Wednesday, May 22, 2024
Homeಇದೀಗ ಬಂದ ಸುದ್ದಿಸಿಕ್ಕಾಪಟ್ಟೆ ಬಿಸಿಲು : ಪ್ರಚಾರಕ್ಕೆ ಜನರಿಲ್ಲದೆ ರಾಜಕೀಯ ಪಕ್ಷಗಳ ಹರಸಾಹಸ

ಸಿಕ್ಕಾಪಟ್ಟೆ ಬಿಸಿಲು : ಪ್ರಚಾರಕ್ಕೆ ಜನರಿಲ್ಲದೆ ರಾಜಕೀಯ ಪಕ್ಷಗಳ ಹರಸಾಹಸ

ಬೆಂಗಳೂರು, ಮೇ.1- ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಕಾವೇರುತ್ತಿರುವುದರ ಜೊತೆಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಜನ ನಿರೀಕ್ಷೆಯಂತೆ ಪ್ರಚಾರಕ್ಕೆ ಬರುತ್ತಿಲ್ಲ.

ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ ಬಳ್ಳಾರಿ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಬೆಳಗಾವಿ, ದಾವಣಗೆರೆ, ಚಿಕ್ಕೋಡಿ, ಧಾರವಾಡ, ಉತ್ತರಕನ್ನಡ, ಶಿವಮೊಗ್ಗ ಕ್ಷೇತ್ರಗಳಲ್ಲಿ ನಾಯಕರು ಅಬ್ಬರದ ಪ್ರಚಾರಕ್ಕೆ ದಾಂಗುಡಿ ಇಡುತ್ತಿದ್ದರು. ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜನ ಪ್ರಚಾರದ ಸಭೆ, ಮೆರವಣಿಗೆ, ರೋಡ್‌ ಶೋಗಳಲ್ಲಿ ನಿರೀಕ್ಷೆಯಂತೆ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ.

ರಾಜಕೀಯ ಪಕ್ಷಗಳ ನಾಯಕರು ಬೃಹತ್‌ ಸಮಾವೇಶ, ರೋಡ್‌ ಶೋ, ರ್ಯಾಲಿಗಳ ಮೂಲಕ ಶಕ್ತಿ ಪ್ರದರ್ಶನ ಮಾಡಿ ಮತದಾರರನ್ನು ಮತದಾನಕ್ಕೆ ಸಜ್ಜು ಗೊಳಿಸಲು ಮುಂದಾಗಿದ್ದಾರೆ. ಆದರೆ ಬಿಸಿಲಿನ ಧಗೆ ಇದಕ್ಕೆ ನಿರಂತರ ಅಡ್ಡಿಯಾಗುತ್ತಿದೆ. ಬೆಳಗ್ಗೆ 10 ಗಂಟೆಯೊಳಗೆ ಸಭೆ-ಸಮಾರಂಭಗಳನ್ನು ಮಾಡಿ ಮುಗಿಸಬೇಕು. ಇಲ್ಲವೇ ಸಂಜೆ 5.30ರ ನಂತರ ಸಮಾವೇಶ, ರೋಡ್‌ಶೋಗಳನ್ನು ಮಾಡಬೇಕು. ಮಧ್ಯಾಹ್ನದ ವೇಳೆ ಮನೆಯಿಂದ ಹೊರ ಬರಲು ಸಾಧ್ಯವಾಗದಷ್ಟು ಬಿಸಿಲಿನ ಝಳ ಇದೆ.

ಮೊದಲನೇ ಹಂತದ 14 ಕ್ಷೇತ್ರಗಳ ಚುನಾವಣೆಯಲ್ಲಿ ಕೂಡ ತಾಪಮಾನ ಮಿತಿಮೀರಿತ್ತು.ಎರಡನೇ ಹಂತದ ಚುನಾವಣೆಯಲ್ಲೂ ಕೂಡ ತಾಪಮಾನ ಏರಿಕೆಯಾಗಿದ್ದು, ಅಬ್ಬರದ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಬಿಸಿಲಿನ ತೀವ್ರತೆಗೆ ಜನ ಹೈರಾಣಾಗುತ್ತಿದ್ದಾರೆ.

ರಾಯಚೂರು, ಕಲಬುರಗಿ, ಬೀದರ್‌, ಕೊಪ್ಪಳ, ವಿಜಯಪುರ, ಹಾವೇರಿ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ದಾಖಲೆಯ ತಾಪಮಾನ ಏರಿಕೆಯಾಗಿದೆ. ಹೀಗಾಗಿ ಜನ ಪ್ರಚಾರಕ್ಕೆ ಬರುವುದು ಕಡಿಮೆಯಾಗಿದೆ. ಚುನಾವಣಾ ಪ್ರಚಾರಕ್ಕೆ ಬರುವ ಜನರಿಗೆ ತಂಪಾದ ಮಜ್ಜಿಗೆ, ಪಾನಕ ಪಾನೀಯಗಳ ವ್ಯವಸ್ಥೆ ಮಾಡಬೇಕು, ಬಹಿರಂಗ ಸಭೆಗಳಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ದೊಡ್ಡ ದೊಡ್ಡ ಪೆಂಡಾಲ್‌ಗಳನ್ನು ನಿರ್ಮಿಸಬೇಕು.

ಬರುವ ಸಭೆ-ಸಮಾರಂಭಗಳಿಗೆ ಬರುವ ಜನ ಬಿಸಿಲಿನ ಧಗೆ ಜಾಸ್ತಿ ಇರುವುದರಿಂದ ಹೆಚ್ಚು ಹೊತ್ತು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅರ್ಧ ಮುಕ್ಕಾಲು ಗಂಟೆಯಲ್ಲೆ ಹೊರಡಲು ಆರಂಭಿಸುತ್ತಾರೆ. ವೇದಿಕೆಯ ಮೇಲೆ ಕುಳಿತ ರಾಜಕೀಯ ಪಕ್ಷಗಳ ಮುಖಂಡರು, ಮಂತ್ರಿ ಮಹೋದಯರು ಬಿಸಿಲಿಗೆ ಚಡಪಡಿಸುತ್ತಿರುವುದು ಕಂಡುಬರುತ್ತಿದೆ.

ಹೆಚ್ಚು ಹೊತ್ತು ಸಭೆಗಳನ್ನು ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದು ಬಿಸಿಲಿನ ತಾಪಮಾನ ಕಡಿಮೆಯಾದ ಸಂದರ್ಭದಲ್ಲಿ ಅಂದರೆ ಸಂಜೆ ವೇಳೆ ಸಭೆ-ಸಮಾರಂಭ, ರೋಡ್‌ ಶೋಗಳನ್ನು ಆಯೋಜಿಸಲಾಗುತ್ತಿದೆ. ಇನ್ನು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವವರು ಕೂಡ ಬೆಳಗ್ಗೆ 7 ರಿಂದ 9 ಗಂಟೆ ಯೊಳಗೆ ಹೋಗಿ ಕರಪತ್ರಗಳನ್ನು ವಿತರಿಸುತ್ತಾರೆ. ಆ ನಂತರ ಸಂಜೆ 5 ರಿಂದ 8 ಗಂಟೆಯ ವರೆಗೆ ಮನೆ ಮನೆ ಮತಯಾಚನೆ ನಡೆಯುತ್ತಿದೆ.

ಒಟ್ಟಾರೆ ಈ ಭಾರಿಯ ಲೋಕಸಬಾ ಚುನಾವಣೆಗೆ ಬಿಸಿಲಿನ ಕಾಟ ತೀವ್ರಗೊಂಡಿದೆ. ನಿರೀಕ್ಷೆಯಂತೆ ಮಳೆ ಬಾರದ ಹಿನ್ನೆಲೆಯಲ್ಲಿ ಬೋರ್‌ವೆಲ್‌, ಬಾವಿ, ಕೆರೆಕಟ್ಟೆಗಳು ಬತ್ತಿ ಹೋಗಿ ನೀರಿನ ಅಭಾವ ಸೃಷ್ಟಿಯಾಗಿದೆ.

ಅಂತರ್ಜಲ ಮಟ್ಟ ಕುಸಿದಿದ್ದು, ರೈತರು, ಸಾರ್ವಜನಿಕರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಚುನಾವಣೆ ವೇಳೆಗೆ ಅಥವಾ ಚುನಾವಣೆ ಮುಗಿದ ನಂತರವಾದರೂ ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಜನ ಬಿಸಿಲಿನಲ್ಲಿಯೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

RELATED ARTICLES

Latest News