Wednesday, May 1, 2024
Homeರಾಜ್ಯ3 ತಿಂಗಳಲ್ಲಿ ಎಲ್ಲಾ ದಾಖಲೆಗಳ ಡಿಜಿಟಲೀಕರಣ : ಸಚಿವ ಕೃಷ್ಣಭೈರೇಗೌಡ

3 ತಿಂಗಳಲ್ಲಿ ಎಲ್ಲಾ ದಾಖಲೆಗಳ ಡಿಜಿಟಲೀಕರಣ : ಸಚಿವ ಕೃಷ್ಣಭೈರೇಗೌಡ

ಹುಬ್ಬಳ್ಳಿ,ಜ.31- ಕಂದಾಯ ಇಲಾಖೆಯ ದಾಖಲಾತಿ ಕೊಠಡಿಯಲ್ಲಿರುವ ಎಲ್ಲಾ ದಾಖಲಾತಿಗಳನ್ನು ಮೂರು ತಿಂಗಳೊಳಗಾಗಿ ಡಿಜಿಟಲೀಕರಣಗೊಳಿಸಲು ರಾಜ್ಯದ 31 ತಾಲೂಕುಗಳಲ್ಲಿ ಭೂ ಸುರಕ್ಷಾ ಯೋಜನೆಯನ್ನು ಆರಂಭಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳಲ್ಲಿ ತಲಾ ಒಂದು ತಾಲೂಕನ್ನು ಆಯ್ಕೆ ಮಾಡಿಕೊಂಡು ಈ ವಾರಾಂತ್ಯದೊಳಗಾಗಿ ಭೂ ಸುರಕ್ಷಾ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ಅಗತ್ಯವಾದ ಕಂಪ್ಯೂಟರ್, ಸ್ಕ್ಯಾನರ್, ಡೇಟಾ ಎಂಟ್ರಿ ಆಪರೇಟರ್ಗಳನ್ನು ಸರ್ಕಾರಿ ವೆಚ್ಚದಲ್ಲೇ ನೀಡಲಾಗಿದೆ ಎಂದು ಹೇಳಿದರು.

ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ದಾಖಲೆಗಳನ್ನು ಸಂರಕ್ಷಿಸುವುದು, ಡಿಜಟಲೀಕರಣಗೊಳಿಸುವುದು ಮತ್ತು ಸಾರ್ವಜನಿಕರಿಗೆ ಮುಕ್ತವಾಗಿ ದೊರೆಯುವಂತೆ ಮಾಡುವುದು ಇದರ ಉದ್ದೇಶ. ಹಳೆಯ ದಾಖಲೆಗಳನ್ನು ತಿದ್ದುವುದು, ನಾಶಪಡಿಸುವುದು, ಕಳೆದು ಹಾಕುವುದು ಸೇರಿದಂತೆ ನಾನಾ ರೀತಿಯ ಚಟುವಟಿಕೆಗಳು ನಡೆಯುತ್ತಿವೆ.

ಬೆಳಗಾವಿಯಲ್ಲಿ ಡಬಲ್ ಮರ್ಡರ್ : ಪತ್ನಿ , ಪ್ರಿಯಕರನ ಕೊಂದು ಪತಿ ಪರಾರಿ

ಕಾಗದದ ಸ್ವರೂಪದಲ್ಲಿರುವ ಭೌತಿಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವುದರಿಂದ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯ ಮಾಡುವುದರಿಂದ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಮಧ್ಯವರ್ತಿಗಳ ಮತ್ತು ಅಕ್ರಮಗಳ ಹಾವಳಿ ತಪ್ಪಲಿದೆ ಎಂದರು.

ಉಪನೋಂದಾವಣಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಇದನ್ನು ತಪ್ಪಿಸಲು ವ್ಯವಸ್ಥೆಯಲ್ಲೇ ಸುಧಾರಣಾ ಮಾರ್ಗಗಳನ್ನು ಕಂಡುಹಿಡಿಯಲಾಗುತ್ತಿದೆ. ಎಲ್ಲಾ ಕಚೇರಿಗಳಿಗೂ ಭೇಟಿ ನೀಡಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಸುಲಭದ ವಿಷಯವಲ್ಲ. ಅದಕ್ಕಾಗಿ ಆಡಳಿತ ತಂತ್ರಜ್ಞಾನ ಹಾಗೂ ಸಮಗ್ರ ಬದಲಾವಣೆಗೆ ಚಿಂತನೆ ನಡೆದಿದೆ.

ಹಲವು ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಚರ್ಚಿಸಿ ಒಂದು ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ತಿಂಗಳಿನಿಂದಲೇ ಇದನ್ನು ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ಹೇಳಿದರು. ರಾಜ್ಯದಲ್ಲಿ ಭೂ ಸರ್ವೆ ಪ್ರಕರಣಗಳು ಹಲವು ವರ್ಷಗಳಿಂದಲೂ ಬಾಕಿ ಉಳಿದಿವೆ. ವ್ಯಾಪಕ ದೂರುಗಳೂ ಈ ಬಗ್ಗೆ ಕೇಳಿಬರುತ್ತಿವೆ. ಅದನ್ನು ಸರಿಪಡಿಸಲು 20 ಕೋಟಿ ರೂ. ವೆಚ್ಚದಲ್ಲಿ ಸರ್ವೆ ಇಲಾಖೆಗೆ ಆಧುನಿಕ ಸಲಕರಣೆಗಳನ್ನು ಪೂರೈಸಲಾಗುತ್ತದೆ. 750 ಪರವಾನಗಿ ಪಡೆದ ಸರ್ವೆಯರ್ಗಳಿಗೆ ಅನುಮತಿ ನೀಡಲಾಗುತ್ತಿದೆ.

350 ಸರ್ವೆಯರ್ಗಳು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಯವರು ಅನುಮೋದನೆ ನೀಡಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಕೆಪಿಎಸ್ಸಿಯಿಂದ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಬಾಕಿ ಇರುವ 592 ಹುದ್ದೆಗಳಿಗೂ ನೇಮಕಾತಿ ನಡೆಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಸುಮಾರು 2 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸುವುದಾಗಿ ಹೇಳಿದರು.

ಕಂದಾಯ ಉಪನೋಂದಣಿ ಇಲಾಖೆಯನ್ನು ಕಾಗದ ರಹಿತ ಇಲಾಖೆಯನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ. ಇದರಿಂದಾಗಿ ಅಧಿಕಾರಿಗಳು ಕಡತವನ್ನು ಅನಗತ್ಯವಾಗಿ ನೆನೆಗುದಿಯಲ್ಲಿಟ್ಟುಕೊಳ್ಳುವುದು, ಜನರಿಂದ ಪ್ರತಿಫಲ ಬಯಸುವುದು, ಪ್ರಭಾವಿಗಳಷ್ಟೇ ಚುರುಕಾಗಿ ನಡೆಯುವುದು ಸೇರಿದಂತೆ ಹಲವು ಸಮಸ್ಯೆಗಳು ನಿವಾರಣೆಗೊಳ್ಳುತ್ತವೆ ಎಂದರು.

RELATED ARTICLES

Latest News