Monday, November 25, 2024
Homeರಾಜ್ಯಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದವರ ಆಸ್ತಿ ಮುಟ್ಟುಗೋಲು : ಪರಮೇಶ್ವರ್

ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದವರ ಆಸ್ತಿ ಮುಟ್ಟುಗೋಲು : ಪರಮೇಶ್ವರ್

ಬೆಂಗಳೂರು,ಫೆ.9- ಮಾದಕ ವಸ್ತುಗಳ ವಿರುದ್ಧ ನಮ್ಮ ಸರ್ಕಾರ ಸಮರೋಪಾದಿಯ ಕಾರ್ಯಾಚರಣೆ ನಡೆಸುತ್ತಿದ್ದು, ಇಡೀ ರಾಜ್ಯವನ್ನೇ ನಶೆಮುಕ್ತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಬೆಂಗಳೂರು ಗ್ರಾ. ಜಿಲ್ಲೆಯ ದಾಬಸ್‍ಪೇಟೆಯ ಕರ್ನಾಟಕ ವೇಸ್ಟೇಜ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಪ್ರದೇಶದಲ್ಲಿ ನಡೆದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾದಕವಸ್ತುವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಯಾವುದೇ ಮುಲಾಜಿಲ್ಲದೇ ಧೈರ್ಯವಾಗಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಕ್ರಮಗಳಾಗಿದ್ದು, ಮೈಸೂರು, ಮಂಡ್ಯ, ಗದಗ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ ಎಂದರು.

BREAKING : ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ

ಅದೇ ರೀತಿ ರಾಜ್ಯವನ್ನು ಮಾದಕದ್ರವ್ಯ ಮುಕ್ತಗೊಳಿಸಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆಸ್ತಿ ಮುಟ್ಟುಗೋಲು ಸೇರಿದಂತೆ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು. ಮೂರನೇ ಬಾರಿ ಗೃಹಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿಬಾರಿ ಜವಾಬ್ದಾರಿ ಹೊತ್ತಾಗ ವಿಧಾನಸಭೆ ಮತ್ತು ಪರಿಷತ್‍ನಲ್ಲಿ ನಮ್ಮ ಇಲಾಖೆಯ ಬಗ್ಗೆ ಹೆಚ್ವು ಪ್ರಶ್ನೆ ಬಂದಿದ್ದರೆ ಅದು ಡ್ರಗ್ಸ್ ಬಗ್ಗೆ. ಜನ ಸಮುದಾಯದಲ್ಲಿ ಆತಂಕ ಏಕೆ. ಮಾದಕ ವಸ್ತುಗಳು ಇಡೀ ಸಮಾಜವನ್ನು ನಾಶ ಮಾಡುವ ಕೆಲಸ ಮಾಡುತ್ತಿವೆ. ವಿಶೇಷವಾಗಿ ಯುವಕರ ಜೀವನ ಹಾಳು ಮಾಡುತ್ತಿವೆ. ಒಳ್ಳೆ ಸಮಾಜ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಹಳ ದೊಡ್ಡ ಸವಾಲಾಗಿ ನಿಂತಿದೆ. ವಿಶ್ವದಲ್ಲಿ ಸವಾಲಾಗಿದೆ ಎಂದರು.

ಕೆಲ ಸಣ್ಣ ರಾಷ್ಟ್ರಗಳು ಸೋತು ಕೈಚೆಲ್ಲಿ ನಿಂತಿದ್ದಾರೆ. ಹಾಲೆಂಡ್, ಸ್ವಿಟ್ಜರ್ಲೆಂಡ್ ಸೇರಿದಂತೆ ಇನ್ನು ಕೆಲ ದೇಶಗಳು ಏನಾದರು ಆಗಲಿ ಎಂಬಂತೆ ಡ್ರಗ್ಸ್ ಮಟ್ಟ ಹಾಕುವುದನ್ನು ನಿಲ್ಲಿಸಿ ಸೋಲನ್ನು ಒಪ್ಪಿಕೊಂಡಿದ್ದಾರೆ. ಕೆಲ ದೇಶಗಳು ಮಾದಕ ವಸ್ತುಗಳನ್ನು ಯಾವುದೇ ಕಾರಣಕ್ಕೂ ಜನರ ಕೈಗೆ ಸಿಗಬಾರದು ಎಂಬ ನಿಟ್ಟಿನಲ್ಲಿ ಯುದ್ಧ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಅದೇ ಮಾದರಿಯಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಇತಿಹಾಸ, ಪುರಾಣಗಳನ್ನು ತೆಗೆದುನೋಡಿದರೆ ಮಾದಕವಸ್ತುಗಳ ಬಗ್ಗೆ ಉಲ್ಲೇಖವಿದೆ. ಆದರೆ, ಪ್ರಸ್ತುತ ಸಮಾಜಕ್ಕೆ ಮಾರಕವಾಗಿದೆ. ನಾನು ಕ್ರೀಡಾಪಟು ಆಗಿರುವ ಹಿನ್ನೆಲೆಯಲ್ಲಿ ನನ್ನ ಜೀವನದಲ್ಲಿ ಈವರೆಗೂ ಸಿಗರೇಟ್ ಕೂಡ ಸೇವಿಸಿಲ್ಲ. ಅಂತಹ ಪ್ರಯತ್ನವನ್ನು ಸಹ ಮಾಡಿಲ್ಲ. ಮಾದಕವಸ್ತು ಗಂಭೀರವಾಗಿರುವ ವಿಚಾರ. ಮಾನಸಿಕ ತೊಂದರೆ ಜೊತೆಗೆ ಪ್ರಾಣವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಾರೆ. ಹೀಗೆ ಬಿಟ್ಟರೆ ಬಹಳಷ್ಟು ತೊಂದರೆಯನ್ನು ಸಮಾಜ ಅನುಭವಿಸುತ್ತದೆ ಎಂದರು.

ಕೆಲವರು ಇದನ್ನು ಹಣ ಗಳಿಸುವ ಉದ್ದೇಶದಿಂದ ಮಾಡುತ್ತಿದ್ದಾರೆ. ಆದರೆ ಇದರಿಂದ ಯುವಸಮುದಾಯ ಹಾನಿಗೊಳಗಾಗುತ್ತಿರುವುದನ್ನು ಮರೆಯುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಮಾದಕವಸ್ತು ಚಟ ಅಂಟಿಸುವ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ಮಾದಕವ್ಯಸನ ಮುಕ್ತ ಕರ್ನಾಟಕವನ್ನು ಸರ್ಕಾರ ಘೋಷಿಸಿದರೆ ಸಾಲುವುದಿಲ್ಲ. ಕೆಳಹಂತದಲ್ಲಿ ಅದನ್ನು ಅನುಷ್ಟಾನಗೊಳಿಸುವುದು ಮುಖ್ಯ. ಈ ಹಿಂದೆ ಉಡ್ತಾ ಬೆಂಗಳೂರು ಆಗಬಾರದು ಎಂದು ಮಾಧ್ಯಮಗಳು ಎಚ್ಚರಿಕೆ ನೀಡಿದ್ದವು. ಶಾಲಾ-ಕಾಲೇಜುಗಳಲ್ಲಿ ಚಾಕ್ಲೆಟ್‍ಗಳಲ್ಲಿ ಬೆರೆಸಿ ಮಾದಕವಸ್ತುಗಳ ಮಾರಾಟ ಕಂಡುಬರುತ್ತಿದೆ. ಇಂತಹ ಮಾಫಿಯಾಗಳ ವಿರುದ್ಧ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದರು.

ಡ್ರಗ್ಸ್ ಪರೀಕ್ಷೆ ಕಿಟ ಒದಗಿಸಲಾಗುತ್ತಿದೆ. ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಕಾನೂನನ್ನು ಮತ್ತಷ್ಟು ಬಲಗೊಳಿಸಲಾಗಿದ್ದು, ಮಾದಕ ವಸ್ತು ಸಾಗಾಣಿಕೆ, ಮಾರಾಟ, ಬಳಕೆಯಲ್ಲಿ ಸಿಲುಕಿ ಬಿದ್ದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 42.15 ಕೋಟಿ ರೂ. ಮೌಲ್ಯದ ಮಾದಕ ವಸ್ತು ನಾಶ

2023ಕ್ಕೆ 6,664 ಪ್ರಕರಣಗಳಲ್ಲಿ 9,645 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 233 ಕೆಜಿ ಸಿಂಥೆಟಿಕ್ ಡ್ರಗ್ಸ್ ಹಾಗೂ 7400 ಕೆಜಿ ಕಚ್ಛಾ ಮಾದಕ ವಸ್ತು ಸೇರಿ 128 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಒಂದು ವರ್ಷದಲ್ಲಿ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕೇಂದ್ರ ವಲಯ ಐಜಿಪಿ ಡಾ. ಬಿ.ಆರ್.ರವಿಕಾಂತೇಗೌಡ, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ, ಎಡಿಜಿಪಿ (ಕ್ರೈಮ) ಉಮೇಶ್, ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ, ದಕ್ಷಿಣ ವಲಯ ಐಜಿಪಿ ಅಮಿತ್ ಸಿಂಗ್, ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹಾಗೂ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದರು.

RELATED ARTICLES

Latest News