Monday, February 26, 2024
Homeರಾಜ್ಯನಮ್ಮ ಮನವಿಗೆ ಸ್ಪಂದಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ : ಸಿಎಂ

ನಮ್ಮ ಮನವಿಗೆ ಸ್ಪಂದಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ : ಸಿಎಂ

ನವದೆಹಲಿ, ಡಿ.19- ಬರ ಹಾಗೂ ನೀರಾವರಿಯ ವಿಚಾರವಾಗಿ ರಾಜ್ಯಸರ್ಕಾರದ ಮನವಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಾಧಾನದಿಂದ ಕೇಳಿದ್ದು, ಸಂಬಂಧಪಟ್ಟ ಇಲಾಖೆಗಳಿಗೆ ಅಗತ್ಯ ಸೂಚನೆ ನೀಡುವ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಂಸತ್‍ನಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬರ ನಿರ್ವಹಣೆಯ ಅನುದಾನ ಹಾಗೂ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ 5 ಪ್ರಮುಖ ವಿಚಾರಗಳನ್ನು ಪ್ರಧಾನಿಯವರೊಂದಿಗೆ ಚರ್ಚಿಸಿದ್ದಾಗಿ ಹೇಳಿದರು.

ಬರ ನಿರ್ವಹಣೆಗೆ ಎನ್‍ಡಿಆರ್‍ಎಫ್ ನಡಿ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರ ಈಗಾಗಲೇ ಮೂರು ಬಾರಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಒಟ್ಟು 18,177.44 ಕೋಟಿ ರೂ.ಗಳನ್ನು ನೀಡುವಂತೆ ಮನವಿ ಮಾಡಿದೆ. ಕೇಂದ್ರದಿಂದ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದು ಅಧ್ಯಯನ ನಡೆಸಿದ ವರದಿಯನ್ನು ಕೃಷಿ ಇಲಾಖೆಗೆ ನೀಡಿದೆ. ಅದರ ಆಧಾರದ ಮೇಲೆ ಉಪ ಸಮಿತಿ ರಚನೆಯಾಗಿತ್ತು. ಅಲ್ಲಿಂದ ಕಾರ್ಯಕಾರಿ ಸಮಿತಿಯ ಮುಂದೆಯೂ ಚರ್ಚೆಯಾಗಿದೆ.

ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ನೇತೃತ್ವದಲ್ಲಿರುವ ಉನ್ನಾತಾಧಿಕಾರಿ ಸಮಿತಿ ಸಭೆ ನಡೆಸಿ ಪರಿಹಾರ ಪಾವತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆದರೆ ಸಮಿತಿಯ ಸಭೆಯನ್ನೇ ನಡೆಸಿಲ್ಲ. ಈ ಬಗ್ಗೆ ಪ್ರಧಾನಮಂತ್ರಿಯವರ ಗಮನಕ್ಕೆ ತರಲಾಯಿತು. ಅಮಿತ್ ಷಾ ಅವರಿಗೆ ಈ ಬಗ್ಗೆ ಸೂಚನೆ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಮುಸ್ಲಿಮರು 5 ಅರ್ಜಿಗಳು ವಜಾ

ಬರಗಾಲದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಲು ಕಾಯ್ದೆಯಲ್ಲಿಯೇ ಅವಕಾಶವಿದೆ. ಅದಕ್ಕೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಬೇಕು. ಈ ಬಗ್ಗೆಯೂ ಪ್ರಧಾನಿಯವರ ಗಮನ ಸೆಳೆಯಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ಅನುಮತಿ ಕೊಡಿಸುವಂತೆ ಮನವಿ ಮಾಡಲಾಗಿದೆ ಎಂದರು.

ಮಹದಾಯಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಾಧಿಕರಣದ ತೀರ್ಪು ಪ್ರಕಟಗೊಂಡಿದ್ದು, ಅಧಿಸೂಚನೆ ಜಾರಿಯಾಗಿದೆ. ಪರಿಸರ ನಿರಪೇಕ್ಷಣ ಪತ್ರ ಬಾಕಿ ಇದ್ದು, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಪ್ರಮಾಣಪತ್ರ ಕೊಡಿಸುವಂತೆ ಮನವಿ ಮಾಡಿದ್ದೇವೆ. ಈಗಾಗಲೇ ಟೆಂಡರ್ ಕರೆದಿದ್ದು, ಅಂದಾಜು ವೆಚ್ಚವೂ ಸಿದ್ಧಗೊಂಡಿದೆ. ಕೇಂದ್ರದಿಂದ ನಿರಪೇಕ್ಷಣಾ ಪತ್ರ ದೊರೆತರೆ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿಯವರಿಗೆ ಒತ್ತಾಯಪೂರ್ವಕವಾಗಿ ಗಮನ ಸೆಳೆದಿದ್ದೇವೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಬಜೆಟ್‍ನಲ್ಲಿ 5,300 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿತ್ತು. ಹಿಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಮಂಡಿಸಿದ ಬಜೆಟ್‍ನಲ್ಲೂ ಇದನ್ನು ಉಲ್ಲೇಖಿಸಿದ್ದರು. ಬಹುತೇಕ ಡಿಸೆಂಬರ್ ತಿಂಗಳು ಮುಗಿಯುತ್ತಾ ಬಂದಿದ್ದರೂ ಈವರೆಗೂ ಒಂದು ರೂಪಾಯಿ ನೀಡಿಲ್ಲ. ಅದನ್ನು ಪ್ರಧಾನಿಯ ಗಮನಕ್ಕೆ ತಂದಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಈ ಹಣ ಕೇಂದ್ರಸರ್ಕಾರವೇ ಒಪ್ಪಿಕೊಂಡಿರುವ ಬದ್ಧತೆಯಾಗಿದೆ ಎಂದು ಉಲ್ಲೇಖಿಸುವುದಾಗಿ ಹೇಳಿದರು.

ಮೇಕೆದಾಟು ಯೋಜನೆ ಕುರಿತಂತೆಯೂ ಪ್ರಧಾನಿಯವರ ಬಳಿ ಚರ್ಚೆ ನಡೆಸಿದ್ದೇನೆ. 66 ಟಿಎಂಸಿ ನೀರು ಸಂಗ್ರಹಿಸುವ ಮೇಕೆದಾಟು ಸಮತೋಲಿತ ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಹೆಚ್ಚಿನ ಲಾಭವಾಗಲಿದೆ. ರಾಜಕೀಯ ಕಾರಣಕ್ಕಾಗಿ ಮಾತ್ರ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದಕ್ಕೆ ಅಗತ್ಯವಾದ ಎಲ್ಲಾ ಪೂರ್ವಾನುಮತಿಗಳನ್ನು ನೀಡುವಂತೆ ಮನವಿ ಮಾಡಿದ್ದೇವೆ ಎಂದರು.

ಮೋದಿ ನಾಯಕತ್ವಕ್ಕೆ ಜಾಗತೀಕ ಮನ್ನಣೆ : ಭೂಪೇಂದರ್

ನೀರಾವರಿ ಯೋಜನೆ ಹಾಗೂ ರಾಜ್ಯಕ್ಕೆ ಅಗತ್ಯ ನೆರವು ಪಡೆದುಕೊಳ್ಳುವ ಸಲುವಾಗಿ ಪ್ರಧಾನಿಯವರ ಭೇಟಿಗೆ ಸಮಯಾವಕಾಶ ಸಿಕ್ಕರೆ ಸರ್ವಪಕ್ಷ ನಿಯೋಗವನ್ನು ಕರೆತಂದು ಮತ್ತೊಮ್ಮೆ ಪ್ರಧಾನಿಯವರನ್ನು ಭೇಟಿ ಮಾಡಲು ಸಿದ್ಧವಿರುವುದಾಗಿ ಹೇಳಿದರು.

ಇಂದಿನ ಭೇಟಿಯಲ್ಲಿ ಬರ ಹಾಗೂ ನೀರಾವರಿ ಯೋಜನೆಗಳ ಕುರಿತಂತೆ ಹೆಚ್ಚು ಗಮನ ಕೇಂದ್ರೀಕರಿಸಲಾಯಿತು. ಜಿಎಸ್‍ಟಿ ಹಾಗೂ ತೆರಿಗೆ ಪಾಲು, ಅನ್ನಭಾಗ್ಯ ಯೋಜನೆ ಅಕ್ಕಿ ಸೇರಿದಂತೆ ಇತರ ಯೋಜನೆಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಹೆಚ್ಚಿನ ವಿಚಾರಗಳು ಪ್ರಸ್ತಾಪವಾದರೆ ವಿಷಯಾಂತರವಾಗಬಹುದು ಎಂಬ ಎಚ್ಚರಿಕೆ ವಹಿಸಲಾಯಿತು ಎಂದು ಹೇಳಿದರು.

RELATED ARTICLES

Latest News