Sunday, May 19, 2024
Homeರಾಜ್ಯಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ : ವಿಜಯೇಂದ್ರ

ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ : ವಿಜಯೇಂದ್ರ

ಹುಬ್ಬಳ್ಳಿ,ಮೇ4- ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದಲ್ಲಿ ನಾವು ಯಾವುದೇ ಕಾರಣಕ್ಕೂ ಹಾಸನ ಸಂಸದ ಪ್ರಜ್ವಲ್‌ ರೇವಣ್ಣಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಕಾನೂನಿನ ಪ್ರಕಾರ ಏನು ಶಿಕ್ಷೆಯಾಗಬೇಕೋ ಅದೇ ರೀತಿ ಆಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಸೇರಿದಂತೆ ಪ್ರತಿಯೊಬ್ಬರ ನಿಲುವು ಒಂದೇ ಆಗಿದೆ. ಈ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು. ಬಿಜೆಪಿ ಎಂದಿಗೂ ಸಮರ್ಥನೆ ಮಾಡುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಸ್ವತಃ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಹೇಳಿರುವಾಗ ಇಲ್ಲಿ ಬಿಜೆಪಿ ನಿಲುವು ಅಪ್ರಸ್ತುತ ಎಂದು ಸ್ಪಷ್ಟಪಡಿಸಿದರು.

ನಾನಾಗಲಿ ಅಥವಾ ಪಕ್ಷವಾಗಲಿ ಪ್ರಕರಣವನ್ನು ಎಂಥ ಹಂತದಲ್ಲೂ ಸಮರ್ಥಿಸಿಕೊಂಡಿಲ್ಲ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬುದಕ್ಕಿಂತ ಕಾಂಗ್ರೆಸ್‌ನವರಿಗೆ ಲೋಕಸಭಾ ಚುನಾವಣೆಯಲ್ಲಿ ಲಾಭವಾದರೆ ಸಾಕು ಎಂಬ ಮನಃಸ್ಥಿತಿಗೆ ಬಂದಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದು ಹೇಳಿದರು.

ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಪರ ವಾತಾವರಣ ಇದೆ. ದೇಶದ ಒಬಿಸಿ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಲು ಸರಕಾರ ಮುಂದಾಗಿದೆ. ಹಿಂದೂ ವಿರೋಧಿ ಕಾಂಗ್ರೆಸ್‌ ಸರಕಾರಕ್ಕೆ ಮತದಾರರಿಂದ ತಕ್ಕ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು. ಎರಡ್ಮೂರು ಆತ್ಮಹತ್ಯೆಗಳು ನಡೆದಿವೆ. ಹತ್ಯೆ ಪ್ರಕರಣಗಳು ದಿನೇದಿನೇ ಜಾಸ್ತಿ ಆಗುತ್ತಿವೆ.

ರಾಜ್ಯದಲ್ಲಿ ಲವ್‌ ಜಿಹಾದ್‌ ಪ್ರಕರಣಗಳು ಜಾಸ್ತಿ ಆಗುತ್ತಿವೆ. ರಾಜ್ಯದ ತಾಯಂದಿರು ಆತಂಕದಲ್ಲಿದ್ದಾರೆ. ಈ ಪ್ರದೇಶದ ಒಬ್ಬ ದಲಿತ ಹೆಣ್ಮಗಳ ಮೇಲೆ ಸದ್ದಾಂ ಹುಸೇನ್‌ ಎಂಬಾತ ನೀಚ ಕೃತ್ಯ ಎಸಗಿದ್ದಾನೆ. ರಾಜ್ಯ ಸರಕಾರ ಕಣ್ಮುಚ್ಚಿ ಕೂತಿದೆ ಎಂದು ಟೀಕಿಸಿದರು.

ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದಾಗಲೇ ಸರಕಾರವು ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಬೇಕಿತ್ತು. ರಾಜ್ಯ ಸರಕಾರವು ಮೀನಮೇಷ ಮಾಡಿತ್ತು. ರಾಜ್ಯ ಸರಕಾರವು ಅಲ್ಪಸಂಖ್ಯಾತ ಕೊಲೆಗಡುಕರನ್ನು ಬಂಧಿಸಲು ನೂರು ಬಾರಿ ಯೋಚಿಸುತ್ತದೆ. ಲವ್‌ ಜಿಹಾದ್‌ ಪ್ರಕರಣದಡಿ ಸಿಲುಕಿದವರನ್ನು ಬಂಧಿಸಲು ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎಂಬ ಧೋರಣೆ ಹೊಂದಿದಂತಿದೆ ಎಂದರು.

ಸಿದ್ದರಾಮಯ್ಯನವರ ಸರಕಾರವು ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಹೊಂದಿದ್ದು, ರಾಜ್ಯವು ಕೇರಳ ಮಾದರಿಯಲ್ಲಿ ಸಾಗುವಂತಾಗಿದೆ. ಲವ್‌ ಜಿಹಾದ್‌ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಮಹಿಳೆಯರ ವಿರುದ್ಧ ಅಪರಾಧದ ಇಂಥ ದುಷ್ಕೃತ್ಯ ಎಸಗುವ ದೇಶದ್ರೋಹಿಗಳಿಗೆ ನಾವೇನು ಮಾಡಿದರೂ ರಾಜ್ಯ ಸರಕಾರ ಬೆಂಬಲ ಕೊಡುತ್ತದೆ. ನಮ್ಮನ್ಯಾರೂ ಕೂಡ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸುವಂತಾಗಿದೆ ಎಂದು ಆರೋಪಿಸಿದರು.

ಈಗ ಬರುತ್ತಿರುವ ಮಾಹಿತಿ ಪ್ರಕಾರ ಈ ಪೆನ್‌ ಡ್ರೈವ್‌ ಮುಂಚಿತವಾಗಿಯೇ ಕಾಂಗ್ರೆಸ್‌ ಸರಕಾರಕ್ಕೆ ಸಿಕ್ಕಿತ್ತು. ಮೊದಲ ಹಂತದ ಚುನಾವಣೆ ಮುಗಿಯುವವರೆಗೆ ಕಾದಿದ್ದು, ಕೊನೆಯ ಒಂದು ದಿನ ಇರುವಾಗ ಬಿಡುಗಡೆ ಮಾಡಿಸಿದ್ದಾರೆಂಬ ಚರ್ಚೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸರಕಾರ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಇಂಥ ಪ್ರಕರಣದಿಂದ ಚುನಾವಣೆ ಮೇಲೆ ಪರಿಣಾಮ ಆಗುವುದಿಲ್ಲ ಎಂದ ಅವರು, ಈ ಕುರಿತಂತೆ ನನಗೆ ಈ ಕ್ಷಣದವರೆಗೆ ಯಾವುದೇ ಪತ್ರ ಸಿಕ್ಕಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಸುದ್ದಿಗೋಷ್ಟಿಯಲ್ಲಿ ಶಾಸಕ ಅರವಿಂದ ಬೆಲ್ಲದ, ಹುಬ್ಬಳ್ಳಿ-ಧಾರವಾಡ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

Latest News