Friday, November 22, 2024
Homeರಾಜಕೀಯ | Politicsದೇವರಾಜೇಗೌಡ ಬಂಧನ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ

ದೇವರಾಜೇಗೌಡ ಬಂಧನ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ

ಬೆಂಗಳೂರು, ಮೇ 11- ಪೆನ್‌ಡ್ರೈವ್‌ ಪ್ರಕರಣದ ಮತ್ತೊಂದು ಭಾಗವಾಗಿ ಬಿಜೆಪಿ ನಾಯಕ ದೇವರಾಜೇಗೌಡರ ಬಂಧನಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿರಾಕರಿಸಿದ್ದಾರೆ.

ಇಂದು ಬೆಳಗ್ಗೆ ಆಂಧ್ರ ಪ್ರದೇಶದಲ್ಲಿನ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಇಂದು ಕಡಪಾಗೆ ಪ್ರಯಾಣಿಸುತ್ತಿದ್ದು, ಅಲ್ಲಿಂದ ಮಡಕಶಿರಾಗೆ ಭೇಟಿ ನೀಡಿ ಅಲ್ಲಿಂದ ವಾಪಸ್‌‍ ಬರಬೇಕಿದೆ. ಮನೆಯಲ್ಲಿ ಪತ್ರಿಕೆಗಳನ್ನು ಓದಲಾಗಿಲ್ಲ, ಇಡೀ ರಾತ್ರಿ ಬ್ಯೂಸಿಯಾಗಿದ್ದೆ. ಆಂಧ್ರ ಪ್ರದೇಶದಿಂದ ವಾಪಸ್‌‍ ಆದ ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಅವರ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ಮತ್ತು ಪ್ರಜ್ವಲ್‌ ರೇವಣ್ಣ ಅವರಿಂದ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ತಮ ಬಳಿ ಇಟ್ಟುಕೊಂಡಿದ್ದ ದೇವರಾಜೇಗೌಡರನ್ನು ನಿನ್ನೆ ಬಂಧಿಸಲಾಗಿದೆ.

ಪೆನ್‌ಡ್ರೈವ್‌ನಲ್ಲಿ ವಿವಾದಿತ ವಿಡಿಯೋಗಳು ಬಹಿರಂಗವಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ದೇವರಾಜೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಆರೋಪ ಮಾಡಿದ್ದರು. ಪೆನ್‌ಡ್ರೈವ್‌ ಬಿಡುಗಡೆಯ ಹಿಂದೆ ಡಿ.ಕೆ.ಶಿವಕುಮಾರ್‌ ಕೈವಾಡ ಇದೆ ಎಂಬ ಆರೋಪ ಮಾಡಿದ್ದರು.

ಅದರ ಬೆನ್ನಲ್ಲೇ ದೇವರಾಜೇಗೌಡರು ವಿವಾಹಿತ ಮಹಿಳೆಯೊಂದಿಗೆ ಅನುಚಿತವಾಗಿ ಮಾತನಾಡಿರುವುದು ಮತ್ತು ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಮತ್ತು ಆಡಿಯೋ ಬಹಿರಂಗಗೊಂಡಿತ್ತು. ಬಳಿಕ ದೇವರಾಜೇಗೌಡರನ್ನು ಹಿರಿಯೂರು ಬಳಿ ಪೊಲೀಸರು ಬಂಧಿಸಿದ್ದರು.

ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೊಳೆನರಸೀಪುರಲ್ಲಿ ದಾಖಲಿಸಲಾಗಿದ್ದ ಪ್ರಕರಣ ಸಂಬಂಧ ವಿಚಾರಣೆ ಮುಂದುವರೆದಿದೆ. ಸಂತ್ರಸ್ತ ಮಹಿಳೆಯಿಂದ ಮತ್ತೊಂದು ಹೇಳಿಕೆ ಪಡೆದುಕೊಳ್ಳಲಾಗುತ್ತಿದ್ದು ದೇವರಾಜೇಗೌಡರ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಈ ನಡುವೆ ಪೆನ್‌ಡ್ರೈವ್‌ ಪ್ರಕರಣದಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿಯೇ ಇಲ್ಲ. ಎಲ್ಲಕ್ಕೂ ಹೈಕಮಾಂಡ್‌ ನಿರ್ದೇಶನ ನೀಡುತ್ತಿದೆ. ಅದರಂತೆ ತಾವು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ಇನ್ನೊಂದು ವಾರದಲ್ಲಿ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಲಾಗುವುದು, ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಲು ತಯಾರಿ ನಡೆದಿದೆ ಎಂದು ದೇವರಾಜೇಗೌಡ ಮಾಧ್ಯಮವೊಂದರ ಮುಖ್ಯಸ್ಥರ ಜೊತೆ ಹೇಳಿರುವ ಆಡಿಯೋ ಕೂಡ ಬಹಿರಂಗಗೊಂಡಿದೆ.
ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಪ್ರತಿಕ್ರಿಯಿಸಲು ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್‌ ನಿರಾಕರಿಸಿದರು.

RELATED ARTICLES

Latest News