ಯಲಹಂಕ, ಮೇ.4- ವೇದಿಕೆ ಮೇಲೆ ಅಭಿನಯಿಸುವಾಗಲೇ ಕಲಾವಿದರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಯಲಹಂಕ ತಾಲ್ಲೂಕಿನ ಸಾತನೂರು ಬಳಿ ನಡೆದಿದೆ.
ದೇವನಹಳ್ಳಿ ತಾಲ್ಲೂಕು ಹರದೇಶಹಳ್ಳಿಯ ನಿವಾಸಿಯಾದ ಮುನಿಕೆಂಪಣ್ಣ ಮೃತಪಟ್ಟ ಕಲಾವಿದ. ನಿನ್ನೆ ರಾತ್ರಿ ಯಲಹಂಕ ತಾಲ್ಲೂಕಿನ ಸಾತನೂರು ಬಳಿ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಶಕುನಿಯ ಪಾತ್ರ ನಿರ್ವಹಿಸುತ್ತಿದ್ದ ಮುನಿ ಕೆಂಪಣ್ಣ ರಾತ್ರಿ 1.30ರ ಸಂದರ್ಭದಲ್ಲಿ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಾವಿಗೂ ಮುನ್ನ ವೇದಿಕೆಯಲ್ಲಿ ಅದ್ಭುತವಾಗಿ ಅಭಿನಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮುನಿಕೆಂಪಣ್ಣ ಅವರು ನಿವೃತ್ತ ಉಪನ್ಯಾಸಕರು. ಸಾಹಿತಿ, ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ದೇವನಹಳ್ಳಿಯಲ್ಲಿ ನಡೆದ 28ನೇ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿದ್ದರು. ಇಂದು ಮಧ್ಯಾಹ್ನ ಮೂರು ಗಂಟೆಗೆ ಅವರ ಹುಟ್ಟೂರಾದ ಅರದೇಶಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದೇ ರೀತಿ ಕಳೆದ ಬುಧವಾರ ರಾತ್ರಿ ಕೋಟಾ ಗಾಂಧಿ ಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತೆ ಯಕ್ಷಗಾನ ವೇಳೆ ಯಕ್ಷಗಾನ ಮೇಳದ ಕಲಾವಿದ ಸವ್ಯಸಾಚಿ ಗಂಗಾಧರ್ ಪುತ್ತೂರು ಅವರು ವೇಶ ಕಳಚುತ್ತಿರುವಾಗಲೇ ಮೃತಪಟ್ಟಿದ್ದರು.