Monday, May 27, 2024
Homeರಾಜಕೀಯ2ನೇ ಹಂತದ 14 ಕ್ಷೇತ್ರಗಳ ಪೈಕಿ 12ರಲ್ಲಿ ಕಾಂಗ್ರೆಸ್‌ ಗೆಲುವು 'ಗ್ಯಾರಂಟಿ' : ಡಿಕೆಶಿ

2ನೇ ಹಂತದ 14 ಕ್ಷೇತ್ರಗಳ ಪೈಕಿ 12ರಲ್ಲಿ ಕಾಂಗ್ರೆಸ್‌ ಗೆಲುವು ‘ಗ್ಯಾರಂಟಿ’ : ಡಿಕೆಶಿ

ಬೆಂಗಳೂರು,ಮೇ.4- ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ 12 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಇಂದು ದಾವಣಗೆರೆ, ಗದಗ್‌ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಕೊನೆ ಹಂತದ ಪ್ರಚಾರ ನಡೆಯುತ್ತಿದೆ. ದಕ್ಷಿಣ ಕರ್ನಾಟಕ ಭಾಗಕ್ಕಿಂತಲೂ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಕ್ಕೆ 5 ಗೆಲ್ಲುವುದರ ಜೊತೆಗೆ 14 ಕ್ಷೇತ್ರಗಳಲ್ಲಿ 12 ಗೆಲ್ಲಲಿದೆ ಎಂದು ಹೇಳಿದರು.

ಜನರಿಗೆ ಕಾಂಗ್ರೆಸ್‌ನ ಗ್ಯಾರಂಟಿಗಳು ಮೆಚ್ಚುಗೆಯಾಗಿವೆ. ಬಿಜೆಪಿ ಮತ್ತು ಜೆಡಿಎಸ್‌ನ ಬಹಳಷ್ಟು ನಾಯಕರು ಗ್ರಾಮೀಣ ಮಟ್ಟದಿಂದಲೂ ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಿದ್ದಾರೆ. ಬೃಹತ್‌ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ನೆಹರೂ ಓಲೆಕಾರ್‌ ಸೇರಿದಂತೆ ಪ್ರಮುಖ ನಾಯಕರು ನಮ್ಮ ಪಕ್ಷ ಸೇರಿದ್ದಾರೆ. ಕಾಂಗ್ರೆಸ್‌ ಪರವಾದ ಉತ್ತಮ ವಾತಾವರಣವಿದೆ ಎಂದರು.

ಜೆಡಿಎಸ್‌ನ 12 ಶಾಸಕರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ ಎಂಬ ವದಂತಿಗಳು ಸತ್ಯಕ್ಕೆ ದೂರವಾಗಿವೆ. ಈ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮತ್ತು ಸಂಪರ್ಕ ಮಾಡಿಲ್ಲ. ಊಹಾಪೋಹದ ವದಂತಿಗಳನ್ನು ಹರಡಲಾಗುತ್ತಿದೆ. ಜೆಡಿಎಸ್‌ನಲ್ಲಿರುವವರು ಹತಾಶರಾಗಿರುವ ಬಗ್ಗೆ ನಮಗೆ ಮಾಹಿತಿ ಇದೆ. ಜನರು ಕೂಡ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ ಕುಟುಂಬದೊಳಗಿನ ಸಮಸ್ಯೆ ತೀವ್ರವಾಗಿದೆ. ವಿಧಾನಸಭಾ ಚುನಾವಣೆಯ ಕಾಲದಿಂದಲೂ ಜೆಡಿಎಸ್‌ ನಾಯಕರ ಹೇಳಿಕೆಗಳನ್ನು ಗಮನಿಸಬೇಕು. ಟಿಕೆಟ್‌ ಹಂಚಿಕೆ ಕುರಿತಂತೆ ನಡೆದ ಚರ್ಚೆಗಳು ವಾತಾವರಣವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುತ್ತವೆ ಎಂದರು.

ಸದ್ಯಕ್ಕೆ ಜೆಡಿಎಸ್‌ನವರು ಬಿಜೆಪಿಯ ಜೊತೆ ಹೊಂದಾಣಿಕೆಯಲ್ಲಿದ್ದಾರೆ. ಅವರು ಒಗ್ಗಟ್ಟಿನಿಂದ ಅಲ್ಲಿಂದ ಹೊರ ಬರುತ್ತಾರೋ? ಅಥವಾ ಬೇರೆ ರೀತಿಯ ತಂತ್ರಗಾರಿಕೆ ಅನುಸರಿಸುತ್ತಾರೋ ಗೊತ್ತಿಲ್ಲ. ಜೆಡಿಎಸ್‌ನ ಶಾಸಕ ಅಥವಾ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮಳೆ ಬಂದರೆ ಸಾವಿರ ಕೋಟಿ ರೂ. ಉಳಿತಾಯ :
ಪರಿಸ್ಥಿತಿ ಏನೇ ಆಗಲಿ, ರಾಜ್ಯದಲ್ಲಿ ಮಳೆ ಬರಲಿ, ಒಂದು ಸುತ್ತು ಮಳೆ ಬಂದರೆ ಸಾವಿರ ಕೋಟಿ ರೂ.ಗಳಷ್ಟು ಉಳಿತಾಯವಾಗುತ್ತದೆ. ಉಚಿತ ವಿದ್ಯುತ್‌ ಉಳಿತಾಯವಾಗುತ್ತದೆ. ಇಲ್ಲವಾದರೆ ಬೋರ್‌ವೆಲ್‌ಗಳಿಂದ ನೀರು ತೆಗೆಯುತ್ತಲೇ ಇರುತ್ತಾರೆ. ಚೆನ್ನಾಗಿ ಮಳೆಯಾಗಲಿ, ಭೂಮಿ ನೆನೆಯಲಿ, ಏನೂ ತೊಂದರೆಯಿಲ್ಲ ಎಂದರು.

ಒಕ್ಕಲಿಗ ನಾಯಕತ್ವ ಬೇಡ :
ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಹಾಸನದ ಪೆನ್‌ಡ್ರೈವ್‌ ಬಹಿರಂಗಗೊಳಿಸಲಾಯಿತು ಎಂದು ಬಿಜೆಪಿಯವರು ಅಪಪ್ರಚಾರವನ್ನು ಸೃಷ್ಟಿಸಿದ್ದಾರೆ. ನನಗೆ ಯಾವ ನಾಯಕತ್ವವೂ ಬೇಡ. ಕಳೆದ ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್‌ ಅಧ್ಯಕ್ಷನಾಗಿ ಹೈಕಮಾಂಡ್‌ ಮಾಡಿದೆೆ. ಅದರಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಮತ್ತು ಜೆಡಿಎಸ್‌ನವರು ಗಂಟೆಗೊಂದು, ಗಳಿಗೆಗೊಂದು ಮಾತು ಬದಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನಲ್ಲಿ ನಾನು ಒಕ್ಕಲಿಗ ನಾಯಕ ಎಂದು ಹೇಳಿಕೊಳ್ಳಲು ನನಗಿಷ್ಟವಿಲ್ಲ. ಸಮುದಾಯದಲ್ಲಿ ಹುಟ್ಟಿದ್ದೇನೆ, ಸಮಾಜಕ್ಕೆ ಗೌರವ ಕೊಡಬೇಕು, ರಕ್ಷಣೆ ಕೊಡಬೇಕು, ಸಹಾಯ ಮಾಡಬೇಕು, ಜನ ಅಪೇಕ್ಷಿಸುವಂತೆ ನನ್ನ ಕೈಲಾದ ಸೇವೆಯನ್ನು ಜನರ ಸ್ವಾಭಿಮಾನ, ಗೌರವ ಉಳಿವಿಗೆ ಮಾಡುತ್ತೇನೆ ಎಂದು ಹೇಳಿದರು.

ಎನ್‌ಡಿಎ ಕೂಟದಿಂದ ಜೆಡಿಎಸ್‌ ಪಕ್ಷವನ್ನು ಕಿತ್ತು ಹಾಕಬೇಕು ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹೇಳಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರು ಜೆಡಿಎಸ್‌ನಿಂದ ಬಿಜೆಪಿಗೆ ಹೋಗಿದ್ದಾರೆ. ಅವರ ಮೈತ್ರಿ ವಿಚಾರವಾಗಿ ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.

ಪೆನ್‌ಡ್ರೈವ್‌ ಮೂಲ ಗೊತ್ತಿದೆ :
ಹಾಸನದಲ್ಲಿ ವರದಿಯಾದ ಲೈಂಗಿಕ ದೌರ್ಜನ್ಯ ಪ್ರಕರಣದ ಮಾದರಿಯಲ್ಲೇ 30 ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲೂ ಘಟನೆ ನಡೆದಿತ್ತು. ಪ್ರಧಾನಿಯವರ ಮಗನಾಗಿದ್ದ ರೇವಣ್ಣ ಅವರನ್ನು ಹೋಟೆಲ್‌ನಿಂದ ಖಾಲಿ ಮಾಡಿಸಲಾಯಿತು ಎಂಬ ವರದಿ ಇದೆ. ಆದರೆ ಸದ್ಯಕ್ಕೆ ಅದರ ಬಗ್ಗೆ ಪೂರ್ಣ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಹೇಳಿದರು.

ಹಾಸನದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಲ ಯಾವುದು, ಪೆನ್‌ಡ್ರೈವ್‌ಗಳು ಎಲ್ಲಿಂದ ಬಂದವು ಎಂಬ ಮಾಹಿತಿಗಳನ್ನು ನಾವು ಬಿಚ್ಚಬೇಕೇ? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಹೇಳಿದವರು ನಾವಲ್ಲ, ಅವರ ಕುಟುಂಬವೇ ಬೇರೆ, ನನ್ನ ಕುಟುಂಬವೇ ಬೇರೆ, ಟಿಕೆಟ್‌ ನೀಡುವುದಿಲ್ಲ ಎಂದು ಗಲಾಟೆ ಮಾಡಿದ್ದರು, ತಪ್ಪಾಯಿತು ಎಂದು ಜನರಲ್ಲಿ ಕ್ಷಮೆ ಕೇಳಿದ್ದರು. ಇದೆಲ್ಲವೂ ಜೆಡಿಎಸ್‌ ನಾಯಕರ ಕುಟುಂಬದ ಒಳಬೇಗುದಿಗಳು ಎಂದು ತಿಳಿಸಿದರು.

ಭವಾನಿ ರೇವಣ್ಣ ಅವರ ವಿಚಾರಣೆ ಮತ್ತು ಎಚ್‌.ಡಿ.ರೇವಣ್ಣ ಅವರು ವಿಚಾರಣೆಗೆ ಗೈರುಹಾಜರಾಗಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿ.ಕೆ.ಶಿವಕುಮಾರ್‌, ತಾವೀಗ ಚುನಾವಣೆಯ ಗುಂಗಿನಲ್ಲಿದ್ದು, ಆನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

RELATED ARTICLES

Latest News