆರೋಪ ಮಾಡುವ ಗೋಜಿಗೆ ಹೋಗುತ್ತಿಲ್ಲ. ಬದಲಿಗೆ ಒಟ್ಟಾಗಿ ಗೆಳೆತನದೊಂದಿಗೆ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

ರಜಪೂತ ಕರ್ಣಿ ಸೇನೆ ಅಧ್ಯಕ್ಷರ ಹತ್ಯೆ : ಇಬ್ಬರು ಪೊಲೀಸರ ಅಮಾನತು

ಶಾಸಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಮಿತ್ರ ಪಕ್ಷಗಳ ಸಖ್ಯ ಇನ್ನಷ್ಟು ಗಟ್ಟಿಯಾಗಿದೆ. ಕಾಂಗ್ರೆಸ್‍ನತ್ತ ಮುಖ ಮಾಡಿದ್ದ ಜೆಡಿಎಸ್, ಬಿಜೆಪಿಯ ಕೆಲವು ಮುಖಂಡರು ಸದ್ಯಕ್ಕೆ ತಟಸ್ಥ ನಿಲುವು ತಳೆದು ತಮ್ಮ ತಮ್ಮ ಪಕ್ಷದಲ್ಲೇ ಉಳಿದಿದ್ದಾರೆ.

ಸದನದ ಒಳ-ಹೊರಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ತರಾಟೆಗೆ ತೆಗೆದುಕೊಳ್ಳುವ ಕಾರ್ಯತಂತ್ರ ರೂಪಿಸಿವೆ. ಅದರಂತೆ ನಿತ್ಯವೂ ಒಟ್ಟಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿವೆ. ಗುರಿ ತಲುಪಲು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿವೆ. ಅದರ ಭಾಗವಾಗಿಯೇ ಜತೆಗೂಡಿ ಹೋರಾಟ ನಡೆಸುತ್ತಿವೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇದಕ್ಕೆ ಪುಷ್ಠಿ ನೀಡುವಂತೆ ಬೆಳಗಾವಿಯಲ್ಲಿ ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಒಂದೆಡೆ ನಡೆದರೆ, ಮತ್ತೊಂದೆಡೆ ಔತಣ ಕೂಟದ ನೆಪದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಒಟ್ಟಿಗೆ ಸೇರಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ನಿನ್ನೆ ರಾತ್ರಿ ಖಾಸಗಿ ಹೋಟೆಲ್‍ನಲ್ಲಿ ಎರಡೂ ಪಕ್ಷದ ಶಾಸಕರಿಗೆ ಔತಣ ಕೂಟ ಆಯೋಜಿಸಿದ್ದರು. ಇದೊಂದು ಸೌಹಾರ್ಧ ಔತಣ ಕೂಟವಾಗಿತ್ತು. ಯಾವುದೇ ರಾಜಕೀಯ ವಿಚಾರಗಳು ಚರ್ಚೆಗೆ ಬರಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಆದರೆ, ಒಟ್ಟಿಗೆ ಸೇರಿ ಔತಣ ಕೂಟದಲ್ಲಿ ಭಾಗಿಯಾಗಿರುವುದೇ ರಾಜಕೀಯವಾಗಿ ಮಿತ್ರ ಪಕ್ಷಗಳಲ್ಲಿ ಒಗ್ಗಟ್ಟಿದೆ ಎಂಬ ಸಂದೇಶ ರವಾನಿಸುವುದಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು ಸೇರಿದಂತೆ ಕೆಲವರು ಔತಣಕೂಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಮೂಲಗಳು ಹೇಳಿವೆ.

RELATED ARTICLES

Latest News