ನವದೆಹಲಿ,ಫೆ.7- ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತದೇ ಇರುವ ಬಿಜೆಪಿ ನಾಯಕರು ಹಾಗೂ ಸಂಸದರು ಗಾಂಧಿ ಪ್ರತಿಮೆಯೆದುರು ಧರಣಿ ಮಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಜಂತರ್ ಮಂತರ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ಪ್ರತಿಭಟನೆಯನ್ನು ಟೀಕಿಸುವವರು ರಾಜ್ಯಕ್ಕೆ ನೀಡಿದ ಕೊಡುಗೆಯೇನು ಎಂದು ಹೇಳಬೇಕಿದೆ. ನಾವು ಭಾವನಾತ್ಮಕ ವಿಚಾರದ ಮೇಲೆ ರಾಜಕಾರಣ ಮಾಡುತ್ತಿಲ್ಲ. ಜನರ ಬದುಕಿಗಾಗಿ ರಾಜಕಾರಣ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಬಿಜೆಪಿಯ ಯಾವ ನಾಯಕರು ಕೇಂದ್ರದ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ 25 ಸಂಸದರನ್ನು ಬಿಜೆಪಿಗೆ ಗೆಲ್ಲಿಸಿಕೊಟ್ಟಿದ್ದರು. ಆದರೆ ಅವರ್ಯಾರು ರಾಜ್ಯದ ಧ್ವನಿಯಾಗಲಿಲ್ಲ. ಇಂದು ಕಾಂಗ್ರೆಸ್ ರಾಜ್ಯದ ಧ್ವನಿಯನ್ನು ದೆಹಲಿಯಲ್ಲಿ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್‍ನ ಪ್ರತಿಭಟನೆಯನ್ನು ಟೀಕಿಸುವವರು ಮೊದಲು ಪ್ರಧಾನಿ ನರೇಂದ್ರ ಮೋದಿ ಎದುರು ನಿಂತು ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಉಸಿರು ಬಿಡಲಿ ಎಂದು ಸವಾಲು ಹಾಕಿದರು. ಹಣಕಾಸು ಆಯೋಗವೇ ಅನುದಾನ ಹಂಚಿಕೆ ಮಾಡುತ್ತದೆ ಎಂದು ಸಮರ್ಥನೆ ಮಾಡಿಕೊಳ್ಳುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ರವರು ಕರ್ನಾಟಕವನ್ನು ಪ್ರತಿನಿಸುತ್ತೇವೆ ಎಂಬುದನ್ನು ಮರೆತಿದ್ದಾರೆ. ಎಲ್ಲವೂ ಆಯೋಗವೇ ಮಾಡುವುದಾದರೆ ಕೇಂದ್ರ ಸರ್ಕಾರದ ಅಸ್ತಿತ್ವವಾದರೂ ಏಕೆ? ಅನ್ಯಾಯವಾದಾಗ ಅದನ್ನು ಸರಿಪಡಿಸುವುದು ಕೇಂದ್ರದ ಜವಾಬ್ದಾರಿ ಅಲ್ಲವೇ ಎಂದು ತಿರುಗೇಟು ನೀಡಿದರು.
ತೆರೆದ ಬಾವಿಗೆ ಬಿದ್ದ 2 ವರ್ಷದ ಮಗು ಪ್ರಾಣಾಪಾಯದಿಂದ ಬಚಾವ್
ಬರ ನಿರ್ವಹಣೆಗೆ ಒಂದು ರೂಪಾಯಿ ಹಣ ನೀಡಿಲ್ಲ. ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ್ದಾರೆ. ರಾಜ್ಯದ ಸಚಿವರು ಕೇಂದ್ರದ ಸಚಿವರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದಾರೆ. ಈವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂಬುದು ಸತ್ಯವಲ್ಲವೇ ಎಂದರು.
ಹಿಂದೆ ನಿರ್ಮಲಾ ಸೀತಾರಾಮನ್‍ರವರೇ ಮಂಡಿಸಿದ ಬಜೆಟ್‍ನಲ್ಲಿ ಭದ್ರಾ ಮೇಲಂ್ದಡೆ ಯೋಜನೆಗೆ 5,300 ಕೋಟಿ ರೂ. ಘೋಷಿಸಿರಲಿಲ್ಲವೇ? ಅದರಲ್ಲಿ ಏಕೆ ಹಣ ಬಿಡುಗಡೆ ಮಾಡಲಿಲ್ಲ. ರೈಲ್ವೆ ಯೋಜನೆ, ಪೆರಿಫರಲ್ ಯೋಜನೆಗೆ ಘೋಷಿಸಿದ್ದ ಹಣವನ್ನು ಏಕೆ ತಡೆಹಿಡಿಯಲಾಯಿತು ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲವಾಗಿದೆ. ಅದಕ್ಕಾಗಿ ದೆಹಲಿಗೆ ಬಂದು ಪ್ರತಿಭಟನೆ ಮಾಡಬೇಕಿದೆ. ಬೆಂಗಳೂರಿನಲ್ಲಿ ಪ್ರತಿಭಟಿಸಿದರೆ ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂದು ಆಕ್ಷೇಪಿಸಿದರು.ಇದು ರಾಜಕೀಯ ಸ್ಟಂಟ್ ಅಲ್ಲ. ಆ ರೀತಿ ಸ್ಟಂಟ್ ಮಾಡಲು ನಮ್ಮಲ್ಲಿ ಯಾರೂ ಸಿನಿಮಾ ನಿರ್ದೇಶಕರಿಲ್ಲ. ಅವರೆಲ್ಲಾ ಅವರ ಪಕ್ಷದಲ್ಲೇ ಇದ್ದಾರೆ ಎಂದು ಹೇಳಿದರು.