Thursday, April 23, 2026
Homeಜಿಲ್ಲಾ ಸುದ್ದಿಗಳುಬಿಸಿಲಿನ ತಾಪಕ್ಕೆ ಕಬಿನಿ ನೀರಿನ ಮಟ್ಟ ಕುಸಿತ, ಜನರಲ್ಲಿ ಹೆಚ್ಚಿದ ಆತಂಕ

ಬಿಸಿಲಿನ ತಾಪಕ್ಕೆ ಕಬಿನಿ ನೀರಿನ ಮಟ್ಟ ಕುಸಿತ, ಜನರಲ್ಲಿ ಹೆಚ್ಚಿದ ಆತಂಕ

Kabini water level drops due to hot weather, people are worried

ಎಚ್‌ಡಿಕೋಟೆ,ಏ.23- ರಾಜ್ಯದ ಪ್ರಮುಖ ಜಲಾಶಯವಾದ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟ ಮಳೆಯ ಕೊರತೆ ಮತ್ತು ಬಿಸಿಲಿನ ತಾಪಮಾನಕ್ಕೆ ತೀವ್ರವಾಗಿ ಕುಸಿತ ಕಂಡಿದ್ದು, ಜನಸಾಮಾನ್ಯರಿಗೆ ಮತ್ತು ಕಾಡುಪ್ರಾಣಿಗಳು, ಜಾನುವಾರುಗಳಿಗೆ ನೀರಿನ ಆತಂಕ ಎದುರಾಗಿದೆ.

ತಾಲ್ಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಬೇಕಾಗಿತ್ತು. ಆದರೆ ಬಿಸಿಲಿನ ತಾಪಮಾನ 36 ರಿಂದ 38 ಡಿಗ್ರಿ ಸೆಲ್ಸಿಯಸ್‌‍ ಇದ್ದು, ಜಲಾಶಯ ಸೇರಿದಂತೆ ಅನೇಕ ಕೆರೆಕಟ್ಟೆಗಳು ಬರಿದಾಗುತ್ತಿವೆ. ನೀರನ್ನು ಅವಲಂಬಿಸಿರುವ ನಾಗರಹೊಳೆ, ಬಂಡೀಪುರ ಅಭಯಾರಣ್ಯದ ವನ್ಯಪ್ರಾಣಿಗಳಿಗೆ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ಜಾನುವಾರುಗಳು, ರೈತರು, ಜನಸಾಮಾನ್ಯರಿಗೆ ಈಗಾಗಲೇ ನೀರಿನ ಅಭಾವ ಕಂಡುಬರುತ್ತಿದೆ.

ತಾಲ್ಲೂಕಿನಲ್ಲಿ ಕಬಿನಿ, ನುಗು, ತಾರಕ, ಹೆಬ್ಬಾಳ ಜಲಾಶಯಗಳಿದ್ದರೂ ನೀರಾವರಿ ಪ್ರದೇಶಕ್ಕಿಂತ ಕೆರೆಕಟ್ಟೆಗಳನ್ನೇ ರೈತರು ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ಬಿಸಿಲಿನ ತಾಪಮಾನಕ್ಕೆ ರೈತರ ಜಮೀನುಗಳಲ್ಲಿ ಇದ್ದ ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಮತ್ತೊಂದೆಡೆ ಕೆರೆ ಕಟ್ಟೆಗಳಲ್ಲೂ ನೀರು ಬತ್ತಿಹೋಗಿ ಜನರು ಪರದಾಡುತ್ತಿದ್ದಾರೆ.

ಜಲಾಶಯಗಳಲ್ಲಿರುವ ನೀರನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೆರೆಕಟ್ಟೆಗೆ ತುಂಬಿಸುವ ಕೆಲಸ ಮಾಡಬೇಕಿದೆ. ಕಳೆದ ಸಾಲಿನಲ್ಲಿ ಏಪ್ರಿಲ್‌ ತಿಂಗಳ ಸಮಯದಲ್ಲಿ ಕಬಿನಿ ಜಲಾಶಯದಲ್ಲಿ 66 ಅಡಿ ನೀರಿನ ಸಂಗ್ರಹವಿತ್ತು. ಪ್ರಸ್ತುತ 60 ಅಡಿಗಳಿಗೆ ಕುಸಿತವಾಗಿದೆ.

ಜಲಾಶಯದಿಂದ ಕುಡಿಯುವ ನೀರಿಗಾಗಿ ಒಂದೂವರೆ ಸಾವಿರ ಕ್ಯೂಸ್ಸೆ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಬಿಸಿಲಿನ ತಾಪಮಾನ ಇನ್ನೂ ಒಂದು ವಾರ ಹೀಗೆಯೇ ಮುಂದುವರಿದರೆ ಕಬಿನಿ ಸೇರಿದಂತೆ ಎಲ್ಲಾ ಜಲಾಶಯಗಳು ಮತ್ತು ಕೆರೆಕಟ್ಟೆಗಳು ನೀರಿಲ್ಲದೆ ಬತ್ತಿಹೋಗಿ ರೈತರು ಬೆಳೆದ ಬೆಳೆಗಳು ಒಣಗುತ್ತಾ ಮತ್ತು ಜಾನುವಾರುಗಳು, ಕಾಡುಪ್ರಾಣಿಗಳಿಗೆ ಹಾಗೂ ಜನಸಾಮಾನ್ಯರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.

ಈ ಎಲ್ಲಾ ಸಮಸ್ಯೆಗಳಿಗೆ ಮಳೆಯಾಗುವುದೊಂದೇ ಪರಿಹಾರವಾಗಿದ್ದು, ಅಷ್ಟರಲ್ಲಿ ಇರುವ ನೀರನ್ನು ಜಾಗ್ರತೆಯಿಂದ ಸದ್ಬಳಕೆ ಮಾಡಿಕೊಳ್ಳಲು ಎಲ್ಲರೂ ಮುಂದಾಗಬೇಕಿದೆ.

RELATED ARTICLES

Latest News