Sunday, September 15, 2024
Homeರಾಜ್ಯತುಂಗಭದ್ರಾ ಅಣೆಕಟ್ಟಿನ ಗೇಟಿನ ದುರಸ್ತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ : ಡಿಸಿಎಂ ಡಿಕೆಶಿ

ತುಂಗಭದ್ರಾ ಅಣೆಕಟ್ಟಿನ ಗೇಟಿನ ದುರಸ್ತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ : ಡಿಸಿಎಂ ಡಿಕೆಶಿ

ಬೆಂಗಳೂರು,ಆ.11– ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಹೇಗಾದರೂ ಮಾಡಿ ಉಳಿಸಿಕೊಂಡು ತುಂಗಭದ್ರಾ ಅಣೆಕಟ್ಟಿನ ಗೇಟನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಥಳಕ್ಕೆ ತೆರಳುವ ಮುನ್ನ ಇಂದು ಬೆಳಿಗ್ಗೆ ಬೆಂಗಳೂರಿನ ತಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯಕ್ಕೆ ನಮಗೆ ಡ್ಯಾಂನ ಸುರಕ್ಷತೆ ಮುಖ್ಯ. ನೀರನ್ನು ಉಳಿಸಿಕೊಂಡೇ ದುರಸ್ಥಿಗೆ ಪ್ರಯತ್ನ ನಡೆಸುತ್ತೇವೆ. ನಮ ಹಾಗೂ ರೈತರ ಅಭಿಪ್ರಾಯಗಳು ಏನೇ ಇದ್ದರೂ ತಜ್ಞರ ಅಭಿಪ್ರಾಯಗಳು ಮುಖ್ಯವಾಗುತ್ತವೆ. ಅದನ್ನು ಪಡೆದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಡ್ಯಾಂನಲ್ಲಿ ಕ್ರಸ್ಟ್‌ಗೇಟ್‌ಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಅಳವಡಿಸಬೇಕಿದೆ ಎಂದರು.

ನೀರನ್ನು ಹೊರಗೆ ಬಿಡದ ಹೊರತು ಗೇಟ್‌ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದ ಕಾರಣ ತಂತ್ರಜ್ಞರ ವರದಿಯ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಅಣೆಕಟ್ಟಿನ 1 ರಿಂದ 16 ನೇ ಗೇಟುಗಳನ್ನು ಸಿಡಬ್ಲ್ಯೂಸಿ ನಿರ್ವಹಣೆ ಮಾಡುತ್ತದೆ. 17 ರಿಂದ 32 ರವರೆಗಿನ ಜವಾಬ್ದಾರಿ ಕರ್ನಾಟಕ ಸರ್ಕಾರದ್ದಾಗಿದೆ. ಕೇಂದ್ರ ಜಲ ಆಯೋಗದವರು ಸಹ ಒಂದಷ್ಟು ತಂತ್ರಜ್ಞರನ್ನು ಕಳುಹಿಸಿದ್ದಾರೆ. ನಾವು ಸಹ ನುರಿತ ತಂತ್ರಜ್ಞರನ್ನು ಕಳುಹಿಸಿದ್ದೇವೆ. ನಾನು ಸಹ ಶನಿವಾರ ರಾತ್ರಿಯಿಂದಲೇ ಅಧಿಕಾರಿಗಳ ಜೊತೆ ದೂರವಾಣಿ ಸಂಪರ್ಕದಲ್ಲಿದ್ದು ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ ಎಂದು ಹೇಳಿದರು.

ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್‌ ಚೈನ್‌ ಲಿಂಕ್‌ ಮುರಿದ ಕಾರಣ ಈ ತೊಂದರೆ ಉಂಟಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದ್ದು, ಅಣೆಕಟ್ಟಿನ ಭದ್ರತೆಯ ದೃಷ್ಟಿಯಿಂದ ಎಲ್ಲಾ ಗೇಟ್‌ ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ಅಣೆಕಟ್ಟಿನ ಕೆಳಭಾಗದ ಹಾಗೂ ನದಿ ಪಾತ್ರದ ಎಲ್ಲಾ ಜನರಿಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆಯೇ ಎಂದು ಪ್ರಶ್ನಿಸಿದಾಗ ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು. ಇದರಲ್ಲಿ ನಾನು ಯಾರ ಮಾತನ್ನು ಕೇಳುವುದಿಲ್ಲ. ಸ್ಥಳೀಯರು ಹಾಗೂ ರೈತರು ಒಂದಷ್ಟು ಅಭಿಪ್ರಾಯಗಳನ್ನು ಸೂಚಿಸುತ್ತಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸಲಾಗುವುದು. ಆದರೆ ಅಂತಿಮವಾಗಿ ತಂತ್ರಜ್ಞರ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ನಮಗೆ ನಮ ರೈತರ ಹಿತ ಮುಖ್ಯ ಎಂದು ಹೇಳಿದರು.

RELATED ARTICLES

Latest News