Tuesday, May 21, 2024
Homeರಾಜಕೀಯಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಪಾರಾರಿಯಾಗುವವರೆಗೆ ಪೊಲೀಸರು ದನ ಕಾಯುತ್ತಿದ್ದರೇ..? : ಜೋಶಿ

ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಪಾರಾರಿಯಾಗುವವರೆಗೆ ಪೊಲೀಸರು ದನ ಕಾಯುತ್ತಿದ್ದರೇ..? : ಜೋಶಿ

ಹುಬ್ಬಳ್ಳಿ,ಮೇ1- ಅಶ್ಲೀಲ ಸಿ.ಡಿ ಪ್ರಕರಣ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ, ವಿದೇಶಕ್ಕೆ ಪರಾರಿಯಾಗುವ ಮುನ್ನ ಪೊಲೀಸರು ದನ ಕಾಯುತ್ತಿದ್ದರೇ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಪ್ತಚರ ವಿಭಾಗ ಮುಖ್ಯಮಂತ್ರಿಯವರ ಅಧೀನದಲ್ಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಪ್ರಜ್ವಲ್‌ ರೇವಣ್ಣ ಮೇಲೆ ಆರೋಪಗಳು ಕೇಳಿಬಂದಾಗ ಅವರ ಚಲನವಲನಗಳ ಬಗ್ಗೆ ಗಮನಹರಿಸಲು ಪೊಲೀಸರಿಗೆ ಸರ್ಕಾರ ಏಕೆ ನಿರ್ದೇಶನ ನೀಡಿರಲಿಲ್ಲ ಎಂದು ಪ್ರಶ್ನೆ ಮಾಡಿದರು.

ವಿಮಾನ ನಿಲ್ದಾಣದ ವಲಸಿಗರ ವಿಭಾಗದಲ್ಲಿ ರಾಜ್ಯಕ್ಕೆ ಬಂದು ಹೋಗುವವರು, ಇಲ್ಲಿಂದ ಹೊರ ಹೋಗುವವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಾರೆ. ಪ್ರಜ್ವಲ್‌ ರೇವಣ್ಣ ಜರ್ಮನಿಗೆ ಹೋಗಿದ್ದಾರೋ ಅಥವಾ ಇಂಗ್ಲೆಂಡ್‌ಗೆ ಹೋಗಿದ್ದಾರೋ ದೇವರಿಗೆ ಗೊತ್ತು. ಆದರೆ ಅವರು ವಿದೇಶಕ್ಕೆ ಹೋಗುವವರೆಗೂ ಸರ್ಕಾರವಾಗಲಿ, ಪೊಲೀಸರಾಗಲಿ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಹರಿಹಾಯ್ದರು.

ನನಗಿರುವ ಮಾಹಿತಿ ಪ್ರಕಾರ ಈ ಘಟನೆ 6 ತಿಂಗಳು ಅಥವಾ ಒಂದು ವರ್ಷದ ಹಿಂದೆ ನಡೆದಿಲ್ಲ. ಇದು ತುಂಬಾ ವರ್ಷಗಳಿಂದ ಹಿಂದೆ ನಡೆದಿದೆ. 2019ರಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಜ್ವಲ್‌ ರೇವಣ್ಣ ಪರವಾಗಿ ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶಿವಕುಮಾರ್‌ ಪ್ರಚಾರ ಮಾಡಿರಲಿಲ್ಲವೇ? ಈಗ ಯಾರಿಗೆ ನೈತಿಕತೆ ಪಾಠ ಹೇಳಲು ಹೊರಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ನಮ್ಮ ಪಕ್ಷ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಈಗಾಗಲೇ ನಮ್ಮ ನಿಲುವು ಏನೆಂಬುದನ್ನು ನಮ್ಮ ಕೇಂದ್ರ ಗೃಹಸಚಿವರಾದ ಅಮಿತ್‌ ಷಾ ಅವರೇ ಸ್ಪಷ್ಟಪಡಿಸಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಸ್ವತಃ ಕುಮಾರಸ್ವಾಮಿಯವರೇ ಹೇಳಿರುವಾಗ ಇಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಪಾತ್ರವೇನೆಂಬುದನ್ನು ಡಿ.ಕೆ.ಶಿವಕುಮಾರ್‌ ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಮನಸ್ಸಿಗೆ ಬಂದಂತೆ ಮಾತನಾಡಿದರೆ ನಮಗೂ ಮಾತನಾಡಲು ಬರುತ್ತದೆ ಎಂದು ಜೋಶಿ ಎಚ್ಚರಿಸಿದರು.

ಎಸ್‌ಐಟಿ ರಚನೆ ಮಾಡಿರುವ ಉದ್ದೇಶವೇ ಕಾಲಹರಣ ಮಾಡಲು ಎಂಬುದು ಎಲ್ಲರಿಗೂ ಗೊತ್ತು. ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಲು ಸಲಹೆ ಕೊಟ್ಟವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಅದಕ್ಕೂ ಮೊದಲು ಉನ್ನತ ಸ್ಥಾನದಲ್ಲಿರುವವರಿಗೆ ಯಾರು ದೂರವಾಣಿ ಕರೆ ಮಾಡಿದ್ದರು? ಅವರು ನೀಡಿದ ಸಲಹೆಗಳೇನು? ಎಂಬುದು ದೂರವಾಣಿ ಕರೆಯಲ್ಲಿ ದಾಖಲಾಗಿರುತ್ತದೆ. ಇದನ್ನು ಮತ್ತೊಮ್ಮೆ ಉಪಮುಖ್ಯಮಂತ್ರಿಯವರು ಪರಿಶೀಲಿಸಿ ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ಕೊಟ್ಟರು.

ನಾವು ಘಟನೆಯನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುತ್ತೇವೆ. ಈ ಪ್ರಕರಣಕ್ಕೂ ನಮ್ಮ ಮೈತ್ರಿಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಜೆಡಿಎಸ್‌ ತೆಗೆದುಕೊಂಡಿರುವ ನಿಲುವನ್ನು ನಾವು ಸ್ವಾಗತಿಸುತ್ತೇವೆ. ಅನಗತ್ಯವಾಗಿ ಬಿಜೆಪಿಯನ್ನು ಎಳೆದು ತರುವ ಅಗತ್ಯವಿಲ್ಲ ಎಂದು ಹೇಳಿದರು.

RELATED ARTICLES

Latest News