ಬೆಂಗಳೂರು,ಫೆ.22- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಡ್ಡ ಬಿಟ್ಟಿರುವ ವಿಷಯ ವಿಧಾನಪರಿಷತ್‍ನಲ್ಲಿ ಕೆಲ ಹೊತ್ತು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು. ಬಜೆಟ್ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರು ಮಾತನಾಡುತ್ತಿದ್ದಾಗ ತಮ್ಮ ಸರ್ಕಾರ ಕೈಗೊಂಡಿರುವ ಸಾಧನೆಗಳನ್ನು ವಿವರಿಸುತ್ತಿದ್ದರು.
ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಹಗಲು ರಾತ್ರಿ ಎನ್ನದೆ ಗಲ್ಲಿ ಗಲ್ಲಿಗಳನ್ನು ಸುತ್ತಿ , ನಾವು ಅಧಿಕಾರಕ್ಕೆ ಬಂದರೆ ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲಿದ್ದೇವೆ ಎಂಬುದರ ಕುರಿತು ಜನತೆಗೆ ಆಶ್ವಾಸನೆ ಕೊಟ್ಟಿದ್ದರು. ಅದರಲ್ಲೂ ನಮ್ಮ ಉಪಮುಖ್ಯಮಂತ್ರಿಗಳಾದ ಶಿವಕುಮಾರ್ ಅವರ ಪಾತ್ರ ಬಹುದೊಡ್ಡದು ಎಂದು ಹೇಳುತ್ತಿದ್ದಂತೆ, ಪ್ರತಿಪಕ್ಷದ ನಾಯಕದ ಕೋಟಾ ಶ್ರೀನಿವಾಸ್ ಪೂಜಾರಿ ಎಲ್ಲಾ ಓಕೆ ನಿಮ್ಮ ಡಿಸಿಎಂ ಅವರು ಗಡ್ಡ ಬಿಟ್ಟಿರುವುದು ಏಕೆ ಎಂದು ಕಾಲೆಳೆದರು.
ಸಭಾಪತಿಗಳೇ, ರಾಜ್ಯದಲ್ಲಿಂದು ಡಿ.ಕೆ.ಶಿವಕುಮಾರ್ ಗಡ್ಡ ಬಿಟ್ಟಿರುವ ವಿಷಯ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಅವರು ಗಡ್ಡ ಬಿಟ್ಟಿರುವುದರ ಬಗ್ಗೆ ಒಂದೊಂದು ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ. ತಮ್ಮ ಉದ್ದೇಶ ಈಡೇರುವವರೆಗೂ ಅವರು ಗಡ್ಡ ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆ ಉದ್ದೇಶವಾದರೂ ಏನು? ಅದು ಈಡೇರುತ್ತದೆಯೋ ಇಲ್ಲವೋ ಈಡೇರಲು ಕೆಲವರು ಅವಕಾಶ ಕೊಡುತ್ತಾರೆಯೇ? ಇಲ್ಲವೇ ಹೀಗೆ ಗಡ್ಡ ಬಿಟ್ಟುಕೊಂಡೇ ಇರುತ್ತಾರೆಯೇ? ಎಂಬುದು ರಾಜ್ಯದ ಜನತೆಯಲ್ಲೂ ಕುತೂಹಲ ಮೂಡಿಸಿದೆ ಎಂದು ಕಿಚಾಯಿಸಿದರು.
ಅನಂತ್ ಅಂಬಾನಿ ಮದುವೆಗೆ, ಬಿಲ್‍ಗೇಟ್ಸ್, ಜುಕರ್ಬರ್ಗ್ ಸೇರಿದಂತೆ ಜಾಗತಿಕ ಉದ್ಯಮಿಗಳಿಗೆ ಆಹ್ವಾನ
ಆಗ ಪರಿಷತ್‍ನ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು, ಡಿ.ಕೆ.ಶಿವಕುಮಾರ್ ಏಕೆ ಗಡ್ಡ ಬಿಟ್ಟಿದ್ದಾರೆ ಎಂಬುದನ್ನು ನಾನು ಹೇಳುತ್ತೇನೆ. ಅವರು ಮುಖ್ಯಮಂತ್ರಿ ಆಗುವವರೆಗೂ ಗಡ್ಡ ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಈಗ ತಮ್ಮ ಗುರಿ ತಲುಪುತ್ತೇನೆಯೋ ಇಲ್ಲವೋ ಎಂಬ ಆತಂಕ ಅವರಿಗೆ ಶುರುವಾಗಿದೆ. ಹೀಗಾಗಿಯೇ ಗಡ್ಡ ತೆಗೆಯಲು ಹಿಂದೆ-ಮುಂದೆ ನೋಡುತ್ತಿದ್ದಾರೆ ಎಂದರು.
ಇದಕ್ಕೆ ಆಕ್ಷೇಪಿಸಿದ ಸದಸ್ಯೆ ಉಮಾಶ್ರೀ, ನಿಮ್ಮ ಪ್ರಧಾನಿ ನರೇಂದ್ರಮೋದಿ ಅವರೂ ಗಡ್ಡ ಬಿಟ್ಟಿದ್ದಾರೆ. ಹಾಗಾದರೆ ಅವರು ಹಿಂದೆ ಪ್ರಧಾನಿಯಾಗುವವರೆಗೂ ಗಡ್ಡ ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆಯೇ? ಮೊದಲು ನಿಮ್ಮ ಮೋದಿಯವರಿಗೆ ಗಡ್ಡ ತೆಗೆಯಲು ಹೇಳಿ ಎಂದು ತಿರುಗೇಟು ನೀಡಿದರು.