Wednesday, September 11, 2024
Homeರಾಜ್ಯಸರ್ಕಾರದ ಬೇಜವಾಬ್ದಾರಿಯಿಂದ ತುಂಗಾಭದ್ರಾ ಅಣೆಕಟ್ಟು ಅಪಾಯಕ್ಕೆ ಸಿಲುಕಿದೆ : ವಿಪಕ್ಷಗಳ ಟೀಕೆ

ಸರ್ಕಾರದ ಬೇಜವಾಬ್ದಾರಿಯಿಂದ ತುಂಗಾಭದ್ರಾ ಅಣೆಕಟ್ಟು ಅಪಾಯಕ್ಕೆ ಸಿಲುಕಿದೆ : ವಿಪಕ್ಷಗಳ ಟೀಕೆ

ಬೆಂಗಳೂರು,ಆ.11- ತುಂಗಾಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್‌ನ ಸರಪಳಿ ತುಂಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ-ಪ್ರತ್ಯಾರೋಪಗಳು ಮೇರೆ ಮೀರಿದ್ದು, ಸರ್ಕಾರ ಸದ್ಯಕ್ಕೆ ಡ್ಯಾಂನ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಹೇಳುತ್ತಿದೆ. ವಿರೋಧಪಕ್ಷಗಳು ಸರ್ಕಾರದ ಬೇಜವಾಬ್ದಾರಿಯಿಂದ ಅಣೆಕಟ್ಟು ಅಪಾಯಕ್ಕೆ ಸಿಲುಕಿದೆ ಎಂದು ಟೀಕಿಸುತ್ತಿವೆ.

ಗೃಹಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ತಜ್ಞರ ಸಲಹೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಡ್ಯಾಂನ ನೀರನ್ನು ಖಾಲಿ ಮಾಡಲು ಹೊರಹರಿವು ಹೆಚ್ಚಿಸುವುದರಿಂದ ಸಂಭವಿಸಬಹುದಾದ ಅಪಾಯವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರಿನ ಹರಿಯುವ ಭಾಗದಲ್ಲಿನ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.

ಸದ್ಯಕ್ಕೆ ಅನಗತ್ಯವಾದ ಆತಂಕ ಬೇಡ. ಅಣೆಕಟ್ಟು ಸುರಕ್ಷಿತ ಎಂಬ ಅಭಿಪ್ರಾಯವಿದೆ. ತಾಂತ್ರಿಕ ತಂಡ ಸ್ಥಳ ಪರಿಶೀಲನೆ ಬಳಿಕ ವಾಸ್ತವಾಂಶ ತಿಳಿದುಬರಲಿದೆ ಎಂದರು.ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್‌ ತಂಗಡಗಿ ಮಾತನಾಡಿ, ಅಣೆಕಟ್ಟೆ ಮೂಲನಕ್ಷೆ ಇಂದು ಬೆಳಿಗ್ಗೆ ನಮಗೆ ತಲುಪಿದೆ. ಅಧಿಕಾರಿಗಳು ಹಾಗೂ ತಜ್ಞರ ತಂಡ ಸಭೆಗಳನ್ನು ನಡೆಸಿ ಸಮಾಲೋಚನೆ ಕೈಗೊಳ್ಳುತ್ತಿದೆ. 2-3 ದಿನದ ಒಳಗೆ ನೀರು ತಗ್ಗಿದ ನಂತರ ಕ್ರಸ್ಟ್‌ಗೇಟ್‌ ಅಳವಡಿಸುವ ದುರಸ್ಥಿ ಕಾರ್ಯ ಅಳವಡಿಸಲಾಗುವುದು. ರೈತರ ಹಿತ ಕಾಪಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮಾಯಿ, ಕ್ರಸ್ಟ್‌ಗೇಟ್‌ ತುಂಡಾಗಲು ರಾಜ್ಯಸರ್ಕಾರದ ಬೇಜವಾಬ್ದಾರಿಯೂ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.ಡ್ಯಾಂನ ನಿಗಾವಣೆಗೆ ಇಂಜಿನಿಯರ್‌ಗಳೂ ಸೇರಿದಂತೆ ಅಧಿಕಾರಿಗಳ ತಂಡ ಇರುತ್ತದೆ. ಕಾಲಕಾಲಕ್ಕೆ ಅವರು ಪರಿಶೀಲನೆ ನಡೆಸಬೇಕು. ಜೊತೆಗೆ ಅಣೆಕಟ್ಟು ಉಸ್ತುವಾರಿ ಸಮಿತಿಯಲ್ಲಿ ಕೇಂದ್ರಸರ್ಕಾರದ ಅಧಿಕಾರಿಗಳಿರುತ್ತಾರೆ. ಅವರು ಪದೇಪದೇ ಸುರಕ್ಷತಾ ವಿಚಾರವಾಗಿ ಸಲಹೆಗಳನ್ನು ನೀಡಿರುತ್ತಾರೆ. ರಾಜ್ಯಸರ್ಕಾರ ಅದನ್ನು ಅತ್ಯಾದ್ಯತೆಯ ಮೇರೆಗೆ ಪಾಲನೆ ಮಾಡಬೇಕಿತ್ತು ಎಂದ್ದಿದ್ದಾರೆ.

ತುಂಗಭದ್ರ ಅಣೆಕಟ್ಟಿಗೆ ಪರ್ಯಾಯವಾಗಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ತಾವು ಅಧಿಕಾರದಲ್ಲಿದ್ದಾಗ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಗೊಳಿಸಲು ಸೂಚಿಸಲಾಗಿದ್ದು, ಆ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ತುಂಗಭದ್ರ ಡ್ಯಾಂನಲ್ಲಿ ದೊಡ್ಡ ಅನ್ಯಾಯವಾಗಿದೆ. ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಸಂಭವನೀಯ ಅನ್ಯಾಯವನ್ನು ತಪ್ಪಿಸಬಹುದಿತ್ತು. ರೈತರ ನೋವು-ನಲಿವುಗಳು ಅರ್ಥವಾಗದೇ ಇದ್ದವರು ಮಾತ್ರ ಈ ರೀತಿಯ ಬೇಜವಾಬ್ದಾರಿಯಿಂದ ನಡೆದುಕೊಳ್ಳಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡ್ಯಾಂನ ಸುರಕ್ಷತಾ ಸಮಿತಿ ಅಧಿಕಾರಿ ಓಆರ್‌ಕೆ ರೆಡ್ಡಿ ಮಾತನಾಡಿ, 28 ಗೇಟ್‌ಗಳನ್ನು ತೆರದು ನೀರನ್ನು ಹೊರಗೆ ಹರಿಸಲಾಗುತ್ತಿದೆ. ಮುಖ್ಯಮಂತ್ರಿಯವರಿಗೆ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ವರದಿ ನೀಡಲಾಗಿದೆ. ಡ್ಯಾಂನ ಸುರಕ್ಷತೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ. ವೆಲ್ಡಿಂಗ್‌ ಕಟ್‌ ಆಗಿದ್ದರಿಂದಾಗಿ 19ನೇ ಕ್ರಸ್ಟ್‌ಗೇಟ್‌ ತುಂಡಾಗಿದೆ. ಅದನ್ನು ಶೀಘ್ರವಾಗಿಯೇ ದುರಸ್ಥಿ ಮಾಡಲಾಗುವುದು ಎಂದು ಹೇಳಿದ್ದಾರೆ.

RELATED ARTICLES

Latest News